
ಪರಪ್ಪನ ಅಗ್ರಹಾರ ಜೈಲಿನಲ್ಲಿ 4 ಮೊಬೈಲ್ ಹಾಗೂ 7 ಸಿಮ್ ಕಾರ್ಡ್‌ಗಳ ಜಪ್ತಿಯಾಗಿದೆ.
ಬೆಂಗಳೂರು ಜೈಲಿನಲ್ಲಿ ಮತ್ತೆ ಮೊಬೈಲ್ ಸದ್ದು; ನಾಲ್ವರು ಕೈದಿಗಳ ಮೇಲೆ ಎಫ್‌ಐಆರ್
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಅಧಿಕಾರಿಗಳ ದಿಢೀರ್ ದಾಳಿ. 4 ಮೊಬೈಲ್, 7 ಸಿಮ್ ಕಾರ್ಡ್‌ಗಳ ಜಪ್ತಿ. ಮುಸ್ತಫಾ, ಸಲ್ಮಾನ್ ಸೇರಿ ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲು.
ಸಿಲಿಕಾನ್ ಸಿಟಿಯ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತಿಲ್ಲ. ಜೈಲಿನ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯ ವೇಳೆ ಕೈದಿಗಳ ಬಳಿ ಮತ್ತೆ ನಿಷೇಧಿತ ಮೊಬೈಲ್ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳು ಪತ್ತೆಯಾಗುವ ಮೂಲಕ ಜೈಲಿನ ಭದ್ರತಾ ವೈಫಲ್ಯ ಮತ್ತೊಮ್ಮೆ ಬಹಿರಂಗಗೊಂಡಿದೆ.
ಕಳೆದ ಶುಕ್ರವಾರ ಮಧ್ಯಾಹ್ನ ಜೈಲಿನ ಹೈ-ಸೆಕ್ಯೂರಿಟಿ ವಿಭಾಗದಲ್ಲಿ ಕಾರಾಗೃಹದ ಹಿರಿಯ ಅಧಿಕಾರಿಗಳು ಆಕಸ್ಮಿಕ ತಪಾಸಣೆ ನಡೆಸಿದ್ದರು. ಈ ವೇಳೆ ವಿಚಾರಣಾಧೀನ ಕೈದಿಗಳಾದ ಮುಸ್ತಫಾ, ಅಬುಬಕರ್ ರೆಹಮಾನ್, ಸಲ್ಮಾನ್ ಮತ್ತು ಫಜಲ್ ಎಂಬುವವರ ಬಳಿ ಒಟ್ಟು 4 ಮೊಬೈಲ್ ಫೋನ್‌ಗಳು ಹಾಗೂ 7 ಸಕ್ರಿಯ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಜೊತೆಗೆ ಮೊಬೈಲ್ ಚಾರ್ಜರ್‌ಗಳು ಮತ್ತು ಇಯರ್‌ಫೋನ್‌ಗಳು ಸಹ ಪತ್ತೆಯಾಗಿದ್ದು, ಅಧಿಕಾರಿಗಳು ಇವುಗಳನ್ನು ಜಪ್ತಿ ಮಾಡಿದ್ದಾರೆ.
ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಪ್ರಭಾರ ಅಧೀಕ್ಷಕ ಬಿ.ಆರ್. ಅಧನಿ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೈಲಿನೊಳಗೆ ಕಟ್ಟುನಿಟ್ಟಿನ ತಪಾಸಣೆ ಹಾಗೂ ಜಾಮರ್ ವ್ಯವಸ್ಥೆಗಳಿದ್ದರೂ ಸಹ, ಕೈದಿಗಳ ಕೈಗೆ ಈ ಎಲೆಕ್ಟ್ರಾನಿಕ್ ಉಪಕರಣಗಳು ಹೇಗೆ ತಲುಪುತ್ತಿವೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಸದ್ಯ ಪೊಲೀಸರು ಕರ್ನಾಟಕ ಕಾರಾಗೃಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಕೈದಿಗಳಿಗೆ ಈ ಮೊಬೈಲ್ ತಲುಪಿಸಲು ಸಹಕರಿಸಿದವರು ಯಾರು ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರಣಿ ದಾಳಿಗಳು ನಡೆಯುತ್ತಿದ್ದರೂ ಜೈಲಿನಲ್ಲಿ ಅಕ್ರಮ ಮೊಬೈಲ್ ಬಳಕೆ ಮುಂದುವರಿಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
10ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆ
ಈ ಹಿಂದೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ವಿರುದ್ಧವೇ ಗಂಭೀರ ಆರೋಪ ಮಾಡಿ ಕೈದಿಗಳು ವಿಡಿಯೋ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ತೀವ್ರ ಶೋಧ ಕಾರ್ಯದ ವೇಳೆ ಬ್ಯಾರಕ್‌ಗಳಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆಯಾಗಿವೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೈದಿಗಳಾದ ಇನಾಕ್ ಜಾಯ್, ವೋಕು ಆರೆಂಜಿ ಪ್ಯಾಟ್ರಿಕ್, ಕೋರಿಲ್ ಡೇನಿಯಲ್ ಮತ್ತು ಥಾಮಸ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು.
ಐಷಾರಾಮಿ ಸೌಲಭ್ಯಗಳ ವಿಡಿಯೋ ವೈರಲ್
ಇತ್ತೀಚೆಗಷ್ಟೇ ಜೈಲಿನೊಳಗೆ ಟಿವಿ, ಮೊಬೈಲ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಐಷಾರಾಮಿ ಸೌಲಭ್ಯಗಳು ಸಿಗುತ್ತಿವೆ ಎಂದು ಬಿಂಬಿಸುವ ವಿಡಿಯೋವನ್ನು ಕೈದಿಗಳೇ ಸೆರೆಹಿಡಿದು ವೈರಲ್ ಮಾಡಿದ್ದರು. ಈ ವಿಡಿಯೋ ಮಾಡಿದ ಕೈದಿಗಳನ್ನು ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಜೈಲಿನೊಳಗೆ ಹತ್ತಾರು ಶಿಸ್ತು ಕ್ರಮಗಳನ್ನು ಕೈಗೊಂಡಿದ್ದರೂ, ಕೈದಿಗಳ ದರ್ಪಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

