
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್; ವಾರದಲ್ಲಿ 2 ದಿನ ಬೆಂಗಳೂರು-ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ನೂತನ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ SMVT ನಿಲ್ದಾಣದಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ (LTT) ನಡುವೆ ವಾರದಲ್ಲಿ ಎರಡು ದಿನ ಸಂಚರಿಸಲಿದೆ. ಮೇ 19 ರಿಂದ ಇದರ ನಿಯಮಿತ ಸೇವೆ ಆರಂಭವಾಗಲಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ದೇಶದ ವಾಣಿಜ್ಯ ನಗರಿ ಮುಂಬೈ ನಡುವೆ ಎಕ್ಸ್ ಪ್ರೆಸ್ ರೈಲು ಬೇಕೆಂಬ ಸಾರ್ವಜನಿಕರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ.
ಬೆಂಗಳೂರು-ಮುಂಬೈ ನಡುವಿನ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಹಾಗೂ ಸುಲಭ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಘೋಷಿಸಿದ್ದ ನೂತನ ದ್ವಿ-ಸಾಪ್ತಾಹಿಕ (ವಾರಕ್ಕೆ ಎರಡು ದಿನ) ಎಕ್ಸ್‌ಪ್ರೆಸ್ ರೈಲಿಗೆ ಭಾನುವಾರ (ಮೇ 17) ಚಾಲನೆ ನೀಡಲಾಗಿದೆ.
ಬೈಯ್ಯಪ್ಪನಹಳ್ಳಿ ಬಳಿಯ ಅತ್ಯಾಧುನಿಕ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ರೈಲ್ವೇ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ಚೆ ಸಚಿವ ಅಶ್ವಿನಿ ವೈಷ್ಣವ್ ಅವರು ವರ್ಚುವಲ್ ಮೂಲಕ ರೈಲು ಸೇವೆಗೆ ಚಾಲನೆ ನೀಡಿದರು. ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹಾಗೂ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದು, ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು.
ಮೆಟ್ರೋದಲ್ಲಿ ಕಾರ್ಯಕ್ರಮಕ್ಕೆ ಬಂದ ಸೋಮಣ್ಣ
ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮೆಟ್ರೋ ರೈಲಿನಲ್ಲಿ ಆಗಮಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ‘ಪೆಟ್ರೋಲ್ ಮಿತ ಬಳಕೆ’ ಹಾಗೂ ‘ಚಿನ್ನದ ಮೇಲಿನ ಹೂಡಿಕೆಗಿಂತ ಉಳಿತಾಯಕ್ಕೆ ಆದ್ಯತೆ’ ನೀಡುವ ಕರೆಗೆ ಓಗೊಟ್ಟ ಸಚಿವರು, ಕಾರ್ಯಕ್ರಮಕ್ಕೆ ಬರಲು ತಮ್ಮ ಐಷಾರಾಮಿ ಸರ್ಕಾರಿ ವಾಹನವನ್ನು ಬಳಸಲಿಲ್ಲ!
ಬದಲಾಗಿ, ಸಂಸದ ಪಿ.ಸಿ. ಮೋಹನ್ ಅವರೊಂದಿಗೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದವರೆಗೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣಿಸಿದರು. ಅಲ್ಲಿಂದ ಇಳಿದು SMVT ರೈಲು ನಿಲ್ದಾಣದವರೆಗೆ ಪರಿಸರಸ್ನೇಹಿ ‘ಎಲೆಕ್ಟ್ರಿಕ್ ಬೈಕ್’ (E-Bike) ಚಲಾಯಿಸಿಕೊಂಡು ಬರುವ ಮೂಲಕ ಸಾರ್ವಜನಿಕರಲ್ಲಿ ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
ರೈಲಿನ ವೇಳಾಪಟ್ಟಿ ಮತ್ತು ಮಾರ್ಗದ ವಿವರ
ನೂತನ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ SMVT ನಿಲ್ದಾಣದಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ (LTT) ನಡುವೆ ವಾರದಲ್ಲಿ ಎರಡು ದಿನ ಸಂಚರಿಸಲಿದೆ. ಮೇ 19 ರಿಂದ ಇದರ ನಿಯಮಿತ ಸೇವೆ ಆರಂಭವಾಗಲಿದೆ.
ಬೆಂಗಳೂರಿನಿಂದ ಮುಂಬೈಗೆ (SMVT to LTT): ಪ್ರತಿ ಶನಿವಾರ ಮತ್ತು ಮಂಗಳವಾರದಂದು ಬೆಂಗಳೂರಿನಿಂದ ಹೊರಡಲಿದೆ.
ಮುಂಬೈನಿಂದ ಬೆಂಗಳೂರಿಗೆ (LTT to SMVT): ಪ್ರತಿ ಭಾನುವಾರ ಮತ್ತು ಬುಧವಾರದಂದು ಮುಂಬೈನಿಂದ ಹೊರಡಲಿದೆ. ಈ ರೈಲು ತುಮಕೂರು, ದಾವಣಗೆರೆ, ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್ ಮತ್ತು ಠಾಣೆ ನಗರಗಳ ಮೂಲಕ ಸಾಗಲಿದ್ದು, ಉಭಯ ರಾಜ್ಯಗಳ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಿಗಳಿಗೆ ವರದಾನವಾಗಲಿದೆ.
ಒಟ್ಟು 17 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಎಲ್ಲಾ ವರ್ಗದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಎಕ್ಸ್ ಪ್ರೆಸ್ ರೈಲಿಗೆ ಏಕೆ ಬೇಡಿಕೆ?
ಬೆಂಗಳೂರು ಮತ್ತು ಮುಂಬೈ ನಡುವೆ ಪ್ರತಿನಿತ್ಯ ಸಾವಿರಾರು ಜನ ಉದ್ಯೋಗ, ಐಟಿ ಉದ್ಯಮ ಹಾಗೂ ವ್ಯಾಪಾರ ನಿಮಿತ್ತ ಪ್ರಯಾಣಿಸುತ್ತಾರೆ. ಪ್ರಸ್ತುತ ಉದ್ಯಾನ್ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳಲ್ಲಿ ತಿಂಗಳುಗಳ ಮುಂಚಿತವಾಗಿಯೇ ಟಿಕೆಟ್‌ಗಳು ವೇಟಿಂಗ್ ಲಿಸ್ಟ್ ಸೇರುತ್ತಿದ್ದವು. ಉತ್ತರ ಕರ್ನಾಟಕದ (ಹುಬ್ಬಳ್ಳಿ, ಬೆಳಗಾವಿ) ಜನರಿಗೂ ಮುಂಬೈ ತಲುಪಲು ನೇರ ರೈಲುಗಳ ಕೊರತೆಯಿತ್ತು. ಹೊಸ ಎಕ್ಸ್ ಪ್ರೆಸ್ ರೈಲು ನೀಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದರು. ಅದರಂತೆ ಕೇಂದ್ರ ಬಜೆಟ್ ನಲ್ಲಿ ಹೊಸ ಎಕ್ಸ್ ಪ್ರೆಸ್ ರೈಲು ಘೋಷಿಸಲಾಗಿತ್ತು.

