ಪಿಂಕ್‌ ಲೈನ್‌ ಮೆಟ್ರೋ: ಹೊಸ BEML ರೈಲುಗಳಿಗೆ ರೈಲ್ವೆ ಮಂಡಳಿಯಿಂದ ತಾತ್ಕಾಲಿಕ ಅನುಮೋದನೆ
x

ಪಿಂಕ್‌ ಲೈನ್‌ ಮೆಟ್ರೋ: ಹೊಸ BEML ರೈಲುಗಳಿಗೆ ರೈಲ್ವೆ ಮಂಡಳಿಯಿಂದ ತಾತ್ಕಾಲಿಕ ಅನುಮೋದನೆ

ಸೆಪ್ಟೆಂಬರ್ ಅಂತ್ಯದೊಳಗೆ ಸಿಎಂಆರ್‌ಎಸ್‌ ತಂಡವು ಈ ಮಾರ್ಗದಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆಯಿದ್ದು, ತಪಾಸಣೆ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಪ್ರಯಾಣಿಕರ ಸೇವೆಗೆ ಮುಕ್ತವಾಗಲಿದೆ.


ಸಿಲಿಕಾನ್ ಸಿಟಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿರುವ ‘ನಮ್ಮ ಮೆಟ್ರೋ’ದ ಬಹುನಿರೀಕ್ಷಿತ ಗುಲಾಬಿ ಮಾರ್ಗ ಆರಂಭಕ್ಕೆ ಕಾಲ ಕೂಡಿಬಂದಿದೆ. ಈ ಮಾರ್ಗದಲ್ಲಿ ಸಂಚರಿಸಲಿರುವ ಹೊಸ ರೈಲುಗಳ ಕಾರ್ಯಾಚರಣೆಗೆ ರೈಲ್ವೆ ಮಂಡಳಿಯು ತಾತ್ಕಾಲಿಕ ಅನುಮೋದನೆ ನೀಡಿದೆ. ಇದರಿಂದಾಗಿ ಎಲಿವೇಟೆಡ್ ಮಾರ್ಗದಲ್ಲಿ ಕೆಲವೇ ವಾರಗಳಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.

ರೈಲ್ವೆ ಮಂಡಳಿಯಿಂದ ದೊರೆತಿರುವ ಈ ಮಹತ್ವದ ಅನುಮೋದನಾ ಪತ್ರವನ್ನು, ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ ಸಲ್ಲಿಸಬೇಕಿರುವ ಅಧಿಕೃತ ದಾಖಲೆಗಳೊಂದಿಗೆ ಲಗತ್ತಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಹಿತಿ ಹಂಚಿಕೊಂಡಿದೆ.

ಸೆಪ್ಟೆಂಬರ್ ಅಂತ್ಯದೊಳಗೆ ಸಿಎಂಆರ್‌ಎಸ್‌ ತಂಡವು ಈ ಮಾರ್ಗದಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆಯಿದ್ದು, ತಪಾಸಣೆ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಪ್ರಯಾಣಿಕರ ಸೇವೆಗೆ ಮುಕ್ತವಾಗಲಿದೆ.

80 ಕಿ.ಮೀ. ವೇಗ ನಿಗದಿ

ಬಿಎಂಆರ್‌ಸಿಎಲ್‌ಗೆ ಕಳುಹಿಸಿರುವ ಅಧಿಕೃತ ಆದೇಶದಲ್ಲಿ ರೈಲ್ವೆ ಮಂಡಳಿಯು ಕೆಲವು ಕಟ್ಟುನಿಟ್ಟಾದ ವೇಗ ಮಿತಿ ಹಾಗೂ ಮಾರ್ಗಸೂಚಿಗಳನ್ನು ವಿಧಿಸಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಒಟ್ಟು 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಗರಿಷ್ಠ 80 ಕಿ.ಮೀ ವೇಗದಲ್ಲಿ ಸಂಚರಿಸಬಹುದು.

ಏರ್ ಸಸ್ಪೆನ್ಷನ್ ವ್ಯವಸ್ಥೆಯ ಸೆಕೆಂಡರಿ ಹಂತವು ಡಿಫ್ಲೇಟ್ ಆಗಿರುವ ತುರ್ತು ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿಯನ್ನು 49 ಕಿ.ಮೀಗೆ ಕಡಿತಗೊಳಿಸಬೇಕು ಎಂದು ರೈಲ್ವೆ ಮಂಡಳಿ ಸೂಚಿಸಿದೆ.‌ ಸದ್ಯ ರೈಲುಗಳ ಸಂಚಾರವನ್ನು ಗ್ರೇಡ್ ಆಫ್ ಆಟೊಮೇಷನ್ -2 (GoA2) ಹಂತಕ್ಕೆ ಮಾತ್ರ ರೈಲ್ವೆ ಮಂಡಳಿ ಸೀಮಿತಗೊಳಿಸಿದೆ. ಇದು ಅರೆ ಸ್ವಯಂಚಾಲಿತ ರೈಲು ನಿಯಂತ್ರಣ ವ್ಯವಸ್ಥೆಯಾಗಿದೆ.

ಭವಿಷ್ಯದಲ್ಲಿ ಹೆಚ್ಚಿನ ಹಂತದ ಆಟೊಮೇಷನ್ ಅಡಿ ಚಾಲಕರಹಿತ ರೈಲುಗಳನ್ನು ಓಡಿಸಲು 'ಅನ್ಅಟೆಂಡೆಡ್ ಟ್ರೈನ್ ಮ್ಯಾನೇಜ್‌ಮೆಂಟ್ ಸಿಸ್ಟಂ'ನ ಸಂಪೂರ್ಣ ಸಾಮರ್ಥ್ಯ ಪರೀಕ್ಷೆ ನಡೆಸಿದ ಬಳಿಕ ಪ್ರತ್ಯೇಕ ಅನುಮೋದನೆ ಪಡೆಯಬೇಕು. ಮೂರನೇ ವ್ಯಕ್ತಿ ಅಥವಾ ISA ಮೂಲಕ ಸುರಕ್ಷತಾ ಮೌಲ್ಯಮಾಪನ ಕಡ್ಡಾಯಗೊಳಿಸಲಾಗಿದೆ.

ಪ್ರಯಾಣಿಕರ ಸೇವೆಗೆ ಗ್ರೀನ್ ಸಿಗ್ನಲ್ ನಿರೀಕ್ಷೆ

CMRS ಅನುಮೋದನೆ ಲಭಿಸಿದ ತಕ್ಷಣ, ರಾಜ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟು ಯಾವುದೇ ದಿನದಿಂದಲೂ ವಾಣಿಜ್ಯ ಸೇವೆ ಆರಂಭಿಸಲು ಸಂಪೂರ್ಣ ಸಿದ್ಧವಾಗಿರುವುದಾಗಿ ಬಿಎಂಆರ್ಸಿಎಲ್ ತಿಳಿಸಿದೆ.

ಈ ಎಲಿವೇಟೆಡ್ ಮಾರ್ಗದ ಆರಂಭದೊಂದಿಗೆ ಬೆಂಗಳೂರು ಮೆಟ್ರೋ ಜಾಲವು ಮತ್ತಷ್ಟು ವಿಸ್ತರಿಸಲಿದೆ. ಇದರಿಂದ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆ ಭಾಗದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.

Read More
Next Story