
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾರ್ಮಿಕರು ಊರಿಗೆ ತೆರಳಿರುವ ಕಾರಣ, ಮುಂದಿನ ಹಂತದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ನಮ್ಮ ಮೆಟ್ರೊ ಬ್ಲೂ ಲೈನ್ ಆರಂಭಿಕ ತಾಂತ್ರಿಕ ಪರೀಕ್ಷೆ ಯಶಸ್ವಿ: ದೀಪಾವಳಿ ಬಳಿಕ ಮುಖ್ಯ ಮಾರ್ಗದಲ್ಲಿ ಟ್ರಯಲ್ ರನ್
ಈ ಬ್ಲೂ ಲೈನ್ ಒಟ್ಟು 58.19 ಕಿಲೋಮೀಟರ್ ಉದ್ದದ ಮಾರ್ಗವನ್ನು ಹೊಂದಿದೆ. ಇದರಲ್ಲಿ ಕೆ.ಆರ್. ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ 19.75 ಕಿಲೋಮೀಟರ್ ಮಾರ್ಗ ಹಾಗೂ ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 38.44 ಕಿಲೋಮೀಟರ್ ಮಾರ್ಗ ಸೇರಿದೆ.
ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೊ ಬ್ಲೂ ಲೈನ್ (ವಿಮಾನ ನಿಲ್ದಾಣ ಮಾರ್ಗ) ಕಾಮಗಾರಿಯಲ್ಲಿ ಮತ್ತೊಂದು ಪ್ರಮುಖ ಘಟ್ಟ ಎದುರಾಗಿದೆ. ಕೆ.ಆರ್. ಪುರಂನ ಬೈಯಪ್ಪನಹಳ್ಳಿ ಡಿಪೋದಲ್ಲಿರುವ ಪರೀಕ್ಷಾ ಹಳಿಯಲ್ಲಿ ಬ್ಲೂ ಲೈನ್‌ನ ಚಾಲಕರಹಿತ ರೈಲಿನ ಆರಂಭಿಕ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಪ್ರಾಥಮಿಕ ಪರೀಕ್ಷೆಯ ವೇಳೆ ರೈಲಿಗೆ ವಿದ್ಯುತ್ ಪೂರೈಕೆ ಮತ್ತು ಸಂಬಂಧಿತ ವ್ಯವಸ್ಥೆಗಳು, ರೋಲಿಂಗ್ ಸ್ಟಾಕ್‌ನ ತಾಂತ್ರಿಕ ಸಿದ್ಧತೆ ಹಾಗೂ ಹಳಿಯಲ್ಲಿ ಎದುರಾಗಬಹುದಾದ ಅಡೆತಡೆಗಳ ಕುರಿತು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.
ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾರ್ಮಿಕರು ಊರಿಗೆ ತೆರಳಿರುವ ಕಾರಣ, ಮುಂದಿನ ಹಂತದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕಾರ್ಮಿಕರು ಕರ್ತವ್ಯಕ್ಕೆ ಮರಳಿದ ಬಳಿಕ, ಅಂದರೆ ಮುಂದಿನ ವಾರದಿಂದ ಮುಖ್ಯ ಮೆಟ್ರೊ ಮಾರ್ಗದಲ್ಲಿಯೇ ಟ್ರಯಲ್ ರನ್ ಪುನರಾರಂಭವಾಗುವ ನಿರೀಕ್ಷೆಯಿದೆ. ಸದ್ಯ ನಡೆದಿರುವುದು ಕೇವಲ ಆರಂಭಿಕ ತಾಂತ್ರಿಕ ಪರೀಕ್ಷೆಯಾಗಿದ್ದು, ಇದನ್ನೇ ಮೆಟ್ರೊ ಸೇವೆ ಆರಂಭ ಎಂದು ಪರಿಗಣಿಸುವಂತಿಲ್ಲ. ಮುಖ್ಯ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ, ಸಿಗ್ನಲಿಂಗ್ ವ್ಯವಸ್ಥೆಯ ಸಮನ್ವಯ, ಸುರಕ್ಷತಾ ಪರಿಶೀಲನೆ ಹಾಗೂ ಅಗತ್ಯ ಅನುಮತಿಗಳನ್ನು ಪಡೆದ ಬಳಿಕವಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
58.19 ಕಿಲೋಮೀಟರ್ ಉದ್ದದ ಬ್ಲೂ ಲೈನ್ ಮಾರ್ಗ
ನಮ್ಮ ಮೆಟ್ರೊ ಯೋಜನೆಯ 2ಎ ಮತ್ತು 2ಬಿ ಹಂತದಡಿ ನಿರ್ಮಾಣವಾಗುತ್ತಿರುವ ಈ ಮಾರ್ಗಕ್ಕಾಗಿ ಬಿಇಎಂಎಲ್ (BEML) ಸಂಸ್ಥೆಯು ಚಾಲಕರಹಿತ ರೈಲುಗಳನ್ನು ತಯಾರಿಸಿ ಪೂರೈಸಿದೆ. ಈ ಬ್ಲೂ ಲೈನ್ ಒಟ್ಟು 58.19 ಕಿಲೋಮೀಟರ್ ಉದ್ದದ ಮಾರ್ಗವನ್ನು ಹೊಂದಿದೆ. ಇದರಲ್ಲಿ ಕೆ.ಆರ್. ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ 19.75 ಕಿಲೋಮೀಟರ್ ಮಾರ್ಗ ಹಾಗೂ ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 38.44 ಕಿಲೋಮೀಟರ್ ಮಾರ್ಗ ಸೇರಿದೆ.

