Bangalore Lakes| ಕೆರೆಗಳ ಅವ್ಯವಸ್ಥೆ ಕಂಡು ಲೋಕಾಯುಕ್ತ ಗರಂ: ಅಧಿಕಾರಿಗಳ ವಿರುದ್ಧ ಕಿಡಿ
x

Bangalore Lakes| ಕೆರೆಗಳ ಅವ್ಯವಸ್ಥೆ ಕಂಡು ಲೋಕಾಯುಕ್ತ ಗರಂ: ಅಧಿಕಾರಿಗಳ ವಿರುದ್ಧ ಕಿಡಿ

ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್, ಉಪಲೋಕಾಯುಕ್ತರಾದ ನ್ಯಾ. ಕೆ.ಎನ್. ಫಣೀಂದ್ರ, ನ್ಯಾ. ಬಿ. ವೀರಪ್ಪ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.


Click the Play button to hear this message in audio format

ಬೆಂಗಳೂರಿನ ಕೆರೆಗಳ ಸಂರಕ್ಷಣೆ ಮತ್ತು ತ್ಯಾಜ್ಯ ವಿಲೇವಾರಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಲೋಕಾಯುಕ್ತ ಸಂಸ್ಥೆಯು ನೇರವಾಗಿ ಅಖಾಡಕ್ಕಿಳಿದಿದ್ದು, ನಗರದ ವಿವಿಧ ಕೆರೆಗಳು ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕಂಡುಬರುತ್ತಿರುವ ಅವ್ಯವಸ್ಥೆಯ ಕುರಿತು ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಜಂಟಿಯಾಗಿ ನಗರದ ವಿವಿಧೆಡೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್, ಉಪಲೋಕಾಯುಕ್ತರಾದ ನ್ಯಾ. ಕೆ.ಎನ್. ಫಣೀಂದ್ರ ಮತ್ತು ನ್ಯಾ. ಬಿ. ವೀರಪ್ಪ ಅವರು ಸೋಂಪುರ, ನರಸಪ್ಪನಹಳ್ಳಿ ಮತ್ತು ಕಗ್ಗದಾಸಪುರ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಬನಶಂಕರಿ 6ನೇ ಹಂತದಲ್ಲಿರುವ ಸೋಂಪುರ ಕೆರೆಯ ತಪಾಸಣೆ ನಡೆಸಿದ ನ್ಯಾ. ಬಿ.ಎಸ್. ಪಾಟೀಲ್, ಕೆರೆಗೆ ನೇರವಾಗಿ ಹರಿಯುತ್ತಿರುವ ಕೊಳಚೆ ನೀರಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರೊಂದಿಗೆ ಚರ್ಚಿಸಿದರು. ಅಲ್ಲಿ ನಡೆಯುತ್ತಿರುವ ಐಎಸ್‌ಪಿಎಸ್‌ ( ಒಳಚರಂಡಿ ಪಂಪಿಂಗ್ ಸ್ಟೇಷನ್) ಕಾಮಗಾರಿಯನ್ನು ಪರಾಮರ್ಶಿಸಿದರು.

ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ಮಾಹಿತಿ ನೀಡಿ, ಐ.ಎಸ್.ಪಿ.ಎಸ್. ನಿರ್ಮಾಣದ ನಂತರ ಕೆರೆಗೆ ಕೊಳಚೆ ನೀರು ಹರಿಯುವುದು ಸಂಪೂರ್ಣವಾಗಿ ನಿಲ್ಲುತ್ತದೆ. ಈ ನೀರನ್ನು ಪಂಪ್ ಮಾಡಿ ಸಮೀಪದ ಎಸ್‌ಟಿಪಿಗೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತರು, ಕಾಮಗಾರಿಯಲ್ಲಿ ಯಾವುದೇ ವಿಳಂಬವಾಗಬಾರದು ಮತ್ತು ಕಾಲಕಾಲಕ್ಕೆ ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಅಲ್ಲದೆ, ಕೆರೆಯ ಒಳಭಾಗಕ್ಕೆ ಫೆನ್ಸಿಂಗ್ ಮಾಡುವಂತೆ ಬಿಡಿಎ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ಲಿಂಗಧೀರನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿ ಕಂಡು ಲೋಕಾಯುಕ್ತರು ಆಘಾತಕ್ಕೊಳಗಾದರು. ಘಟಕದಿಂದ ಹರಡುತ್ತಿರುವ ವಿಪರೀತ ದುರ್ವಾಸನೆ ಮತ್ತು ನೊಣಗಳ ಕಾಟದಿಂದ ಸ್ಥಳೀಯ ನಿವಾಸಿಗಳು ನರಕಯಾತನೆ ಅನುಭವಿಸುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಡೆಯಬೇಕು. ಸುಪ್ರೀಂ ಕೋರ್ಟ್ ಮತ್ತು ಎನ್‌ಜಿಟಿ ನೀಡಿರುವ ಮಾರ್ಗಸೂಚಿಗಳನ್ನು ಇಲ್ಲಿ ಪಾಲಿಸಲಾಗುತ್ತಿಲ್ಲವೇಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಲು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಮೂರು ದಿನಗಳ ಒಳಗಾಗಿ ವರದಿ ಸಲ್ಲಿಸಲು ಮುಖ್ಯ ಇಂಜಿನಿಯರ್‌ಗಳಿಗೆ ಆದೇಶಿಸಿದರು.

ಕಗ್ಗದಾಸಪುರ ಕರೆಗೆ ಭೇಟಿ

ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಅವರು ಸಿ.ವಿ. ರಾಮನ್ ನಗರದ ಕಗ್ಗದಾಸಪುರ ಕೆರೆಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆರೆಯ ಹೂಳು ಎತ್ತಲು ಸುಮಾರು 3 ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ, ವಾಸ್ತವದಲ್ಲಿ ಕೆರೆ ತುಂಬೆಲ್ಲಾ ಗಿಡಗಂಟೆಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿರುವುದನ್ನು ಕಂಡು ಉಪಲೋಕಾಯುಕ್ತರು ಕೋಪಗೊಂಡರು.

ಅಲ್ಲದೆ, ಕೆರೆಯ ಸುತ್ತಲೂ ಇರಬೇಕಾದ ಬಫರ್ ಜೋನ್ ಸಂಪೂರ್ಣವಾಗಿ ನಾಪತ್ತೆಯಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಬಫರ್ ಜೋನ್ ವ್ಯಾಪ್ತಿಯಲ್ಲೇ ಹೊಸ ಎಸ್‌ಟಿಪಿ ಘಟಕವನ್ನು ನಿರ್ಮಿಸಲಾಗುತ್ತಿದೆ. ಕೆರೆಯ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸ್ವಂತ ಎಸ್‌ಟಿಪಿ ಅಳವಡಿಸಿಕೊಳ್ಳದಿರುವುದು ಮತ್ತು ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ವಾಸನೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದರು. ಆಸ್ಟಿನ್ ಟೌನ್ ಬಳಿಯ ಕೆ.ಎಸ್‌ಆರ್‌ಟಿಸಿ ಮತ್ತು ಪೊಲೀಸ್ ಕ್ವಾರ್ಟರ್ಸ್ ಸಮೀಪದ ರಾಜಕಾಲುವೆಗಳು ಕಸ ಕಡ್ಡಿಗಳಿಂದ ತುಂಬಿ ಹೋಗಿದ್ದು, ಮಳೆನೀರು ಸರಾಗವಾಗಿ ಹರಿಯದಂತೆ ಅಡ್ಡಿಯಾಗಿವೆ. ಕೊರಮಂಗಲದ ಎನ್‌ಜಿವಿ ಮತ್ತು ನ್ಯಾಯಾಂಗ ಅಧಿಕಾರಿಗಳ ಕ್ವಾರ್ಟರ್ಸ್ ಆವರಣದಲ್ಲಿರುವ ರಾಜಕಾಲುವೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿ ಗಿಡಗಂಟೆಗಳು ಮತ್ತು ಕಡಿದ ಮರದ ದಿಮ್ಮಿಗಳು ಕಾಲುವೆಯಲ್ಲಿ ಬಿದ್ದಿರುವುದರಿಂದ ನೀರು ನಿಂತು ಸೊಳ್ಳೆ ಹಾಗೂ ನೊಣಗಳ ಕಾಟ ಹೆಚ್ಚಾಗಿದೆ. ಇದು ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ರಸ್ತೆ ಬದಿಯಲ್ಲೇ ಕಸದ ಸಾಮ್ರಾಜ್ಯ..!

ಮಲ್ಲೇಶ್‌ಪಾಳ್ಯ, ತಿಪ್ಪಸಂದ್ರ ಪೋಸ್ಟ್ ಆಫೀಸ್ ಬಳಿಯ ಬಿಇಎಂಎಲ್ ಮತ್ತು ಹೆಚ್ಎಎಲ್ ಆವರಣದ ಗೋಡೆಗಳ ಎರಡು ಬದಿಯಲ್ಲಿ ಕಸವನ್ನು ವಿಲೇವಾರಿ ಮಾಡದೆ ರಾಶಿ ಹಾಕಲಾಗಿದೆ. ಮಾತೆ ಸಾವಿತ್ರಿ ಬಾಪುಲೆ ಕೌಸಲ್ಯ ಭವನದ ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ಕೂಡಲೇ ಕಸವನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದರು.

ಪೀಣ್ಯ, ದೊಡ್ಡಬಿದರಕಲ್ಲು ವ್ಯಾಪ್ತಿಯ ಕೆರೆಗಳಿಗೆ ಭೇಟಿ

ಪೀಣ್ಯ, ದೊಡ್ಡಬಿದರಕಲ್ಲು ವ್ಯಾಪ್ತಿಯಲ್ಲಿರುವ ನರಸಪ್ಪನಹಳ್ಳಿ ಕೆರೆಯ ದಯನೀಯ ಸ್ಥಿತಿಯನ್ನು ಕಂಡು ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆರೆಯ ಆಸುಪಾಸು ಮತ್ತು ಕೆರೆಯ ಅಂಗಳಕ್ಕೆ ದಿಢೀರ್ ತಪಾಸಣೆ ನಡೆಸಿ ಅಲ್ಲಿನ ನ್ಯೂನತೆಗಳನ್ನು ಕಂಡು ಸ್ಥಳದಲ್ಲಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆರೆಯ ಸುತ್ತಲೂ ಕಟ್ಟಡದ ಅವಶೇಷಗಳನ್ನು ಮತ್ತು ಘನತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಸುರಿಯಲಾಗಿದೆ. ಇದನ್ನು ಗಮನಿಸಿದ ಉಪಲೋಕಾಯುಕ್ತರು ಈ ತ್ಯಾಜ್ಯವನ್ನು ಸುರಿದು ತಿಂಗಳುಗಳೇ ಕಳೆದಿದ್ದರೂ ಯಾಕೆ ತೆರವುಗೊಳಿಸಿಲ್ಲ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕೆರೆಯ ಸಂರಕ್ಷಿತ ಬಫರ್ ವಲಯವನ್ನು ರಾಜಾರೋಷವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಕೆರೆಯ ಅಂಗಳದೊಳಗೆ ಕಾನೂನುಬಾಹಿರವಾಗಿ ಶಾಶ್ವತ ಕಟ್ಟಡಗಳನ್ನು ನಿರ್ಮಿಸಿರುವುದು ತಪಾಸಣೆಯ ವೇಳೆ ಬೆಳಕಿಗೆ ಬಂದಿದೆ.

ಕೆರೆಯ ಪಕ್ಕದಲ್ಲಿರುವ ಕೆಲವು ಮನೆಗಳು ಮತ್ತು ಕಾರ್ಖಾನೆಗಳಿಂದ ನೇರವಾಗಿ ಕಲುಷಿತ ಮತ್ತು ವಿಷಕಾರಿ ನೀರನ್ನು ಕೆರೆಗೆ ಬಿಡಲಾಗುತ್ತಿದೆ. ಇದು ಕೆರೆಯ ಜೀವವೈವಿಧ್ಯಕ್ಕೆ ಮಾರಕವಾಗಿದ್ದು, ಕೂಡಲೇ ಈ ಕಲುಷಿತ ನೀರು ಹರಿವನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Read More
Next Story