
ಸುರಕ್ಷತೆಯಲ್ಲಿ ವಿಶ್ವಕ್ಕೇ ಮಾದರಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರತಿಷ್ಠಿತ 'ಡೈಮಂಡ್ ಅವಾರ್ಡ್'
ಸುರಕ್ಷತಾ ಸಂಸ್ಕೃತಿಯನ್ನು ಹೇಗೆ ಉತ್ತೇಜಿಸಲಾಗುತ್ತಿದೆ, ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಪ್ರತಿಕ್ರಿಯಿಸಲಾಗುತ್ತಿದೆ, ನವೀನ ತಂತ್ರಜ್ಞಾನಗಳ ಅಳವಡಿಕೆ ಹೇಗಿದೆ ಎಂಬುದನ್ನು ಆಧರಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ರಾಜ್ಯದ ಹೆಮ್ಮೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದೆ. ವಿಮಾನಯಾನ ರಂಗದ ಅತ್ಯುನ್ನತ ಸಂಸ್ಥೆಯಾದ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ ಏಷ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ವಲಯದ ಸುರಕ್ಷತಾ ಮಾನ್ಯತಾ ಪ್ರಶಸ್ತಿ-2026ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತ್ಯುನ್ನತ ಗೌರವವಾದ ಡೈಮಂಡ್ ಅವಾರ್ಡ್ ಒಲಿದು ಬಂದಿದೆ. ಈ ಸಾಧನೆಯು ವಿಮಾನಯಾನ ಕಾರ್ಯಾಚರಣೆ ಮತ್ತು ಸುರಕ್ಷತಾ ನಿರ್ವಹಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ವಿಶ್ವದ ಇತರ ಪ್ರಮುಖ ವಿಮಾನ ನಿಲ್ದಾಣಗಳಿಗೆ ಮಾದರಿಯಾಗಿರುವುದನ್ನು ಪುಷ್ಟೀಕರಿಸಿದೆ.
ಎಸಿಐ ಸುರಕ್ಷತಾ ಮಾನ್ಯತಾ ಪ್ರಶಸ್ತಿಯು ವಿಮಾನ ನಿಲ್ದಾಣಗಳ ಕಾರ್ಯಾಚರಣಾ ಶ್ರೇಷ್ಠತೆಯನ್ನು ಗುರುತಿಸುವ ಅತ್ಯಂತ ವಿಶ್ವಾಸಾರ್ಹ ಮೌಲ್ಯಮಾಪನವಾಗಿದೆ. ಕೇವಲ ಮೂಲಸೌಕರ್ಯಗಳ ಅಭಿವೃದ್ಧಿಯಷ್ಟೇ ಅಲ್ಲದೆ, ಸುರಕ್ಷತಾ ಸಂಸ್ಕೃತಿಯನ್ನು ಹೇಗೆ ಉತ್ತೇಜಿಸಲಾಗುತ್ತಿದೆ, ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಪ್ರತಿಕ್ರಿಯಿಸಲಾಗುತ್ತಿದೆ ಮತ್ತು ನವೀನ ತಂತ್ರಜ್ಞಾನಗಳ ಅಳವಡಿಕೆ ಹೇಗಿದೆ ಎಂಬುದನ್ನು ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಸಾಲಿನಲ್ಲಿ 'ಡೈಮಂಡ್ ಅವಾರ್ಡ್' ಅತಿ ಎತ್ತರದ ಮನ್ನಣೆಯಾಗಿದೆ.
ಯಾಕೆ ಬೆಂಗಳೂರಿಗೆ ಈ ಪ್ರಶಸ್ತಿ?
ಕೆಂಪೇಗೌಡ ವಿಮಾನ ನಿಲ್ದಾಣವು ಸುರಕ್ಷತೆಯ ವಿಷಯದಲ್ಲಿ ದತ್ತಾಂಶ ಆಧಾರಿತ ಕಾರ್ಯಾಚರಣಾ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯಶಸ್ಸಿಗೆ ಪ್ರಮುಖ ಕಾರಣಗಳೆಂದರೆ, ರನ್‌ವೇ ಸುರಕ್ಷತಾ ತಂಡದ ನೇತೃತ್ವದಲ್ಲಿ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ರೂಪಿಸಲಾದ ಈ ವ್ಯವಸ್ಥೆಯು ವಿಮಾನಗಳ ಸುಗಮ ಮತ್ತು ಸುರಕ್ಷಿತ ಟೇಕ್-ಆಫ್ ಹಾಗೂ ಲ್ಯಾಂಡಿಂಗ್‌ಗೆ ಭದ್ರ ಬುನಾದಿ ಹಾಕಿದೆ. ರನ್‌ವೇ ಮೇಲೆ ಕಂಡುಬರುವ ವಿದೇಶಿ ವಸ್ತುಗಳ ಅವಶೇಷಗಳ ನಿರ್ವಹಣೆಯಲ್ಲಿ ಸುಧಾರಿತ ಮತ್ತು ಸ್ವಯಂಚಾಲಿತ ಪದ್ಧತಿಗಳನ್ನು ಬಳಸುತ್ತಿರುವುದು. ನಿರಂತರವಾಗಿ ಪೈಲಟ್‌ಗಳಿಗೆ ಪರಿಸರ ಬದಲಾವಣೆ ಮತ್ತು ಅಪಾಯದ ಸ್ಥಳಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮತ್ತು ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಏಜೆನ್ಸಿಗಳು ಮತ್ತು ಸಿಬ್ಬಂದಿಯನ್ನು ಒಂದೇ ಸುರಕ್ಷತಾ ಚೌಕಟ್ಟಿನಡಿಯಲ್ಲಿ ತಂದಿರುವುದಾಗಿದೆ.
ಈ ಪ್ರಶಸ್ತಿಯ ಕುರಿತು ಸಂತಸ ವ್ಯಕ್ತಪಡಿಸಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ಮುಖ್ಯ ಕಾರ್ಯಾಚರಣಾ ಅಧಿಕಾರಿ ಗಿರೀಶ್ ನಾಯರ್, ಸುರಕ್ಷತೆ ಎಂಬುದು ವಿಮಾನ ನಿಲ್ದಾಣದ ಒಂದು ಭಾಗವಲ್ಲ, ಅದು ನಮ್ಮ ದೈನಂದಿನ ಜೀವನದ ಉಸಿರಾಗಬೇಕು. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ, ಭವಿಷ್ಯದ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎನ್ನುವುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಎಸಿಐನ ಮಹಾನಿರ್ದೇಶಕ ಸ್ಟೆಫಾನೊ ಬರೋನ್ಸಿ ಮಾತನಾಡಿ, ಬದಲಾಗುತ್ತಿರುವ ಸಂಕೀರ್ಣ ಪರಿಸರದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ತೋರಿರುವ ಸ್ಥೈರ್ಯ ಮತ್ತು ನಾಯಕತ್ವ ಇತರರಿಗೆ ಮಾದರಿ ಎಂದು ಶ್ಲಾಘಿಸಿದರು.
ಬಿಐಎಎಲ್‌ನ ಸಾಧನೆಗಳ ಪಯಣ
2024-25ರ ಆರ್ಥಿಕ ವರ್ಷದಲ್ಲಿ, ಕೆಂಪೇಗೌಡ ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲಿ 4.18 ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸೇವೆ ಒದಗಿಸಿ ಹೊಸ ದಾಖಲೆ ಬರೆದಿದೆ. ಕೇವಲ ಪ್ರಯಾಣಿಕರ ಸಂಖ್ಯೆಯಲ್ಲಿ ಮಾತ್ರವಲ್ಲದೆ, ಸರಕು ಸಾಗಣೆಯಲ್ಲೂ, ಅದರಲ್ಲೂ ಮುಖ್ಯವಾಗಿ ಕೊಳೆಯುವ ವಸ್ತುಗಳ ಸಾಗಣೆಯಲ್ಲಿ ಸತತ ನಾಲ್ಕನೇ ವರ್ಷವೂ ಭಾರತದ ನಂ. 1 ವಿಮಾನ ನಿಲ್ದಾಣವಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಎಸಿಐ 5-ಸ್ಟಾರ್ ಏರ್‌ಪೋರ್ಟ್ ರೇಟಿಂಗ್ ಹೊಂದಿರುವ ಜಾಗತಿಕ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಇದು ಸ್ಥಾನ ಪಡೆದಿದೆ. ಫೇರ್‌ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೊರೇಷನ್‌ನಂತಹ ಪ್ರಬಲ ಪ್ರವರ್ತಕರ ಬೆಂಬಲ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ನಿರ್ವಹಣಾ ಕೌಶಲ್ಯಗಳು ಬಿಐಎಎಲ್ ಅನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳ ಸಾಲಿನಲ್ಲಿ ನಿಲ್ಲಿಸಿವೆ.
ಸುರಕ್ಷತೆ, ಕಾರ್ಯಾಚರಣಾ ಸನ್ನದ್ಧತೆ ಮತ್ತು ಪ್ರಯಾಣಿಕರ ಅನುಭವ.. ಈ ಮೂರು ಆಯಾಮಗಳಲ್ಲಿ ಬಿಐಎಎಲ್ ಸಾಧಿಸಿರುವ ಈ ಮೈಲಿಗಲ್ಲು, ಬೆಂಗಳೂರನ್ನು ಅಂತಾರಾಷ್ಟ್ರೀಯ ವಿಮಾನಯಾನ ನಕ್ಷೆಯಲ್ಲಿ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕೇಂದ್ರವಾಗಿ ಪ್ರತಿಷ್ಠಾಪಿಸಿದೆ. ತಂತ್ರಜ್ಞಾನದ ಅಳವಡಿಕೆ ಮತ್ತು ನಾವೀನ್ಯತೆಯ ಮೂಲಕ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸುಧಾರಣೆಗಳನ್ನು ತರಲು ವಿಮಾನ ನಿಲ್ದಾಣ ಆಡಳಿತ ಮಂಡಳಿ ಬದ್ಧವಾಗಿದೆ.

