ವಿಮಾನ ಪ್ರಯಾಣಿಕರ ಯುಡಿಎಫ್‌ ಶುಲ್ಕ; ಸೆ.1 ರಿಂದ ಪರಿಷ್ಕೃತ ದರ ಜಾರಿ
x

ವಿಮಾನ ಪ್ರಯಾಣಿಕರ ಯುಡಿಎಫ್‌ ಶುಲ್ಕ; ಸೆ.1 ರಿಂದ ಪರಿಷ್ಕೃತ ದರ ಜಾರಿ

ದೇಶದ ಪ್ರಮುಖ ಹಾಗೂ ಹೊಸದಾಗಿ ಆರಂಭಗೊಂಡ ವಿಮಾನ ನಿಲ್ದಾಣಗಳಲ್ಲಿ ಅನುಸರಿಸಲಾಗುತ್ತಿರುವ ಯುಡಿಫ್‌ ಶುಲ್ಕ ಮಾದರಿಯನ್ನೇ ಇಲ್ಲಿ ಅಳವಡಿಸಲಾಗಿದೆ ಎಂದು ಬಿಐಎಲ್ ತಿಳಿಸಿದೆ.


ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ವಿಮಾನ ಪ್ರಯಾಣಿಕರಿಗೆ ಸೆ.1 ರಿಂದ ಹೊಸ ಪರಿಷ್ಕೃತ ಬಳಕೆದಾರ ಅಭಿವೃದ್ಧಿ ಶುಲ್ಕ(ಯುಡಿಎಫ್) ಜಾರಿಯಾಗಲಿದೆ.

ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು (ಏರಾ-AERA) 2026-27 ರಿಂದ 2030-31ರವರೆಗೆ ನಾಲ್ಕನೇ ಅವಧಿಗೆ ಈ ಹೊಸ ಟ್ಯಾರಿಫ್ ಆದೇಶ ಹೊರಡಿಸಿದೆ. ಆಗಸ್ಟ್ 31ರವರೆಗೆ ಈಗಿರುವ ಹಳೆಯ ಬಳಕೆದಾರ ಅಭಿವೃದ್ಧಿ ಶುಲ್ಕವೇ ಮುಂದುವರಿಯಲಿದ್ದು, ಪರಿಷ್ಕೃತ ದರಗಳು ಸೆ.1 ರಿಂದ ಜಾರಿಯಾಗಲಿವೆ. ಹೊಸ ಆದೇಶದಲ್ಲಿನ ಪ್ರಮುಖ ಬದಲಾವಣೆ ಎಂದರೆ ಇದೇ ಮೊದಲ ಬಾರಿಗೆ ನಿರ್ಗಮನ ಪ್ರಯಾಣಿಕರಷ್ಟೇ ಅಲ್ಲದೆ ಆಗಮಿಸುವ ಪ್ರಯಾಣಿಕರಿಗೂ ಯುಡಿಎಫ್ ಶುಲ್ಕ ವಿಧಿಸಲಾಗುತ್ತಿದೆ.

ಪ್ರಯಾಣಿಕರಿಗೆ ಆಗಮನ ಹಾಗೂ ನಿರ್ಗಮನ ಎರಡಕ್ಕೂ ಸೇರಿಸಿ ಯುಡಿಎಫ್‌ ಶುಲ್ಕ ಹಾಕುವುದರಿಂದ ಹೊರೆ ಕಡಿಮೆಯಾಗಲಿದೆ. ಸೆ.1ರಿಂದ ದೇಶೀಯ ಪ್ರಯಾಣಿಕರ ನಿರ್ಗಮನದ ಮೇಲೆ ಯುಡಿಎಫ್ ಶುಲ್ಕ 300 ರೂ. ಗಳಾದರೆ, ಆಗಮನದ ಮೇಲೆ 125 ರೂ. ಆಗಲಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಗಮನದ ಮೇಲೆ ಯುಡಿಎಫ್ ಶುಲ್ಕ 997 ರೂ., ಆಗಮನದ ಮೇಲೆ 426 ರೂ. ಆಗಲಿದೆ. ಪ್ರಸ್ತುತ, ದೇಶೀಯ ನಿರ್ಗಮನ ಪ್ರಯಾಣಿಕರಿಗೆ 550 ರೂ. ಯುಡಿಎಫ್ ಶುಲ್ಕವಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 1500 ರೂ. ಇತ್ತು. ಈ ಹೊಸ ದರಗಳು ಆಗಸ್ಟ್ 2029ರವರೆಗೆ ಅನ್ವಯವಾಗಲಿವೆ.

ಇನ್ನು ಟರ್ಮಿನಲ್-2 ಸೇರಿದಂತೆ ಪ್ರಮುಖ ಯೋಜನೆಗಳ ಕಾಮಗಾರಿ ಪೂರ್ಣಗೊಂಡ ನಂತರ ಟ್ಯಾರಿಫ್‌ನಲ್ಲಿ ಬದಲಾವಣೆ ಮಾಡಲಾಗುವುದು. ಹೊಸ ಆದೇಶದಲ್ಲಿ ಇದೇ ಮೊದಲ ಬಾರಿಗೆ ಆಗಮನ ಮತ್ತು ನಿರ್ಗಮಿಸುವ ಪ್ರಯಾಣಿಕರಿಂದಲೂ ಯುಡಿಎಫ್ ವಸೂಲಿ ಮಾಡಲಾಗುತ್ತದೆ. ದೇಶದ ಪ್ರಮುಖ ಹಾಗೂ ಹೊಸದಾಗಿ ಆರಂಭಗೊಂಡ ವಿಮಾನ ನಿಲ್ದಾಣಗಳಲ್ಲಿ ಅನುಸರಿಸಲಾಗುತ್ತಿರುವ ಮಾದರಿಯನ್ನೇ ಇಲ್ಲಿ ಅಳವಡಿಸಲಾಗಿದೆ ಎಂದು ಬಿಐಎಲ್ ತಿಳಿಸಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ವಿಸ್ತರಣೆಯ ಭಾಗವಾಗಿ ಟರ್ಮಿನಲ್– 2 ಫೇಸ್ – 2, T2 ಫೇಸ್ – 2 ಏಪ್ರನ್, ಏರ್ಫೀಲ್ಡ್ ಕಾಮಗಾರಿ, ರಸ್ತೆ ಹಾಗೂ ಲ್ಯಾಂಡ್‌ ಸೈಡ್‌ ಮೂಲಸೌಕರ್ಯ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಗಳು ಪೂರ್ಣಗೊಂಡು ಕಾರ್ಯಾರಂಭ ಮಾಡಿದ ಬಳಿಕ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ನಿಗದಿಪಡಿಸಿರುವ ಪ್ರಕ್ರಿಯೆಯಂತೆ ಸಂಬಂಧಿತ ಹೆಚ್ಚುವರಿ ಟ್ಯಾರಿಫ್‌ಗಳನ್ನು ಜಾರಿಗೊಳಿಸಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Read More
Next Story