
ಬೆಂಗಳೂರು ಜಾತ್ರೆ: ಡಿಸೆಂಬರ್ನಲ್ಲಿ 10 ದಿನಗಳ ಕಾಲ ಸಾಂಸ್ಕೃತಿಕ ಸಂಭ್ರಮ
ನಗರದ ಜೀವನದ ಗುಣಮಟ್ಟ ಹೆಚ್ಚಾಗಬೇಕೆಂದರೆ ಮೂಲಭೂತ ಸೌಕರ್ಯಗಳಷ್ಟೇ ಸಾಲದು, ಕಲೆ, ಸಂಗೀತ, ಸಾಹಿತ್ಯ, ಪರಂಪರೆಯ ಆಸ್ವಾದನೆಯೂ ಅಗತ್ಯ ಎಂಬ ಆಶಯವನ್ನು ಸಚಿವ ಕೃಷ್ಣಬೈರೇಗೌಡ ವ್ಯಕ್ತಪಡಿಸಿದ್ದಾರೆ.
ಯಾಂತ್ರಿಕ ಜೀವನದಲ್ಲಿ ಮುಳುಗಿರುವ ಬೆಂಗಳೂರಿನ ನಾಗರಿಕರಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಮನೋರಂಜನೆಯ ರಸದೌತಣ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಡಿಸೆಂಬರ್ 4 ರಿಂದ 13ರವರೆಗೆ 10 ದಿನಗಳ ಕಾಲ ರಾಜ್ಯ ಸರ್ಕಾರವು ಬೃಹತ್ ಮಟ್ಟದಲ್ಲಿ "ಬೆಂಗಳೂರು ಜಾತ್ರೆ"ಯನ್ನು ಆಯೋಜಿಸಲಿದೆ. ಈ ಕುರಿತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕೃತ ಘೋಷಣೆ ಮಾಡಿದ್ದು, ಈ ಉತ್ಸವವು ನಗರದ ಸಾಂಸ್ಕೃತಿಕ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆಯಲಿದೆ.
ಸರ್ಕಾರವು ರಸ್ತೆ, ನೀರು ಮತ್ತು ಸಂಚಾರ ಸುಧಾರಣೆಯಂತಹ ಮೂಲಭೂತ ಸಮಸ್ಯೆಗಳಿಗೆ ಪ್ರತಿದಿನ ಪರಿಹಾರ ಹುಡುಕುವ ಕೆಲಸ ಮಾಡುತ್ತಿದೆ. ಆದರೆ, ನಗರದ ಜೀವನದ ಗುಣಮಟ್ಟ ಹೆಚ್ಚಾಗಬೇಕೆಂದರೆ ಕೇವಲ ಮೂಲಭೂತ ಸೌಕರ್ಯಗಳಷ್ಟೇ ಸಾಲದು; ಕಲೆ, ಸಂಗೀತ, ಸಾಹಿತ್ಯ ಮತ್ತು ಪರಂಪರೆಯ ಆಸ್ವಾದನೆಯೂ ಅಗತ್ಯ ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆಯೋಜಿಸಲಾಗಿದ್ದ 'ಫ್ರೀಡಂ ಹಬ್ಬ'ಕ್ಕೆ ಸಿಕ್ಕ ಭಾರಿ ಜನಬೆಂಬಲವನ್ನು ಗಮನಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಈ 'ಬೆಂಗಳೂರು ಜಾತ್ರೆ'ಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ನೋಡಲ್ ಸಂಸ್ಥೆಯಾಗಿ ಕೆಲಸ ಮಾಡಲಿದೆ. ಸರ್ಕಾರದ ವಿವಿಧ ಇಲಾಖೆಗಳಾದ ಬಿಎಂಆರ್ಸಿಎಲ್, ಪೊಲೀಸ್, ಜಲಮಂಡಳಿ, ಬಿಡಿಎ, ಬೆಸ್ಕಾಂ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಒಂದೇ ವೇದಿಕೆಯಲ್ಲಿ ಕೈಜೋಡಿಸಿವೆ. ಸರ್ಕಾರವು ನೇರವಾಗಿ ಎಲ್ಲವನ್ನೂ ನಡೆಸುವ ಬದಲು, ಸಂಸ್ಥೆಗಳನ್ನು ಸಕ್ರಿಯಗೊಳಿಸುವ ಮತ್ತು ಸಮನ್ವಯ ಸಾಧಿಸುವ ಪಾತ್ರವನ್ನು ವಹಿಸಲಿದೆ ಎಂದು ಹೇಳಿದರು.
'ಬೆಂಗಳೂರಿನವರಿಗಾಗಿ ಬೆಂಗಳೂರಿನವರಿಂದ'
ಈ ಜಾತ್ರೆಯು ಕೇವಲ ಸರ್ಕಾರದ ಕಾರ್ಯಕ್ರಮವಾಗಿ ಉಳಿಯದೆ, ನಾಗರಿಕರ ಹಬ್ಬವಾಗಿ ಮಾರ್ಪಡಲಿದೆ. ಐಟಿ-ಬಿಟಿ ಸಂಸ್ಥೆಗಳು, ಖಾಸಗಿ ಶಾಲೆ-ಕಾಲೇಜುಗಳು, ಹೋಟೆಲ್ ಅಸೋಸಿಯೇಷನ್ಗಳು ಮತ್ತು ಎನ್ಜಿಒಗಳನ್ನು ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
ಪೇಟೆ ಮತ್ತು ಪರಂಪರೆ ಪ್ರದೇಶಗಳಲ್ಲಿ ಸ್ಥಳೀಯ ಆಚರಣೆಗಳನ್ನು ಪ್ರೋತ್ಸಾಹಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೆಟ್ರೋ ನಿಲ್ದಾಣಗಳು, ಬಿಡಬ್ಲ್ಯೂಎಸ್ಎಸ್ಬಿ ಟ್ಯಾಂಕ್ಗಳು ಮತ್ತು ಸಾರ್ವಜನಿಕ ಉದ್ಯಾನವನಗಳನ್ನು ಕಲಾ ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುವುದು. 10 ದಿನಗಳಲ್ಲಿ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಗುರಿಯನ್ನು ಸರ್ಕಾರ ಹೊಂದಿದೆ. ಹೋಟೆಲ್ ಸಂಘಗಳ ಸಹಯೋಗದಲ್ಲಿ 'ಫುಡ್ ಫೆಸ್ಟಿವಲ್' ಮೂಲಕ ಕರ್ನಾಟಕದ ಅಡುಗೆಯ ವೈವಿಧ್ಯತೆಯನ್ನು ಸಾರ್ವಜನಿಕರಿಗೆ ಪರಿಚಯಿಸಲಾಗುತ್ತದೆ. ಐಐಎಸ್ಸಿ, ಐಐಎಂ, ಪ್ಲಾನೆಟೇರಿಯಂ ಮತ್ತು ಚಿತ್ರಕಲಾ ಪರಿಷತ್ನಂತಹ ಪ್ರತಿಷ್ಠಿತ ಸಂಸ್ಥೆಗಳು ತಮ್ಮದೇ ಕಾರ್ಯಕ್ರಮಗಳನ್ನು ಜಾತ್ರೆಯ ಅಡಿಯಲ್ಲಿ ನಡೆಸಲಿವೆ. ಆರ್ಡಬ್ಲ್ಯೂಎಗಳ ಮೂಲಕ ಬಡಾವಣೆಗಳಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮಗಳು, ಐಟಿ ಕಂಪನಿಗಳ ಆವರಣದಲ್ಲಿ ಪ್ರತಿಭಾ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಸಂಪೂರ್ಣ ಉಚಿತ ಮತ್ತು ಸುಲಭ ನೋಂದಣಿ
ಈ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಸಂಪೂರ್ಣ ಉಚಿತ. ಯಾವ ಸ್ಥಳದಲ್ಲಿ, ಯಾವ ಸಮಯಕ್ಕೆ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ನೀಡಲು ಪ್ರತ್ಯೇಕ ವೆಬ್ಸೈಟ್ ರಚಿಸಲಾಗುತ್ತಿದೆ. ಬೃಹತ್ ಮಟ್ಟದ ಕಾರ್ಯಕ್ರಮಗಳಿಗೆ ಮಾತ್ರ ಮುಂಗಡ ನೋಂದಣಿ ಇರಲಿದ್ದು, ಉಳಿದಂತೆ ಎಲ್ಲರಿಗೂ ನೇರ ಪ್ರವೇಶ ಇರಲಿದೆ. ಈ ಕಾರ್ಯಕ್ರಮಕ್ಕೆ ಅಂದಾಜು 15 ರಿಂದ 20 ಕೋಟಿ ರೂ. ವೆಚ್ಚವಾಗಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆಗಳು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳು ಅನುದಾನವನ್ನು ಹಂಚಿಕೊಳ್ಳಲಿವೆ. ಬಿಎಂಟಿಸಿ ಬಸ್ಗಳನ್ನು ಪ್ರಚಾರದ ಮಾಧ್ಯಮವಾಗಿ ಬಳಸಿಕೊಳ್ಳುವುದು, ಬೀದಿ ದೀಪಗಳು ಮತ್ತು ಬಸ್ ನಿಲ್ದಾಣಗಳ ಸೌಂದರ್ಯೀಕರಣದ ಮೂಲಕ ನಗರದ ಬ್ರ್ಯಾಂಡಿಂಗ್ ಹೆಚ್ಚಿಸುವುದು ಸರ್ಕಾರದ ಯೋಜನೆಯಾಗಿದೆ ಎಂದರು.
ಸಾಂಸ್ಕೃತಿಕ ರಾಜಧಾನಿಯ ಕನಸು
ಬೆಂಗಳೂರು ಈಗಾಗಲೇ ಜಾಗತಿಕವಾಗಿ 'ತಂತ್ರಜ್ಞಾನದ ಕೇಂದ್ರ' ಎಂದು ಹೆಸರು ಪಡೆದಿದೆ. ಇದೀಗ ಅದನ್ನು 'ಸಾಂಸ್ಕೃತಿಕ ರಾಜಧಾನಿ'ಯಾಗಿ ರೂಪಿಸುವುದು ಸರ್ಕಾರದ ಆಶಯ. ಇತಿಹಾಸದ ರಾಜಾಶ್ರಯದಂತೆ, ಈಗ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಕಲಾವಿದರಿಗೆ ವೇದಿಕೆ ಒದಗಿಸುತ್ತಿದೆ. ಇದರಿಂದ ಸ್ಥಳೀಯ ಕಲಾವಿದರಿಗೆ ಅವಕಾಶ ಸಿಗುವುದಲ್ಲದೆ, ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ನಗರದ ಆರ್ಥಿಕತೆಗೆ ಹೊಸ ಶಕ್ತಿ ದೊರೆಯಲಿದೆ. ಲಕ್ಷಾಂತರ ಜನ ಸೇರುವ ನಿರೀಕ್ಷೆ ಇರುವುದರಿಂದ ಸಂಚಾರ ನಿರ್ವಹಣೆಗೆ ವಿಶೇಷ ಗಮನ ಹರಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಅಗತ್ಯ ಭದ್ರತೆ ಒದಗಿಸಲಾಗುವುದು ಮತ್ತು ಬೃಹತ್ ಕಾರ್ಯಕ್ರಮಗಳಿಗೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

