
ಬೆಂಗಳೂರುದಲ್ಲಿ HPCL ಮತ್ತು ಇನ್‌ಸ್ಟಾಮಾರ್ಟ್ ಹೊಸ ಸೇವೆ ಆರಂಭಿಸಿವೆ.
ಇನ್‌ಸ್ಟಾಮಾರ್ಟ್‌ನಲ್ಲಿ HP ಗ್ಯಾಸ್ ಸಿಲಿಂಡರ್; ಬೆಂಗಳೂರಿನಲ್ಲಿ ಹೊಸ ಸೇವೆ
HPCL ಮತ್ತು ಇನ್‌ಸ್ಟಾಮಾರ್ಟ್ ಸಹಭಾಗಿತ್ವದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕ್ವಿಕ್ ಕಾಮರ್ಸ್ ಮೂಲಕ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಣೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಎಲ್‌ಪಿಜಿ ಗ್ರಾಹಕರಿಗೆ ಮತ್ತೊಂದು ಅನುಕೂಲಕರ ಸೇವೆ ಲಭ್ಯವಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಇನ್‌ಸ್ಟಾಮಾರ್ಟ್ ಕೈಜೋಡಿಸಿ, ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ ಎಚ್‌ಪಿ ಗ್ಯಾಸ್ ಸಿಲಿಂಡರ್ ವಿತರಿಸುವ ದೇಶದ ಮೊದಲ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿವೆ.
ಈ ಸೇವೆಯ ವಿಶೇಷವೆಂದರೆ, ಸಾಂಪ್ರದಾಯಿಕ ರೀತಿಯಲ್ಲಿ ಗ್ಯಾಸ್ ಏಜೆನ್ಸಿಗೆ ಕರೆ ಮಾಡುವುದು ಅಥವಾ ಪ್ರತ್ಯೇಕವಾಗಿ ಬುಕ್ಕಿಂಗ್ ಮಾಡುವ ಅಗತ್ಯವಿಲ್ಲ. ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕವೇ HPCL ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಅನ್ನು ಸುಲಭವಾಗಿ ಆರ್ಡರ್ ಮಾಡಬಹುದು. ಇದರಿಂದ ಗ್ರಾಹಕರು ವೇಗವಾಗಿ ಮತ್ತು ಅನುಕೂಲಕರವಾಗಿ ಸಿಲಿಂಡರ್ ಪಡೆಯುವ ಅವಕಾಶ ದೊರೆಯಲಿದೆ.
ಮೊದಲ ಹಂತದಲ್ಲಿ ಈ ಸೇವೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದ್ದು, ಯಶಸ್ವಿಯಾದ ಬಳಿಕ ದೇಶದ ಇತರೆ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ. ವೇಗದ ಡೆಲಿವರಿ ಸೇವೆಗಳ ಮೂಲಕ ದಿನನಿತ್ಯದ ಅಗತ್ಯ ವಸ್ತುಗಳನ್ನು ತಲುಪಿಸುತ್ತಿರುವ ಕ್ವಿಕ್ ಕಾಮರ್ಸ್ ಕ್ಷೇತ್ರಕ್ಕೆ ಈಗ ಎಲ್‌ಪಿಜಿ ಸಿಲಿಂಡರ್ ಕೂಡ ಸೇರ್ಪಡೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಈ ಪಾಲುದಾರಿಕೆಯಿಂದ ನಗರ ಪ್ರದೇಶದ ಗ್ರಾಹಕರಿಗೆ ಸಮಯ ಉಳಿತಾಯವಾಗುವುದರ ಜೊತೆಗೆ ಗ್ಯಾಸ್ ಸಿಲಿಂಡರ್ ಪಡೆಯುವ ಪ್ರಕ್ರಿಯೆಯೂ ಮತ್ತಷ್ಟು ಸರಳವಾಗಲಿದೆ ಎಂದು ಕಂಪನಿಗಳು ತಿಳಿಸಿವೆ. ಅಗತ್ಯ ಭದ್ರತಾ ನಿಯಮಗಳು ಹಾಗೂ ಮಾನ್ಯ ಗ್ರಾಹಕರ ದೃಢೀಕರಣದ ಬಳಿಕವೇ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ.

