x

ಸ್ವಿಗ್ಗಿಯಲ್ಲಿ ಪಾರದರ್ಶಕತೆ ಕೊರತೆ ಆರೋಪ; ಸೇವೆ ನಿರಾಕರಿಸಲು ಮುಂದಾದ ಹೊಟೇಲ್‌ಗಳು

ಸ್ವಿಗ್ಗಿಯ ಪಾವತಿ ವಿವರಗಳಲ್ಲಿ ಪಾರದರ್ಶಕತೆ ಇಲ್ಲ, ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಹೊಟೇಲುಗಳು ಸ್ವಿಗ್ಗಿ ಸೇವೆಯನ್ನು ಆಗಸ್ಟ್ 15 ರಿಂದ ಸ್ಥಗಿತ ಮಾಡಲಿವೆ ಎಂದು ಬೆಂಗಳೂರು ಹೊಟೇಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಎಚ್ಚರಿಕೆ ನೀಡಿದ್ದಾರೆ.


ಆಹಾರ ವಿತರಣಾ ವೇದಿಕೆ ಸ್ವಿಗ್ಗಿ (Swiggy) ಮತ್ತು ಹೋಟೆಲ್ ಮಾಲೀಕರ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಕಮಿಷನ್ ಶುಲ್ಕ ಹಾಗೂ ಪಾರದರ್ಶಕತೆಯ ಕೊರತೆಯನ್ನು ತೀವ್ರವಾಗಿ ಖಂಡಿಸಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು, ಬೇಡಿಕೆಗಳು ಈಡೇರದಿದ್ದರೆ ಆಗಸ್ಟ್ 15ರಿಂದ ನಗರಾದ್ಯಂತ ಸ್ವಿಗ್ಗಿ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಕುರಿತು ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ವಿಗ್ಗಿಯ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನುಮತಿಯಿಲ್ಲದೆ ಶುಲ್ಕ ಕಡಿತ ಹಾಗೂ ಕಮಿಷನ್ ಹೊರೆ

ಸ್ವಿಗ್ಗಿಯ ಕೆಲವು ಏಕಪಕ್ಷೀಯ ವ್ಯವಹಾರ ಕ್ರಮಗಳಿಂದ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅತಿಯಾದ ಕಮಿಷನ್, ಭಾರಿ ರಿಯಾಯಿತಿಗಳ ಹೇರಿಕೆ ಹಾಗೂ ವಿಧವಿಧವಾದ ಪ್ಲಾಟ್‌ಫಾರ್ಮ್ ಶುಲ್ಕಗಳಿಂದಾಗಿ ಮಾಲೀಕರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತಿದೆ. ಯಾವುದೇ ಹೊಸ ಜಾಹೀರಾತುಗಳನ್ನು (CPC/CPA/Promoted Ads) ಆರಂಭಿಸುವ ಮುನ್ನ ಹೋಟೆಲ್ ಮಾಲೀಕರಿಂದ ಕನಿಷ್ಠ ಡಿಜಿಟಲ್ ಅಥವಾ ಲಿಖಿತ ಅನುಮತಿಯನ್ನು ಸ್ವಿಗ್ಗಿ ಪಡೆಯುತ್ತಿಲ್ಲ. ಪೂರ್ವ ಸಮಾಲೋಚನೆಯೇ ಇಲ್ಲದೆ, ಏಕಾಏಕಿ ಜಾಹೀರಾತು ಮತ್ತು ಪ್ರಚಾರ ವೆಚ್ಚಗಳನ್ನು ಮಾಲೀಕರ ಬ್ಯಾಂಕ್ ಖಾತೆಗಳಿಂದಲೇ ಕಡಿತಗೊಳಿಸಲಾಗುತ್ತಿದೆ ಎಂದು ಪಿ.ಸಿ. ರಾವ್ ಗಂಭೀರ ಆರೋಪ ಮಾಡಿದ್ದಾರೆ.

ಶೇ. 50ಕ್ಕಿಂತ ಕಡಿಮೆ ಪಾವತಿ, ಅವೈಜ್ಞಾನಿಕ ಲೆಕ್ಕಪತ್ರ

ಲೆಕ್ಕಪತ್ರ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆಯೂ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಜಾಹೀರಾತುಗಳನ್ನು ಯಾವಾಗ ಬೇಕಾದರೂ ಒಂದೇ ಕ್ಲಿಕ್‌ನಲ್ಲಿ ಸ್ಥಗಿತಗೊಳಿಸುವ (One-Click Opt-Out) ಅವಕಾಶ ನೀಡಬೇಕು ಹಾಗೂ ಸ್ಥಗಿತಗೊಳಿಸಿದ ಬಳಿಕ ಯಾವುದೇ ಶುಲ್ಕ ವಿಧಿಸಬಾರದು ಎಂದು ಆಗ್ರಹಿಸಲಾಗಿದೆ. ಪಾವತಿ ವಿವರಗಳಲ್ಲಿ ಜಿಎಸ್‌ಟಿ, ಆಫರ್ ಮತ್ತು ಪ್ರಮೋಷನ್ ಶುಲ್ಕಗಳನ್ನು ಪಾರದರ್ಶಕವಾಗಿ ತೋರಿಸುತ್ತಿಲ್ಲವಾದ್ದರಿಂದ ವಹಿವಾಟುಗಳ ಹೊಂದಾಣಿಕೆ ಕಷ್ಟಸಾಧ್ಯವಾಗಿದೆ. ಇದಲ್ಲದೆ, ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಮೊತ್ತದ ಮೇಲೂ ಸ್ವಿಗ್ಗಿ ಸೇವಾಶುಲ್ಕ ವಿಧಿಸಿ ಮಾಲೀಕರಿಂದಲೇ ವಸೂಲಿ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಅನಗತ್ಯ ಕಡಿತಗಳಿಂದಾಗಿ ಬಿಲ್‌ನ ಒಟ್ಟು ಮೊತ್ತದಲ್ಲಿ (Billed Order Value) ಹೋಟೆಲ್ ಮಾಲೀಕರಿಗೆ ಶೇ. 50ಕ್ಕಿಂತಲೂ ಕಡಿಮೆ ಹಣ ಕೈಸೇರುತ್ತಿದೆ ಎಂದು ವಿವರಿಸಲಾಗಿದೆ.

ಬೇಡಿಕೆ ಈಡೇರದಿದ್ದರೆ ಒಮ್ಮತದ ಬಾಯ್ಕಾಟ್

ಈ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಬಾರಿ ಸ್ವಿಗ್ಗಿ ಪ್ರತಿನಿಧಿಗಳೊಂದಿಗೆ ನೇರ ಮಾತುಕತೆ ನಡೆಸಿದರೂ ಭರವಸೆಗಳು ಈಡೇರಿಲ್ಲ. ಹೀಗಾಗಿ, ತಕ್ಷಣವೇ ವ್ಯವಹಾರದಲ್ಲಿ ಪಾರದರ್ಶಕತೆ ತಂದು ಈವರೆಗಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಂಘವು ಅಂತಿಮ ಅವಕಾಶ ನೀಡಿದೆ. ಒಂದು ವೇಳೆ ಸ್ವಿಗ್ಗಿ ಸ್ಪಂದಿಸದಿದ್ದರೆ, ಬಿಹೆಚ್‌ಎ (BHA), ಕೆಎಸ್‌ಹೆಚ್‌ಎ (KSHA), ಎನ್‌ಆರ್‌ಎಐ (NRAI), ಕೆಬಿಎಸ್‌ಎ (KBSA) ಹಾಗೂ ನಗರದ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್ ಸಂಘಟನೆಗಳು ಒಗ್ಗೂಡಿ ಆಗಸ್ಟ್ 15ರಿಂದ ಸ್ವಿಗ್ಗಿಯೊಂದಿಗಿನ ವ್ಯವಹಾರವನ್ನು ಒಮ್ಮತದಿಂದ ಸ್ಥಗಿತಗೊಳಿಸಲಿವೆ. ಸೇವೆ ಸ್ಥಗಿತದಿಂದ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸಲು ಸೂಕ್ತ ಮಾಹಿತಿ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಘ ಸ್ಪಷ್ಟಪಡಿಸಿದೆ.

Read More
Next Story