
ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ದಿಢೀರ್ ವ್ಯತ್ಯಯ: ನಾಳೆಯಿಂದ ಬೆಂಗಳೂರಿನ ಹೋಟೆಲ್‌ಗಳು ಬಂದ್?
ಸೋಮವಾರ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘವು, ತೈಲ ಕಂಪನಿಗಳ ಈ ಅನಿರೀಕ್ಷಿತ ನಿರ್ಧಾರದಿಂದ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ರಾಜಧಾನಿಯ ಹೋಟೆಲ್ ಉದ್ಯಮಕ್ಕೆ ಈಗ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯ ಸಮಸ್ಯೆಯು ದೊಡ್ಡ ಹೊಡೆತ ನೀಡಿದೆ. ತೈಲ ಕಂಪನಿಗಳು ಏಕಾಏಕಿ ಗ್ಯಾಸ್ ಸರಬರಾಜನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ನಾಳೆಯಿಂದ (ಮಾರ್ಚ್ 10) ಬೆಂಗಳೂರಿನ ಹೋಟೆಲ್‌ಗಳನ್ನು ಬಂದ್ ಮಾಡಲು 'ಬೆಂಗಳೂರು ಹೋಟೆಲ್‌ಗಳ ಸಂಘ' ನಿರ್ಧರಿಸಿದೆ.
ಸೋಮವಾರ ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘವು, ತೈಲ ಕಂಪನಿಗಳ ಈ ಅನಿರೀಕ್ಷಿತ ನಿರ್ಧಾರದಿಂದ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೆ ಮುಂದಿನ 70 ದಿನಗಳವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ತೈಲ ಕಂಪನಿಗಳು ಭರವಸೆ ನೀಡಿದ್ದವು. ಆದರೆ, ಈಗ ಕೊಟ್ಟ ಮಾತಿಗೆ ತಪ್ಪಿ ದಿಢೀರನೆ ಸರಬರಾಜು ನಿಲ್ಲಿಸಿರುವುದು ಹೋಟೆಲ್ ಮಾಲೀಕರ ಆತಂಕಕ್ಕೆ ಕಾರಣವಾಗಿದೆ.
ಸಾವಿರಾರರು ಮಂದಿಗೆ ತೊಂದರೆ
ಹೋಟೆಲ್ ಉದ್ಯಮವು ಅತ್ಯಗತ್ಯ ಸೇವೆಯಡಿ (Essential Service) ಬರುವುದರಿಂದ, ಪ್ರತಿದಿನವೂ ಸಾವಿರಾರು ಜನಸಾಮಾನ್ಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಸೇವೆಗಳಲ್ಲಿರುವ ಮಂದಿ ಆಹಾರಕ್ಕಾಗಿ ಹೋಟೆಲ್‌ಗಳನ್ನೇ ಅವಲಂಬಿಸಿದ್ದಾರೆ. ಗ್ಯಾಸ್ ಪೂರೈಕೆಯ ಸ್ಥಗಿತದಿಂದಾಗಿ ಜನರ ದಿನನಿತ್ಯದ ತಿಂಡಿ-ತಿನಿಸುಗಳಿಗೆ ತೊಂದರೆಯಾಗುವುದು ಮಾತ್ರವಲ್ಲದೆ, ಇಡೀ ಹೋಟೆಲ್ ಉದ್ಯಮವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರು ಈ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ, ವಾಣಿಜ್ಯ ಗ್ಯಾಸ್ ಪೂರೈಕೆಯನ್ನು ಪುನರಾರಂಭಿಸುವ ಮೂಲಕ ಹೋಟೆಲ್ ಉದ್ಯಮಕ್ಕೆ ಸಹಕಾರ ನೀಡಬೇಕು ಎಂದು ಸಂಘವು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದೆ.
ಗ್ಯಾಸ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹೋಟೆಲ್‌ಗಳನ್ನು ಮುಚ್ಚಲು ತೀರ್ಮಾನಿಸಲಾಗಿದ್ದು, ಈ ಗಂಭೀರ ಪರಿಸ್ಥಿತಿಯ ಕುರಿತು ಚರ್ಚಿಸಲು ಸೋಮವಾರ ಸಂಜೆ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್‌ನಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದೆ. ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷರಾದ ಪಿ.ಸಿ. ರಾವ್, ಅಧ್ಯಕ್ಷ ಸುಬ್ರಮಣ್ಯ ಹೊಳ್ಳ ಎಸ್. ಹಾಗೂ ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಅವರು ಈ ಹೋರಾಟದ ಮುಂದಿನ ಹಂತಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

