ಕಾಫಿ-ಟೀ ಪ್ರಿಯರಿಗೆ ತಟ್ಟಿದ ದರ ಏರಿಕೆಯ ಬಿಸಿ
x

ಬೆಂಗಳೂರಿನ ಕೆಲವು ಹೋಟೆಲ್‌ಗಳಲ್ಲಿ ಕಾಫಿ, ಟೀ ದರ 2-3 ರೂ.ಏರಿಕೆಯಾಗಿದೆ.

ಕಾಫಿ-ಟೀ ಪ್ರಿಯರಿಗೆ ತಟ್ಟಿದ ದರ ಏರಿಕೆಯ ಬಿಸಿ

ಹೋಟೆಲ್‌ಗಳ ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದುಬಾರಿ ಬಾಡಿಗೆ, ವಿದ್ಯುತ್ ಬಿಲ್, ನೀರಿನ ದರ ಹಾಗೂ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಸೇರಿದಂತೆ ಹಲವು ವೆಚ್ಚಗಳು ಮಾಲೀಕರಿಗೆ ಹೊರೆಯಾಗಿದೆ.


Click the Play button to hear this message in audio format

ಬೆಂಗಳೂರು ನಗರದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಕಾಫಿ ಮತ್ತು ಟೀ ದರವೂ ಹೆಚ್ಚಳವಾಗಿದೆ. ಬೆಂಗಳೂರಿನ ಕೆಲವು ಹೋಟೆಲ್‌ಗಳು ಕಾಫಿ ಹಾಗೂ ಟೀ ಬೆಲೆಯನ್ನು ರೂ.2ರಿಂದ ರೂ.3ರವರೆಗೆ ಹೆಚ್ಚಿಸಿದ್ದು, ನಿಯಮಿತವಾಗಿ ಹೋಟೆಲ್‌ಗಳಲ್ಲಿ ಕಾಫಿ - ಟೀ ಸೇವಿಸುವವರಿಗೆ ಹೆಚ್ಚುವರಿ ಖರ್ಚು ಎದುರಾಗಿದೆ.

ಹಿಂದೆ ರೂ.20ರಿಂದ ರೂ.30ರೊಳಗೆ ಲಭ್ಯವಿದ್ದ ಕಾಫಿ ಅಥವಾ ಟೀಗೆ ಈಗ ಕೆಲವು ಹೋಟೆಲ್‌ಗಳಲ್ಲಿ ರೂ.22ರಿಂದ ರೂ.33ರವರೆಗೆ ದರ ನಿಗದಿಪಡಿಸಲಾಗಿದೆ. ಸಣ್ಣ ಹೋಟೆಲ್‌ಗಳು ಹಾಗೂ ಟೀ ಅಂಗಡಿಗಳಲ್ಲೂ ಬೆಲೆ ಪರಿಷ್ಕರಣೆ ಕಂಡುಬಂದಿದೆ. ಈ ಹಿಂದೆ ರೂ.15ಕ್ಕೆ ಸಿಗುತ್ತಿದ್ದ ಕಾಫಿ ಅಥವಾ ಟೀ ಈಗ ರೂ.16ರಿಂದ ರೂ.18ರವರೆಗೆ ಮಾರಾಟವಾಗುತ್ತಿದೆ. ಹೋಟೆಲ್ ಇರುವ ಪ್ರದೇಶ, ಗ್ರಾಹಕರ ಬೇಡಿಕೆ ಮತ್ತು ವ್ಯಾಪಾರದ ಸ್ವರೂಪಕ್ಕೆ ಅನುಗುಣವಾಗಿ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಕೆಲವು ಕಡೆ ಬಾದಾಮಿ ಹಾಲಿನ ದರವೂ ರೂ.20ರಿಂದ ರೂ.25ಕ್ಕೆ ಏರಿಕೆಯಾಗಿದೆ.

ಸಕ್ಕರೆ ಬೆಲೆ ಮಾತ್ರ ಕಾರಣವಲ್ಲ

ಕಾಫಿ-ಟೀ ದರ ಏರಿಕೆಗೆ ಸಕ್ಕರೆ ಮತ್ತು ಬೆಲ್ಲದ ಬೆಲೆ ಹೆಚ್ಚಳವೇ ನೇರ ಕಾರಣವಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ. ಇತ್ತೀಚೆಗೆ ಸಕ್ಕರೆ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ, ಸದ್ಯ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಹೀಗಾಗಿ ಕಾಫಿ ಮತ್ತು ಟೀ ಬೆಲೆ ಹೆಚ್ಚಳಕ್ಕೆ ಸಕ್ಕರೆ ದರವನ್ನು ಮಾತ್ರ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಇತರ ನಿರ್ವಹಣಾ ವೆಚ್ಚಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಹಿಂದೆ ಬೆಲೆ ಪರಿಷ್ಕರಿಸದ ಕೆಲವು ಹೋಟೆಲ್‌ಗಳು ಈಗ ದರ ಹೆಚ್ಚಿಸಿರಬಹುದು ಎಂದು ಅವರು ತಿಳಿಸಿದ್ದಾರೆ.

ಬಾಡಿಗೆ, ವಿದ್ಯುತ್ ವೆಚ್ಚವೂ ಹೆಚ್ಚಳ

ಹೋಟೆಲ್ ಉದ್ಯಮದ ಮೇಲೆ ನಿರ್ವಹಣಾ ವೆಚ್ಚದ ಒತ್ತಡ ಹೆಚ್ಚಾಗಿದೆ. ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಶುಲ್ಕ, ಸಿಬ್ಬಂದಿ ವೇತನ ಸೇರಿದಂತೆ ಹಲವು ಖರ್ಚುಗಳು ಹೆಚ್ಚಾಗಿವೆ. ಇದರ ಪರಿಣಾಮವಾಗಿ ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಹಳೆಯ ದರದಲ್ಲೇ ಮುಂದುವರಿಸುವುದು ಮಾಲೀಕರಿಗೆ ಕಷ್ಟವಾಗುತ್ತಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯ ನಂತರ ಇಡ್ಲಿ, ವಡೆ, ಮಸಾಲೆ ದೋಸೆ ಸೇರಿದಂತೆ ಹಲವು ತಿಂಡಿಗಳ ಬೆಲೆಯಲ್ಲಿ ಕೂಡ ಕೆಲವು ಹೋಟೆಲ್‌ಗಳು ಬದಲಾವಣೆ ಮಾಡಿದ್ದವು. ಇದೀಗ ಕಾಫಿ ಮತ್ತು ಟೀ ದರದಲ್ಲೂ ಏರಿಕೆ ಕಂಡುಬಂದಿದೆ.

ಸಕ್ಕರೆ, ಬೆಲ್ಲಕ್ಕೂ ಬೆಲೆ ಏರಿಕೆಯ ಬಿಸಿ

ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಳಿತಕ್ಕೆ ಹಲವು ಕಾರಣಗಳಿವೆ. ಸಕ್ಕರೆ ರಫ್ತಿಗೆ ಸಂಬಂಧಿಸಿದ ಕೇಂದ್ರದ ನಿರ್ಧಾರಗಳು ಹಾಗೂ ಎಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆಯಂತಹ ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿವೆ. ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಕೆಜಿಗೆ ಸುಮಾರು ರೂ.55ರಿಂದ ರೂ.60ರಷ್ಟಿದ್ದರೆ, ಕೆಲವು ಕಡೆ ಚಿಲ್ಲರೆ ದರ ಇದಕ್ಕಿಂತ ಹೆಚ್ಚಾಗಿದೆ. ಬೆಲ್ಲದ ದರವೂ ಕೆಜಿಗೆ ಸುಮಾರು ರೂ.55ರಷ್ಟಿದೆ. ಹಬ್ಬಗಳ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿರುವುದೂ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

ಪ್ರತಿದಿನ ಕಾಫಿ ಕುಡಿಯುವವರ ಖರ್ಚು ಹೆಚ್ಚಳ

ಕಾಫಿ ಅಥವಾ ಟೀ ಸೇವನೆಯನ್ನು ನಿತ್ಯದ ಅಭ್ಯಾಸ ಮಾಡಿಕೊಂಡಿರುವವರಿಗೆ ಈ ದರ ಏರಿಕೆ ಮಾಸಿಕ ಖರ್ಚಿನ ಮೇಲೂ ಪರಿಣಾಮ ಬೀರಲಿದೆ. ಪ್ರತಿದಿನ ಹೋಟೆಲ್‌ನಲ್ಲಿ ಒಂದೆರಡು ಬಾರಿ ಕಾಫಿ ಅಥವಾ ಟೀ ಕುಡಿಯುವವರು ತಿಂಗಳಾಂತ್ಯದಲ್ಲಿ ಹಿಂದಿಗಿಂತ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ.

Read More
Next Story