
ಹೋಟೆಲ್ ತಿಂಡಿಗಳ ದರ ಶೇ.60 ರಷ್ಟು ದುಬಾರಿಯಾಗುವ ಸಾಧ್ಯತೆಯಿದೆ
ಬೆಂಗಳೂರಲ್ಲಿ ದೋಸೆಗೆ ರೂ.150, ಬಿರಿಯಾನಿಗೆ ರೂ.500? ಹೋಟೆಲ್ ದರ ಭಾರಿ ಏರಿಕೆ
ಬೆಂಗಳೂರಿನಲ್ಲಿ ಕನಿಷ್ಠ ವೇತನ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಹಿನ್ನೆಲೆ, ಹೋಟೆಲ್ ತಿಂಡಿಗಳ ದರ ಶೇ.60 ರಷ್ಟು ದುಬಾರಿಯಾಗುವ ಸಾಧ್ಯತೆಯಿದೆ ಎಂದು ಹೋಟೆಲ್ ಮಾಲೀಕರು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಹೆಚ್ಚಿಸಿರುವ ನಿರ್ಧಾರ ಹಾಗೂ ಸತತವಾಗಿ ಏರಿಕೆಯಾಗುತ್ತಿರುವ ಇಂಧನ ಮತ್ತು ಅಡುಗೆ ಅನಿಲದ ಬೆಲೆಗಳು ರಾಜಧಾನಿ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿವೆ.
ಹೋಟೆಲ್ ಕಾರ್ಮಿಕರ ಸಂಬಳ ಮತ್ತು ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹೋಟೆಲ್ ಮಾಲೀಕರು ಎಚ್ಚರಿಸಿದ್ದಾರೆ. ಸದ್ಯದಲ್ಲೇ ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ.
ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷರ ಪ್ರಕಾರ, ಕನಿಷ್ಠ ವೇತನದಲ್ಲಿ ಶೇಕಡಾ 60 ರಷ್ಟು ಹೆಚ್ಚಳವಾಗಿರುವುದರಿಂದ ಹೋಟೆಲ್ ತಿಂಡಿಗಳ ಬೆಲೆಯನ್ನು ಅನಿವಾರ್ಯವಾಗಿ ಏರಿಕೆ ಮಾಡಬೇಕಾಗುತ್ತದೆ. ಸದ್ಯಕ್ಕೆ 50 ರೂಪಾಯಿ ಆಸುಪಾಸಿನಲ್ಲಿ ಸಿಗುವ ಒಂದು ಪ್ಲೇಟ್ ಇಡ್ಲಿ ಬೆಲೆ 80 ರೂಪಾಯಿಗೆ ತಲುಪಬಹುದು ಹಾಗೂ ಸುಮಾರು 80 ರಿಂದ 90 ರೂಪಾಯಿ ಇರುವ ಒಂದು ಮಸಾಲೆ ದೋಸೆಯ ಬೆಲೆ ಬರೊಬ್ಬರಿ 150 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಹಾಗೆಯೇ ಸದ್ಯಕ್ಕೆ 150 ರಿಂದ 200 ರೂಪಾಯಿ ಇರುವ ಸಸ್ಯಾಹಾರಿ ಊಟದ ಬೆಲೆ 250 ರಿಂದ 300 ರೂಪಾಯಿಗೆ ಮತ್ತು 300 ರಿಂದ 350 ರೂಪಾಯಿ ಇರುವ ಬಿರಿಯಾನಿ ದರ ಸುಮಾರು 500 ರೂಪಾಯಿವರೆಗೂ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,884 ರೂಪಾಯಿಯಿಂದ 3,152 ರೂಪಾಯಿಗೆ ಏರಿಕೆಯಾಗಿದೆ. ಇದರೊಂದಿಗೆ ದಿನಸಿ ಸಾಮಗ್ರಿಗಳು, ವಿದ್ಯುತ್ ದರ ಹಾಗೂ ಕಸದ ಸೆಸ್ ಕೂಡ ಹೆಚ್ಚಾಗಿರುವುದರಿಂದ ಹೋಟೆಲ್ ಉದ್ಯಮ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ಸಣ್ಣ ಮತ್ತು ಕುಟುಂಬ ನಿರ್ವಹಣೆಯ ಹೋಟೆಲ್‌ಗಳು ಈ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ತೀವ್ರ ತೊಂದರೆ ಎದುರಿಸುತ್ತಿದ್ದು, ಕೆಲವು ಮಾಲೀಕರು ಅನಿವಾರ್ಯವಾಗಿ ಕೆಲಸಗಾರರನ್ನು ಕಡಿತಗೊಳಿಸುತ್ತಿದ್ದಾರೆ. ಕನಿಷ್ಠ ವೇತನ ಪರಿಷ್ಕರಣೆ ನಿಯಮ ಜಾರಿಗೊಳಿಸುವಾಗ ಹೋಟೆಲ್ ಉದ್ಯಮವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕೆಂದು ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಸಾರಿಗೆ ಮತ್ತು ನಿರ್ವಹಣಾ ವೆಚ್ಚ ಸರಿದೂಗಿಸಲು ಬೆಲೆ ಏರಿಕೆಯೊಂದೇ ಏಕೈಕ ಮಾರ್ಗವಾಗಿದೆ ಎಂದು ಹೋಟೆಲ್ ಉದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ.

