ಬೆಂಗಳೂರಿನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ; ಧರೆಗುರುಳಿದ ಮರಗಳು
x
ಬೆಂಗಳೂರಿನಲ್ಲಿ ಬುಧವಾರ ಸಂಜೆ ಧಾರಾಕಾರವಾಗಿ ಆಲಿಕಲ್ಲು ಸಮೇತ ಮಳೆ ಸುರಿಯಿತು

ಬೆಂಗಳೂರಿನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ; ಧರೆಗುರುಳಿದ ಮರಗಳು

ಶಾಂತಿನಗರ, ಜಯನಗರ, ಮೆಜೆಸ್ಟಿಕ್, ರಿಚ್‌ಮಂಡ್‌ ಸರ್ಕಲ್‌, ಕಾರ್ಪೊರೇಷನ್, ಎಂ.ಜಿ.ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟ ವಿಪರೀತವಾಗಿತ್ತು


ಬೆಂಗಳೂರಿನಲ್ಲಿ ಬುಧವಾರ (ಏ.29) ಗುಡುಗು ಹಾಗೂ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಸಂಜೆ 5 ಗಂಟೆಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದಿದೆ.

ಶಾಂತಿನಗರ, ಜಯನಗರ, ಮೆಜೆಸ್ಟಿಕ್, ರಿಚ್‌ಮಂಡ್‌ ಸರ್ಕಲ್‌, ಕಾರ್ಪೊರೇಷನ್, ಎಂ.ಜಿ.ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಗುಡುಗು, ಸಿಡಿಲಿನ ಆರ್ಭಟ ವಿಪರೀತವಾಗಿತ್ತು. ಹಲವೆಡೆ ಮರದ ಕೊಂಬೆಗಳು ಗಾಳಿಗೆ ಮುರಿದು ಬಿದ್ದಿವೆ.

ಕೇವಲ ಅರ್ಧ ತಾಸಿನ ಭಾರೀ ಮಳೆಗೆ ನಗರದ ರಸ್ತೆಗಳು ತುಂಬಿ ಹರಿದವು. 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಗೆ ಪೊಲೀಸ್‌ ಆಯುಕ್ತರ ಕಚೇರಿ ಬಳಿ ಮರದ ಕೊಂಬೆ ಮುರಿದು ಬಿದ್ದಿದೆ.

ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದ್ದು, ಉಳಿದ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಹೊರಡಿಸಿದೆ. ಪೀಣ್ಯ, ಕಲ್ಯಾಣ ನಗರ, ಗೊರಗುಂಟೆ ಪಾಳ್ಯ, ಶಿವಾನಂದ ಸರ್ಕಲ್ ಮತ್ತು ನೆಲಮಂಗಲದ ಹಲವೆಡೆ ಮರಗಳು ಮರಗಳು ಧರೆಗುಳಿರುವ ಕುರಿತು ವರದಿಯಾಗಿದೆ. ಮರ ಬಿದ್ದು ಶೇಷಾದ್ರಿಪುರಂ-ಮಲ್ಲೇಶ್ವರಂ ರಸ್ತೆ ಬಂದ್ ಆಗಿದೆ. ಗೊರಗುಂಟೆಪಾಳ್ಯದಲ್ಲಿ ಗಾಳಿ ಮಳೆಯಿಂದಾಗಿ ಮರ ಬಿದ್ದ ಹಿನ್ನೆಲೆ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆ ಅನಾಹುತ ತಪ್ಪಿದೆ.

ಜಯನಗರ, ಜೆ.ಪಿ. ನಗರ ಮತ್ತು ದಕ್ಷಿಣ ಬೆಂಗಳೂರಿನ ಭಾಗಗಳಲ್ಲಿ ಚರಂಡಿಗಳು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರಿತಪಿಸಬೇಕಾಯಿತು. ದೇವನಹಳ್ಳಿ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳು, ಪೀಣ್ಯ ಮತ್ತು ಅಂಧ್ರಹಳ್ಳಿ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಮುಂದಿನ ಕೆಲ ದಿನಗಳವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿತ್ತು. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ನಗರಕ್ಕೆ ಪೂರ್ವ ಮುಂಗಾರು ಮಳೆಯಿಂದ ತುಸು ತಂಪಾಗಿದೆ.

Read More
Next Story