
ಬೆಂಗಳೂರಿಗೆ ಮತ್ತೊಂದು ಗಾಲ್ಫ್ ಕೋರ್ಸ್ ನಿರ್ಮಿಸಿ: ಉದ್ಯಮಿಗಳಿಗೆ ಸಿಎಂ ಕರೆ
ಬೆಂಗಳೂರು ಗಾಲ್ಫ್ ಕ್ಲಬ್ 150 ವರ್ಷಗಳ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಈ ಸಂಭ್ರಮಕ್ಕೆ ನಿಜವಾದ ಅರ್ಥ ಸಿಗಬೇಕೆಂದರೆ, ಮತ್ತೊಂದು ಗಾಲ್ಫ್ ಕೋರ್ಸ್ ಕೊಡುಗೆಯಾಗಿ ನೀಡಬೇಕು ಎಂದು ಸಿಎಂ ಹೇಳಿದ್ದಾರೆ.
ಇತಿಹಾಸವನ್ನು ಕೇವಲ ನೆನಪಿಸಿಕೊಳ್ಳುವುದು ಸಾಧನೆಯಲ್ಲ, ಹೊಸ ಇತಿಹಾಸವನ್ನು ಸೃಷ್ಟಿಸುವುದು ನಿಜವಾದ ಸಾಧನೆ. ಬೆಂಗಳೂರು ಗಾಲ್ಫ್ ಕ್ಲಬ್ 150 ವರ್ಷಗಳ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಈ ಸಂಭ್ರಮಕ್ಕೆ ನಿಜವಾದ ಅರ್ಥ ಸಿಗಬೇಕೆಂದರೆ, ನೀವು ಬೆಂಗಳೂರಿಗೆ ಮತ್ತೊಂದು ಗಾಲ್ಫ್ ಕೋರ್ಸ್ ಅನ್ನು ಕೊಡುಗೆಯಾಗಿ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸ್ಯಾಂಕಿ ರಸ್ತೆಯಲ್ಲಿರುವ ಬೆಂಗಳೂರು ಗಾಲ್ಫ್ ಕ್ಲಬ್‌ನ ಆವರಣದಲ್ಲಿ ನಡೆದ ಕ್ಲಬ್‌ನ 150ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾದ ಬಳಿಕ ಭಾಗವಹಿಸುತ್ತಿರುವ ಮೊದಲ ಖಾಸಗಿ ಕಾರ್ಯಕ್ರಮ ಇದು. ಇಲ್ಲಿ ನಾನು ಸಿಎಂ ಆಗಿ ಬಂದಿಲ್ಲ, ಬದಲಿಗೆ ಈ ಕ್ಲಬ್‌ನ ಒಬ್ಬ ಸದಸ್ಯನಾಗಿ ಬಂದಿದ್ದೇನೆ. ಆದ್ದರಿಂದ ನನ್ನ ಮಾತುಗಳು ನಿಮಗೆ ಕಹಿ ಎನಿಸಬಹುದು, ಚಪ್ಪಾಳೆ ಸಿಗದಿರಬಹುದು. ಆದರೆ, ನಾಯಕನಾದವನು ಸತ್ಯ ನುಡಿಯುವುದು ನನ್ನ ಕರ್ತವ್ಯ ಎಂದು ನೇರ ನುಡಿದರು.
ಗಾಲ್ಫ್ ಕ್ಲಬ್‌ನ ಸುದೀರ್ಘ ಇತಿಹಾಸವನ್ನು ಸ್ಮರಿಸಿದ ಶಿವಕುಮಾರ್, 150 ವರ್ಷಗಳ ಇತಿಹಾಸವಿರುವ ಕ್ಲಬ್ ನಿಮ್ಮದು. ಆದರೆ, ಇಷ್ಟು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಮೂರ್ನಾಲ್ಕು ಗಾಲ್ಫ್ ಕೋರ್ಸ್‌ಗಳನ್ನಾದರೂ ನಿರ್ಮಿಸಬೇಕಿತ್ತು. ನಿಮ್ಮಲ್ಲಿರುವ ಉದ್ಯಮಿಗಳು, ಉನ್ನತ ಅಧಿಕಾರಿಗಳು ಹಾಗೂ ಸಾಮರ್ಥ್ಯವನ್ನು ಗಮನಿಸಿದರೆ, ಬೆಂಗಳೂರು ನಗರಕ್ಕೆ ನೀವು ನೀಡಿದ ಕೊಡುಗೆ ಇನ್ನೂ ಹೆಚ್ಚಿರಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಕೆಂಪೇಗೌಡ ವಿಮಾನ ನಿಲ್ದಾಣದ ಶಂಕುಸ್ಥಾಪನೆ ವೇಳೆ ಆಡಿದ ಮಾತುಗಳನ್ನು ಉಲ್ಲೇಖಿಸಿ, ಬೆಂಗಳೂರಿನ ಅಂತಾರಾಷ್ಟ್ರೀಯ ವರ್ಚಸ್ಸನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ನವೀಕರಣದ ಷರತ್ತು ಮತ್ತು ಮುನ್ನೋಟ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಈ ಕ್ಲಬ್‌ಗೆ ನೀಡಲಾಗಿದ್ದ ಅನುಮತಿಯನ್ನು ನವೀಕರಿಸಲಾಗಿದೆ. ಒಂದು ವೇಳೆ ನಾನು ಆ ಸ್ಥಾನದಲ್ಲಿದ್ದಿದ್ದರೆ, ಮುಂದಿನ ಪೀಳಿಗೆಗೆ ಒಂದೆರಡು ಗಾಲ್ಫ್ ಕೋರ್ಸ್ ನಿರ್ಮಿಸಿ ಕೊಡುವ ಷರತ್ತು ವಿಧಿಸುತ್ತಿದ್ದೆ. ಕೆಲಸ ಮಾಡುವವರ ವಿರುದ್ಧ ಟೀಕೆಗಳು ಬರುವುದು ಸಹಜ. ಆದರೆ, ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ತಮ್ಮ ಕೆಲಸದ ಶೈಲಿಯನ್ನು ಸಮರ್ಥಿಸಿಕೊಂಡರು. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿದಾಗ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು ನೀವು ಯಾವುದೇ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲವೇಕೆ? ಎಂದು ಕೇಳಿದರು. ಅದಕ್ಕೆ ನಾನು, ನಮ್ಮ ಬೆಂಗಳೂರಿಗೆ ಅಂತಹ ಒಪ್ಪಂದಗಳ ಅಗತ್ಯವಿಲ್ಲ. ಇಲ್ಲಿನ ಹವಾಮಾನ ಮತ್ತು ಮಾನವ ಸಂಪನ್ಮೂಲ ಬೇರೆಲ್ಲೂ ಇಲ್ಲ ಎಂದು ಉತ್ತರಿಸಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರಿದ್ದರೆ, ನಮ್ಮ ಬೆಂಗಳೂರಿನಲ್ಲಿ 26 ಲಕ್ಷ ಇಂಜಿನಿಯರ್‌ಗಳಿದ್ದಾರೆ. ಪ್ರತಿ ವರ್ಷ 13 ಸಾವಿರ ವೈದ್ಯರು ಹೊರಬರುತ್ತಿದ್ದಾರೆ. ಇದು ಬೆಂಗಳೂರಿನ ಜಾಗತಿಕ ಶಕ್ತಿ ಎಂದು ಬಣ್ಣಿಸಿದರು.
ನಗರದ ಸಂಚಾರ ದಟ್ಟಣೆ ಮತ್ತು ಸವಾಲುಗಳು
ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ನಗರದ ಜನಸಂಖ್ಯೆ 1.40 ಕೋಟಿ, ಆದರೆ ವಾಹನಗಳ ಸಂಖ್ಯೆ 1.35 ಕೋಟಿ. ಅಂದರೆ ಒಬ್ಬರಿಗೆ ಒಂದು ವಾಹನ ಎಂಬಂತಾಗಿದೆ. ವಿಶ್ವದ ಇತರೆ ನಗರಗಳಲ್ಲಿ 19% ರಸ್ತೆಗಳಿದ್ದರೆ, ಬೆಂಗಳೂರಿನಲ್ಲಿರುವುದು ಕೇವಲ ಶೇ.8 ಮಾತ್ರ. ನಗರವು ಯೋಜಿತವಾಗಿ ಬೆಳೆಯಲಿಲ್ಲ. ಈಗ ಮುಂದಿನ ವಿಸ್ತರಣೆಗಾಗಿ ನಮಗೆ ಸುಮಾರು 200 ಎಕರೆ ಜಾಗದ ಅಗತ್ಯವಿದೆ. ಅರಣ್ಯ ಇಲಾಖೆಯ ಜಾಗಗಳನ್ನು ಬಳಸಿಕೊಂಡು ಉದ್ಯಾನವನಗಳನ್ನು ನಿರ್ಮಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಟೀಕೆಗಳಿಗೆ ಅಂಜುವುದಿಲ್ಲ, ಅಭಿವೃದ್ಧಿಯೇ ಗುರಿ
ನಗರದ ಅಭಿವೃದ್ಧಿ ಯೋಜನೆಗಳಾದ ಟನಲ್ ರೋಡ್ (ಸುರಂಗ ರಸ್ತೆ) ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗಳ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಟನಲ್ ರಸ್ತೆ ಮಾಡುವಾಗ ಟೀಕೆಗಳು ಕೇಳಿಬರುತ್ತಿವೆ. ಆದರೆ, ಬೆಳೆದಿರುವ ನಗರದಲ್ಲಿ ಕಟ್ಟಡಗಳನ್ನು ಒಡೆದು ಹಾಕಲು ಸಾಧ್ಯವೇ? ಪರ್ಯಾಯ ಮಾರ್ಗಗಳನ್ನು ಹುಡುಕಲೇಬೇಕು. ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವಾಗಲೂ ಜನ ನಗುತ್ತಿದ್ದರು. ಆದರೆ ಇಂದು ಅದು ನೈಜತೆ. ಹಾಗೆಯೇ ಬೆಂಗಳೂರಿನ ಮೆಟ್ರೋ ವಿಸ್ತರಣೆ ಮತ್ತು ಟನಲ್ ರಸ್ತೆ ಯೋಜನೆಗಳನ್ನು ಪೂರೈಸಿಯೇ ತೀರುತ್ತೇವೆ ಎಂದು ದೃಢವಾಗಿ ನುಡಿದರು.

