VB-G RAM G ನೌಕರರ ಪ್ರತಿಭಟನೆ, ವೇತನವಿಲ್ಲದೆ ಜೀವನ ನಡೆಸುವುದಾದರೂ ಹೇಗೆ?, ಸೇವಾ ಭದ್ರತೆಗೆ ಆಗ್ರಹ
ಕೆಲಸದ ಭದ್ರತೆ, ವೇತನ ಸರಿಯಾದ ಸಮಯಕ್ಕೆ ಬರುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಬಿ-ಜಿ ರಾಮ್ ಜಿ ನೌಕರರು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಂದು ವಿಬಿ-ಜಿ ರಾಮ್‌ಜಿ ಹೊರಗುತ್ತಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬರೋಬ್ಬರಿ 12 ರಿಂದ 15 ವರ್ಷಗಳಿಂದ ದುಡಿದು, ಪ್ರಸ್ತುತ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ವಿಬಿ-ಜಿ ರಾಮ್‌ಜಿ)’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3,657ಕ್ಕೂ ಹೆಚ್ಚು ಸಿಬ್ಬಂದಿ ಬೀದಿಗಿಳಿದಿದ್ದಾರೆ. ನೂತನ ಯೋಜನೆಯಡಿ ಸಿಬ್ಬಂದಿ ಮುಂದುವರಿಕೆಗೆ ಅಧಿಕೃತ ಆದೇಶ ನೀಡಬೇಕು, ವೇತವ ಪ್ರತಿ ತಿಂಗಳು ನೀಡುವುದು ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ: ಕಾರ್ಮಿಕ ಇಲಾಖೆಯ ಸುತ್ತೋಲೆಯಂತೆ ಮುಂಬರುವ RDPR ನೇಮಕಾತಿಗಳಲ್ಲಿ ಹಾಲಿ ಸಿಬ್ಬಂದಿಗೆ ವೈಟೇಜ್, ಗರಿಷ್ಠ 30 ಅಂಕಗಳವರೆಗೆ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಎಂದು ಹೇಳಿದರು. ಮೂಲ ವೇತನಕ್ಕೆ ಶೇ. 25 ಹೆಚ್ಚಳ, ವಾರ್ಷಿಕ ಶೇ. 10 ರಷ್ಟು ಕಡ್ಡಾಯ ವೇತನ ಏರಿಕೆ ನೀಡಬೇಕು ಮತ್ತು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕು ಎಂದು ಆಗ್ರಹಿಸಿದರು. ಆರೋಗ್ಯ ವಿಮೆ ಹಾಗೂ ಮಹಿಳಾ ಸಿಬ್ಬಂದಿಗೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ದಿನಗಳ ವೇತನ ಸಹಿತ ಮುಟ್ಟಿನ ರಜೆ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಆರು ತಿಂಗಳಿಂದ ವೇತವ ಬಂದಿಲ್ಲ ಮಕ್ಕಳಿಗೆ ಸ್ಕೂಲ್‌ಫೀಸ್ ಕಟ್ಟಬೇಕು, ವಯಸ್ಸಾದ ತಂದೆ ತಾಯಿಗಳಿದ್ದಾರೆ ಅವರ ಆರೋಗ್ಯ ನೋಡಿಕೊಳ್ಳಬೇಕು ನಮ್ಮ ಪರಿಸ್ಥಿತಿ ಯಾರಿಗೆ ಹೇಳುವುದು ಎಂದು ನೋವನ್ನು ತೋಡಿಕೊಂಡರು.

