ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ; ಬೆಂಗಳೂರಿನ 23 ಪಿಜಿಗಳಿಗೆ ನೋಟಿಸ್
x

ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ; ಬೆಂಗಳೂರಿನ 23 ಪಿಜಿಗಳಿಗೆ ನೋಟಿಸ್

ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ; ಬೆಂಗಳೂರಿನ 23 ಪಿಜಿಗಳಿಗೆ ನೋಟಿಸ್

ರೇಡ್‌ ವೇಳೆ ಅವಧಿ ಮೀರಿದ ಮೊಸರು, ಅಕ್ಕಿ ಹಿಟ್ಟು, ಬಿಸಿಬೇಳೆಬಾತ್ ಪುಡಿ, ಕೃತಕ ಆಹಾರ ಬಣ್ಣ, ಕಾಳುಮೆಣಸು ಸೇರಿದಂತೆ ವಿವಿಧ ಆಹಾರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.


Click the Play button to hear this message in audio format

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಗ್ರೇಟರ್ ಬೆಂಗಳೂರು ವ್ಯಾಪ್ತಿಯ 64 ಪೇಯಿಂಗ್ ಗೆಸ್ಟ್‌ (PG) ವಸತಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಿದ್ದಾರೆ. ಪಿಜಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಹಾಗೂ ಸ್ವಚ್ಛತೆ ಕಾಪಾಡುತ್ತಿಲ್ಲ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.

23 ಪಿಜಿಗಳಿಗೆ ನೋಟಿಸ್

ತಪಾಸಣೆ ವೇಳೆ 23 ಪಿಜಿಗಳಲ್ಲಿ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ನಿಯಮಗಳ ಉಲ್ಲಂಘನೆ ಪತ್ತೆಯಾಗಿದ್ದು, ಸಂಬಂಧಪಟ್ಟವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಅವಧಿ ಮೀರಿದ ಮೊಸರು, ಅಕ್ಕಿ ಹಿಟ್ಟು, ಬಿಸಿಬೇಳೆಬಾತ್ ಪುಡಿ, ಕೃತಕ ಆಹಾರ ಬಣ್ಣ, ಕಾಳುಮೆಣಸು ಸೇರಿದಂತೆ ವಿವಿಧ ಆಹಾರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಲವು ಕಡೆ ಬ್ರ್ಯಾಂಡ್‌ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆಯೂ ಕಂಡುಬಂದಿದೆ.

ಆಹಾರದ 12 ಮಾದರಿ ಸಂಗ್ರಹ

ಪಿಜಿಗಳಲ್ಲಿ ತಯಾರಿಸುವ ಹಾಗೂ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಲು ಅಧಿಕಾರಿಗಳು 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದಾರೆ. ಆಹಾರ ಸಂಗ್ರಹಣೆ, ತಯಾರಿಕೆ, ಸ್ವಚ್ಛತೆ ಹಾಗೂ ಸುರಕ್ಷತಾ ನಿಯಮಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಬೊಮ್ಮನಸಂದ್ರದ ನಂದನಾ ಎಲೈಟ್‌ ಪಿಜಿಯಲ್ಲಿ ಗಂಭೀರ ನೈರ್ಮಲ್ಯ ಉಲ್ಲಂಘನೆ ಪತ್ತೆಯಾಗಿದೆ. ಆಹಾರ ಪದಾರ್ಥಗಳಿದ್ದ ಊಟದ ಮೇಜಿನ ಬಳಿಯೇ ತಿಗಣೆ ನಿವಾರಕ ಪುಡಿ ಪತ್ತೆಯಾಗಿದ್ದು, ಕುಡಿಯುವ ನೀರಿನ ಸ್ಥಳದಲ್ಲೂ ಅನಗತ್ಯ ವಸ್ತುಗಳನ್ನು ಸಂಗ್ರಹಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಿಜಿಯ ಊಟದ ಪ್ರದೇಶವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.

ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಿಜಿ ಮಾಲೀಕರು ಹಾಗೂ ಆಹಾರ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಇಲಾಖೆ ಸೂಚಿಸಿದೆ. ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story