
ದೀಪಾವಳಿ ಮೊದಲ ದಿನವೇ ಬೆಂಗಳೂರಿನಲ್ಲಿ 32 ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಇತ್ತ ಕಲಬುರಗಿಯಲ್ಲಿ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಪಟಾಕಿಯಿಂದ ಬೆಂಗಳೂರಿನಲ್ಲಿ 32 ಜನರಿಗೆ ಗಾಯ; ಕಲಬುರಗಿಯಲ್ಲಿ ಬಾಲಕ ಬಲಿ
ಪಟಾಕಿ ಸಿಡಿಸಿದ ತಕ್ಷಣ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ವಿಶೇಷವಾಗಿ ಮಕ್ಕಳು ಪಟಾಕಿ ಮುಟ್ಟಿದ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸದಂತೆ ನೋಡಿಕೊಳ್ಳಬೇಕು. ಕಣ್ಣಿಗೆ ಗಾಯವಾದ ಸಂದರ್ಭದಲ್ಲಿ ಯಾವುದೇ ರೀತಿಯ ಮನೆಮದ್ದುಗಳನ್ನು ಪ್ರಯೋಗಿಸಬಾರದು.
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಸಿಡಿತದ ಅವಘಡಗಳು ಆತಂಕ ಮೂಡಿಸಿವೆ. ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ಪಟಾಕಿಗಳ ಅಜಾಗರೂಕ ಬಳಕೆಯಿಂದ ಅಪಾಯಗಳು ಸಂಭವಿಸುತ್ತಿವೆ. ಪ್ರತಿ ವರ್ಷ ಪಟಾಕಿ ಸಿಡಿಸುವ ವೇಳೆ ಗಾಯಗಳು ಮತ್ತು ಸಾವು ಸಂಭವಿಸುತ್ತಿದ್ದರೂ, ಎಚ್ಚರಿಕೆ ವಹಿಸುವಲ್ಲಿ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಬಾರಿಯೂ ಹಬ್ಬದ ಆರಂಭದಲ್ಲೇ ಹಲವು ಅವಘಡಗಳು ವರದಿಯಾಗಿವೆ.
ದೀಪಾವಳಿಯ ಮೊದಲ ದಿನವೇ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ 32 ಮಂದಿ ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ. ಗಾಯಾಳುಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾರಾಯಣ ನೇತ್ರಾಲಯವೊಂದರಲ್ಲೇ 20 ಮಂದಿ ಪಟಾಕಿ ಸಂಬಂಧಿತ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 13 ಬಾಲಕರು ಹಾಗೂ 7 ವಯಸ್ಕರಿದ್ದಾರೆ. ಒಟ್ಟು 20 ಪ್ರಕರಣಗಳ ಪೈಕಿ 17 ಮಂದಿ ಸ್ವತಃ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಟಾಕಿ ಎಂದು ಭಾವಿಸಿ ಮದ್ದಿಗೆ ಬೆಂಕಿ: 15 ವರ್ಷದ ಬಾಲಕ ಸಾವು
ಇತ್ತ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ದುರಂತವೊಂದು ಸಂಭವಿಸಿದೆ. ಪಟಾಕಿ ಎಂದು ಭಾವಿಸಿ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಭೀಮರಾಯ ಮೃತಪಟ್ಟಿದ್ದಾನೆ.
ಕಾಡುಹಂದಿಗಳನ್ನು ಓಡಿಸುವ ಉದ್ದೇಶದಿಂದ ಬಾಲಕನ ತಂದೆ ಮದ್ದನ್ನು ತಂದಿಟ್ಟಿದ್ದರು ಎನ್ನಲಾಗಿದೆ. ಆದರೆ ಅದನ್ನು ಪಟಾಕಿ ಎಂದು ಭಾವಿಸಿದ ಭೀಮರಾಯ ಬೆಂಕಿ ಹಚ್ಚಿದ್ದಾನೆ. ಕ್ಷಣಾರ್ಧದಲ್ಲೇ ಭಾರೀ ಸ್ಫೋಟ ಸಂಭವಿಸಿದ್ದು, ಬಾಲಕನ ಮುಖ ಮತ್ತು ತಲೆಗೆ ತೀವ್ರ ಗಾಯಗಳಾಗಿವೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈ ಘಟನೆ ಶೋಕದ ವಾತಾವರಣ ಸೃಷ್ಟಿಸಿದೆ.
ಕಣ್ಣಿಗೆ ಪಟಾಕಿ ಕಿಡಿ ಬಿದ್ದರೆ ತಕ್ಷಣ ಏನು ಮಾಡಬೇಕು?
ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗುವುದು ಅತ್ಯಂತ ಗಂಭೀರ ಸಮಸ್ಯೆ. ಸಣ್ಣ ಪ್ರಮಾಣದ ಕಿಡಿ ಬಿದ್ದರೂ ಕಣ್ಣಿನ ದೃಷ್ಟಿಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಪಟಾಕಿ ಅವಘಡ ಸಂಭವಿಸಿದಾಗ ತಕ್ಷಣ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಈ ಕುರಿತು ನಾರಾಯಣ ನೇತ್ರಾಲಯದ ನೇತ್ರತಜ್ಞ ಹಾಗೂ ನಿರ್ದೇಶಕ ಡಾ. ನರೇನ್ ಶೆಟ್ಟಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ.
ಕಣ್ಣಿಗೆ ಪಟಾಕಿಯ ಕಿಡಿ ಅಥವಾ ರಾಸಾಯನಿಕ ಪದಾರ್ಥ ತಗುಲಿದರೆ ತಕ್ಷಣ ಶುದ್ಧವಾದ ತಣ್ಣೀರಿನಿಂದ ಕಣ್ಣನ್ನು ನಿಧಾನವಾಗಿ ತೊಳೆಯಬೇಕು. ಕಣ್ಣಿನಲ್ಲಿ ಉರಿ ಅಥವಾ ತುರಿಕೆ ಕಾಣಿಸಿಕೊಂಡರೂ ಕೈಗಳಿಂದ ಉಜ್ಜಬಾರದು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಅಂಟಿಕೊಳ್ಳುವ ರಾಸಾಯನಿಕ ಅಂಶಗಳು ಕಣ್ಣಿಗೆ ತಗುಲಿದರೆ ಕಿರಿಕಿರಿ, ಕೆಂಪಾಗುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಪಟಾಕಿ ಅವಘಡದ ವೇಳೆ ಈ ತಪ್ಪುಗಳನ್ನು ಮಾಡಬೇಡಿ
ಪಟಾಕಿ ಸಿಡಿಸಿದ ತಕ್ಷಣ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ವಿಶೇಷವಾಗಿ ಮಕ್ಕಳು ಪಟಾಕಿ ಮುಟ್ಟಿದ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸದಂತೆ ನೋಡಿಕೊಳ್ಳಬೇಕು. ಕಣ್ಣಿಗೆ ಗಾಯವಾದ ಸಂದರ್ಭದಲ್ಲಿ ಯಾವುದೇ ರೀತಿಯ ಮನೆಮದ್ದುಗಳನ್ನು ಪ್ರಯೋಗಿಸಬಾರದು. ಕಣ್ಣಿಗೆ ಹಾನಿಯಾಗಿದೆ ಎಂಬ ಅನುಮಾನ ಬಂದರೂ ವಿಳಂಬ ಮಾಡದೆ ನೇತ್ರತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
ಪಟಾಕಿ ಸಿಡಿಸುವಾಗ ಕನ್ನಡಕ ಧರಿಸುವುದು ಉತ್ತಮ
ಪಟಾಕಿಗಳಿಂದ ಹೊರಬರುವ ಕಿಡಿ, ಹೊಗೆ ಮತ್ತು ರಾಸಾಯನಿಕ ಕಣಗಳು ಕಣ್ಣುಗಳಿಗೆ ಹಾನಿ ಉಂಟುಮಾಡಬಹುದು. ಹೀಗಾಗಿ ಪಟಾಕಿ ಸಿಡಿಸುವಾಗ ಸೂಕ್ತ ರಕ್ಷಣಾತ್ಮಕ ಕನ್ನಡಕ ಧರಿಸುವುದು ಉತ್ತಮ. ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಅವರ ಜೊತೆಗಿದ್ದು ಸುರಕ್ಷತೆಯ ಬಗ್ಗೆ ಗಮನಹರಿಸಬೇಕು.
ದೀಪಾವಳಿಯ ಸಂಭ್ರಮದಲ್ಲಿ ಸಣ್ಣ ನಿರ್ಲಕ್ಷ್ಯವೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಹೀಗಾಗಿ ಹಬ್ಬದ ಆಚರಣೆಯ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

