
ಬೆಂಗಳೂರಿನಲ್ಲಿ ಉಗಾಂಡಾ ಮಹಿಳೆಗೆ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿದೆ.
ಬೆಂಗಳೂರಿನಲ್ಲಿ ಎಬೋಲಾ ಶಂಕೆ: ಉಗಾಂಡಾ ಮಹಿಳೆ ಆಸ್ಪತ್ರೆಗೆ ದಾಖಲು
ಬೆಂಗಳೂರಿನಲ್ಲಿ ಉಗಾಂಡಾ ಮಹಿಳೆಗೆ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿದ್ದು, ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ನಿಗಾ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಶಂಕಿತ ಎಬೋಲಾ ರೋಗದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಉಗಾಂಡಾ ದೇಶದ 28 ವರ್ಷದ ಮಹಿಳೆಯೊಬ್ಬರನ್ನು ಮಂಗಳವಾರದಂದು ನಗರದ ಸರ್ಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಎಬೋಲಾ ಪೀಡಿತ ಪ್ರದೇಶದಿಂದ ಪ್ರಯಾಣ ಬೆಳೆಸಿದ್ದ ಈಕೆಗೆ ಮೈ ಕೈ ನೋವಿನಂತಹ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಆಕೆಯನ್ನು ತಂಗಿದ್ದ ಹೋಟೆಲ್‌ನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸದ್ಯಕ್ಕೆ ಆಕೆಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯ ದೇಹದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗಿದ್ದು, ಸದ್ಯ ವೈದ್ಯಕೀಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಆಫ್ರಿಕಾದ ಕಾಂಗೋ ಮತ್ತು ಉಗಾಂಡಾ ದೇಶಗಳಲ್ಲಿ ಎಬೋಲಾ ರೋಗವು ದಿಢೀರನೆ ವ್ಯಾಪಕವಾಗಿ ಹರಡುತ್ತಿರುವುದನ್ನು ಗಮನಿಸಿ 'ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ' ಎಂದು ಘೋಷಿಸಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಆಫ್ರಿಕಾದ ಪೀಡಿತ ದೇಶಗಳಿಂದ ಹಿಂದಿರುಗುವ ಪ್ರಯಾಣಿಕರು ಕಡ್ಡಾಯವಾಗಿ 21 ದಿನಗಳವರೆಗೆ ಸ್ವಯಂ ಆರೋಗ್ಯ ಮೇಲ್ವಿಚಾರಣೆಗೆ ಒಳಗಾಗಬೇಕು ಎಂದು ಸೂಚಿಸಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡುವಂತೆ ತಿಳಿಸಲಾಗಿದ್ದು, ಕಣ್ಗಾವಲು ನಡೆಸಲು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸನ್ನದ್ಧಗೊಳಿಸಲಾಗಿದೆ.
ರಾಜ್ಯ ಸರ್ಕಾರವು ಮುನ್ನೆಚ್ಚರಿಕೆಯಾಗಿ ಪ್ರತ್ಯೇಕ ಚಿಕಿತ್ಸಾ ಕೇಂದ್ರಗಳನ್ನು ಗುರುತಿಸಿದೆ. ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯನ್ನು ಮುಖ್ಯ ಪ್ರತ್ಯೇಕತಾ ಕೇಂದ್ರವಾಗಿ ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ಸಂಪರ್ಕ ತಡೆ ಹಾಗೂ ಚಿಕಿತ್ಸಾ ಸೌಲಭ್ಯವಾಗಿ ನಿಗದಿಪಡಿಸಲಾಗಿದೆ. ಇದೇ ರೀತಿ ಮಂಗಳೂರಿನಲ್ಲಿ ಶ್ರೀನಿವಾಸ ಬಂದರು ಆಸ್ಪತ್ರೆಯನ್ನು ಸಂಪರ್ಕ ತಡೆ ಕೇಂದ್ರವಾಗಿ ಹಾಗೂ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಪ್ರತ್ಯೇಕ ಚಿಕಿತ್ಸಾ ಕೇಂದ್ರವಾಗಿ ಬಳಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

