ಪಾಲಿಕೆಯಿಂದಲೇ ಖಾಲಿ ಸೈಟ್‌ ಸ್ವಚ್ಛತೆ, ಆಸ್ತಿ ತೆರಿಗೆಯೊಂದಿಗೆ ವೆಚ್ಚ ವಸೂಲಿ
x

ಪಾಲಿಕೆಯಿಂದಲೇ ಖಾಲಿ ಸೈಟ್‌ ಸ್ವಚ್ಛತೆ, ಆಸ್ತಿ ತೆರಿಗೆಯೊಂದಿಗೆ ವೆಚ್ಚ ವಸೂಲಿ

ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಕಳೆ ಗಿಡಗಳು, ಪೊದೆಗಳು ಹಾಗೂ ಸಾರ್ವಜನಿಕರು ತಂದು ಸುರಿದಿರುವ ಕಸವನ್ನು ತೆರವುಗೊಳಿಸಲು ಮಾಲೀಕರಿಗೆ ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದೆ.


ಫುಟ್‌ಪಾತ್ ಒತ್ತುವರಿ ತೆರವು ಮತ್ತು ರಸ್ತೆ ಬದಿಯ ಅನಾಥ ವಾಹನಗಳ ಜಪ್ತಿ ಕಾರ್ಯಾಚರಣೆ ಬೆನ್ನಲ್ಲೇ, ಸಿಲಿಕಾನ್ ಸಿಟಿಯನ್ನು ಕಸಮುಕ್ತಗೊಳಿಸಲು ರಾಜ್ಯ ಸರ್ಕಾರ ಮತ್ತೊಂದು ಬೃಹತ್ ಜನಾಂದೋಲನಕ್ಕೆ ಸಜ್ಜಾಗಿದೆ. ಆಗಸ್ಟ್ 1ರಿಂದ ನಗರದಾದ್ಯಂತ ಒಂದು ತಿಂಗಳು ನಡೆಸಲು ಉದ್ದೇಶಿಸಿರುವ ಮಹತ್ವದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಸಿಗಲಿದೆ.

ಇತ್ತೀಚೆಗೆ ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಹಾಗೂ ಐದೂ ಪಾಲಿಕೆಗಳ ಆಯುಕ್ತರೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ ಸಚಿವರು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ಖಾಲಿ ನಿವೇಶನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಸರ್ಕಾರ

ನಗರದಲ್ಲಿ ಕಸದ ಕೊಂಪೆಯಾಗಿ ಮಾರ್ಪಟ್ಟಿರುವ ಖಾಲಿ ಸೈಟ್‌ಗಳ ಮಾಲೀಕರಿಗೆ ಈ ಬಾರಿ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ.

"ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಕಳೆ ಗಿಡಗಳು, ಪೊದೆಗಳು ಹಾಗೂ ಸಾರ್ವಜನಿಕರು ತಂದು ಸುರಿದಿರುವ ಕಸವನ್ನು ತೆರವುಗೊಳಿಸಲು ಮಾಲೀಕರಿಗೆ ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಮಾಲೀಕರು ತಮ್ಮ ಜಾಗವನ್ನು ಸ್ವಚ್ಛಗೊಳಿಸದಿದ್ದರೆ, ಆಗಸ್ಟ್ 15ರ ನಂತರ ನಗರಾಡಳಿತವೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದೆ. ಆದರೆ, ಈ ಕಾರ್ಯಾಚರಣೆಗೆ ತಗುಲಿದ ಸಂಪೂರ್ಣ ವೆಚ್ಚವನ್ನು ಆಯಾ ನಿವೇಶನ ಮಾಲೀಕರ ಆಸ್ತಿ ತೆರಿಗೆಯ ಬಾಕಿಗೆ ಸೇರಿಸಿ ಕಟ್ಟುನಿಟ್ಟಾಗಿ ವಸೂಲಿ ಮಾಡಲಾಗುವುದು," ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

1,616 ಬ್ಲಾಕ್ ಸ್ಪಾಟ್‌ಗಳ ಗುರುತು

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಈಗಾಗಲೇ ನಗರದಾದ್ಯಂತ ಸಮೀಕ್ಷೆ ನಡೆಸಿದ್ದು, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 22,732 ಟನ್ ತ್ಯಾಜ್ಯ ಸಂಗ್ರಹಗೊಂಡಿರುವ 1,616 ಪ್ರಮುಖ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದೆ. ಈ ಎಲ್ಲ ಜಾಗಗಳನ್ನು ಸಂಪೂರ್ಣವಾಗಿ ಕಸಮುಕ್ತಗೊಳಿಸಲು ಸಮಗ್ರ ನೀಲನಕ್ಷೆ ಸಿದ್ಧಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಲಾಖೆಗಳ ಸಮನ್ವಯಕ್ಕೆ ಸೂಚನೆ

ಕೇವಲ ಪಾಲಿಕೆ ಮಾತ್ರವಲ್ಲದೆ ಬಿಎಂಆರ್‌ಸಿಎಲ್, ರೈಲ್ವೆ ಇಲಾಖೆ, ಕೆ-ರೈಡ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯ ಮತ್ತು ಮಣ್ಣಿನ ರಾಶಿಗಳನ್ನು ತೆರವುಗೊಳಿಸಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಸಭೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ನಗರದ ಎಲ್ಲೆಂದರಲ್ಲಿ ರಾತ್ರೋರಾತ್ರಿ ಕಟ್ಟಡ ಅವಶೇಷಗಳು ಮತ್ತು ಮಣ್ಣನ್ನು ಸುರಿಯುವ ದಂಧೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಕಟ್ಟಡ ತ್ಯಾಜ್ಯ ಸಾಗಿಸುವ ಪ್ರತಿಯೊಂದು ವಾಹನವೂ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಆ ವಾಹನಗಳಿಗೆ ಉಪಕರಣ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಇದರಿಂದ ಅನಧಿಕೃತವಾಗಿ ಕಸ ಸುರಿಯುವವರನ್ನು ಸುಲಭವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬಹುದಾಗಿದೆ. ಜೊತೆಗೆ ನಗರದಲ್ಲಿ ಅಳವಡಿಸಲಾಗಿರುವ ಅಕ್ರಮ ಹೋರ್ಡಿಂಗ್ಸ್ ಹಾಗೂ ಡಿಜಿಟಲ್ ಜಾಹೀರಾತು ಫಲಕಗಳ ವಿರುದ್ಧವೂ ತನಿಖೆ ನಡೆಸಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಈಗಾಗಲೇ ಫುಟ್‌ಪಾತ್ ಅಭಿಯಾನ ಯಶಸ್ವಿಯಾಗಿದ್ದು, ಸುಮಾರು 1,500 ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಅಂಗಡಿ ಮುಂಗಟ್ಟುಗಳು ಮಾಡಿಕೊಂಡಿದ್ದ 10 ಸಾವಿರಕ್ಕೂ ಹೆಚ್ಚು ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಎರಡನೇ ಹಂತವಾಗಿ ಕಸ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಸಹ ಸಹಕರಿಸಬೇಕು," ಎಂದು ಸಚಿವರು ಮನವಿ ಮಾಡಿದ್ದಾರೆ.

Read More
Next Story