ಜನಿವಾರ ತೆಗೆಸಿದ ಪ್ರಕರಣ| ಕಾಲೇಜು ಮಾನ್ಯತೆ ರದ್ದತಿಗೆ ಬ್ರಾಹ್ಮಣ ಮಹಾಸಭಾ ಆಗ್ರಹ
x
ಜನಿವಾರ

ಜನಿವಾರ ತೆಗೆಸಿದ ಪ್ರಕರಣ| ಕಾಲೇಜು ಮಾನ್ಯತೆ ರದ್ದತಿಗೆ ಬ್ರಾಹ್ಮಣ ಮಹಾಸಭಾ ಆಗ್ರಹ

ಕಾಲೇಜಿಗೆ 25 ಲಕ್ಷ ರೂ. ದಂಡ ವಿಧಿಸಬೇಕು ಎಂದು ಬ್ರಾಹ್ಮಣ ಮಹಾಸಭಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದೆ.


ಬೆಂಗಳೂರಿನ ಮಡಿವಾಳದ ಖಾಸಗಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಆನಂದ್ ಸುಧೀರ್ ರಾವ್ ಸೇರಿ ಐದಕ್ಕೂ ಹೆಚ್ಚು ಬ್ರಾಹ್ಮಣ ವಿದ್ಯಾರ್ಥಿಗಳಿಂದ ಬಲವಂತವಾಗಿ ಜನಿವಾರ ತೆಗೆಸಿದ ಕಾಲೇಜು ಸಿಬ್ಬಂದಿಯ ಕ್ರಮದಿಂದ ಸಮುದಾಯಕ್ಕೆ ಅಪಮಾನವಾಗಿದೆ. ಕೂಡಲೇ ಕಾಲೇಜಿನ ಮಾನ್ಯತೆ ರದ್ದು ಮಾಡಬೇಕು. ಅಲ್ಲದೇ ಕಾಲೇಜಿಗೆ 25 ಲಕ್ಷ ರೂ. ದಂಡ ವಿಧಿಸಬೇಕು ಎಂದು ಬ್ರಾಹ್ಮಣ ಮಹಾಸಭಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ನಿಯಮಗಳಲ್ಲಿ ಜನಿವಾರ ತೆಗೆಸುವ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲದಿದ್ದರೂ, ಸಿಬ್ಬಂದಿ ಉದ್ದೇಶಪೂರ್ವಕವಾಗಿ ನಡೆದುಕೊಂಡಿರುವುದು ಸಮುದಾಯದ ಮೇಲಿನ ಅತಿಕ್ರಮ ಎಂದು ಮಹಾಸಭಾ ಆಕ್ರೋಶ ಹೊರ ಹಾಕಿದೆ.

ಘಟನೆಯ ಕುರಿತಂತೆ ದ ಫೆಡರಲ್‌ ಕರ್ನಾಟಕಕ್ಕೆ ಸಂದರ್ಶನ ನೀಡಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಅವರು, ಇದು ಅತ್ಯಂತ ದುರದೃಷ್ಟಕರ ಸಂಗತಿ. ಜನಿವಾರ ತೆಗೆಸಿದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮಾನಸಿಕ ಸಂಕಟ ಅನುಭವಿಸಿದ್ದಾರೆ," ಎಂದು ಕಿಡಿಕಾರಿದ್ದಾರೆ.

ಮಹಾಸಭಾದ ಬೇಡಿಕೆಯಲ್ಲಿ ಏನಿದೆ?

ಬ್ರಾಹ್ಮಣ ಮಹಾಸಭಾದ ನಿಯೋಗವು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪರೀಕ್ಷಾ ಕೇಂದ್ರದ ಕಾಲೇಜಿನ ಮಾನ್ಯತೆಯನ್ನು ತಕ್ಷಣವೇ ರದ್ದುಗೊಳಿಸಬೇಕು.

ಧಾರ್ಮಿಕ ಹಕ್ಕಿನ ಉಲ್ಲಂಘನೆ ಮಾಡಿದ ಶಿಕ್ಷಣ ಸಂಸ್ಥೆಗೆ ಕನಿಷ್ಠ 25 ಲಕ್ಷ ರೂ.ದಂಡ ವಿಧಿಸಬೇಕು. ಈ ಕೃತ್ಯದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಬೇಕು.

ಸಿಇಟಿ ಪರೀಕ್ಷೆಯಲ್ಲಿ ಮಾನಸಿಕವಾಗಿ ನೊಂದ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದರೆ ಅಥವಾ ಅನುತ್ತೀರ್ಣರಾದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕು. ವಿದ್ಯಾರ್ಥಿ ಭವಿಷ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಮಹಾಸಭಾದಿಂದ ಒತ್ತಾಯಿಸಲಾಗಿದೆ.

ಚಿಕ್ಕಬಳ್ಳಾಪುರದಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ?

ಚಿಕ್ಕಬಳ್ಳಾಪುರ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಪ್ರಕರಣ ವರದಿಯಾಗಿದೆ ಎನ್ನಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ವಿಳಂಬವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಕಳೆದ ವರ್ಷ ಇಂತಹದ್ದೇ ಘಟನೆ ನಡೆದಾಗ ಹೈಕೋರ್ಟ್ ಮೆಟ್ಟಿಲೇರಿದ್ದೆವು. 2025ರ ಡಿಸೆಂಬರ್ನಲ್ಲಿ ಸರ್ಕಾರವು ಇಂತಹ ಘಟನೆಗಳು ಮರುಕಳಿಸದಂತೆ ಭರವಸೆ ನೀಡಿತ್ತು. ಆದರೆ, ಭರವಸೆ ಮೀರಿ ಮತ್ತೆ ಇಂತಹ ಕೃತ್ಯ ನಡೆದಿರುವುದು ಸರ್ಕಾರದ ವೈಫಲ್ಯ," ಎಂದು ಮಹಾಸಭಾ ದೂರಿದೆ.

ನ್ಯಾಯ ಸಿಗುವವರೆಗೂ ಸಮುದಾಯದ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಮಹಾಸಭಾ ಎಚ್ಚರಿಕೆ ನೀಡಿದೆ.

Read More
Next Story