
ಬೆಂಗಳೂರಿನಲ್ಲಿ ಆಯುಕ್ತರ ರಾತ್ರಿ ಸಂಚಾರ: ಫುಟ್‌ಪಾತ್ ಒತ್ತುವರಿ ತೆರವಿಗೆ ಖಡಕ್ ಸೂಚನೆ
ಹಳೆಯ ಮದ್ರಾಸ್ ರಸ್ತೆಯಲ್ಲಿ ಸಂಚರಿಸುವಾಗ ಅನಗತ್ಯ ವಿದ್ಯುತ್ ಕಂಬಗಳು, ಅನಧಿಕೃತ ಜಾಹೀರಾತು ಫಲಕಗಳು ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಅನಗತ್ಯ ಬಸ್ ತಂಗುದಾಣಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ನಗರದ ರಸ್ತೆಗಳು, ಪಾದಚಾರಿ ಮಾರ್ಗಗಳು, ಬೀದಿ ದೀಪಗಳು ಹಾಗೂ ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ರಾತ್ರಿ ವೇಳೆ ನಗರ ಪ್ರದಕ್ಷಿಣೆ ನಡೆಸಿದ್ದಾರೆ. ನವೆಂಬರ್ 20ರ ಶುಕ್ರವಾರ ತಡರಾತ್ರಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ನಗರದ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿದ ಅವರು, ಸ್ಥಳದಲ್ಲೇ ಕಂಡುಬಂದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಟ್ರಿನಿಟಿ ಸರ್ಕಲ್‌ನಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಪಾದಚಾರಿ ಮಾರ್ಗದ ಮೇಲೆ ಚರಂಡಿ ಹೂಳು ಸಂಗ್ರಹವಾಗಿರುವುದು ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಸಂಪರ್ಕಗಳ ಕೇಬಲ್‌ಗಳು ಅಸ್ತವ್ಯಸ್ತವಾಗಿ ಬಿದ್ದಿರುವುದು ಆಯುಕ್ತರ ಗಮನಕ್ಕೆ ಬಂದಿದೆ. ಅಪಾಯಕಾರಿಯಾಗಿ ಚಾಚಿಕೊಂಡಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವುದು, ಮರಗಳ ಸುತ್ತಲೂ ಟ್ರೀ ಪಿಟ್ ನಿರ್ಮಿಸುವುದು ಹಾಗೂ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿ ದುರಸ್ತಿಪಡಿಸುವಂತೆ ಅವರು ನಿರ್ದೇಶಿಸಿದ್ದಾರೆ. ಇದೇ ವೇಳೆ ಭಾಸ್ಕರನ್ ರಸ್ತೆಯಲ್ಲಿ ಈ ಹಿಂದೆ ರಸ್ತೆ ಮೂಲಸೌಕರ್ಯ ಇಲಾಖೆಯಿಂದ ನಿರ್ಮಿಸಲಾಗಿದ್ದ ವೈಟ್ ಟಾಪಿಂಗ್ ರಸ್ತೆಯ ಬದಿಯಲ್ಲಿ ಕುಸಿತ ಉಂಟಾಗಿರುವುದನ್ನು ಗಮನಿಸಿದ ಆಯುಕ್ತರು, ಬಿ-ಸ್ಮೈಲ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕುಸಿದಿರುವ ಭಾಗವನ್ನು ತ್ವರಿತವಾಗಿ ದುರಸ್ತಿ ಮಾಡುವಂತೆ ಸೂಚಿಸಿದರು.
ರಿಚ್ಮಂಡ್ ರಸ್ತೆಯಲ್ಲಿ ಸ್ವಚ್ಛತೆಗೆ ಆದ್ಯತೆ:
ಹಳೆಯ ಮದ್ರಾಸ್ ರಸ್ತೆಯಲ್ಲಿ ಸಂಚರಿಸುವಾಗ ಅನಗತ್ಯ ವಿದ್ಯುತ್ ಕಂಬಗಳು, ಅನಧಿಕೃತ ಜಾಹೀರಾತು ಫಲಕಗಳು ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಅನಗತ್ಯ ಬಸ್ ತಂಗುದಾಣಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಸೂಚಿಸಿದ್ದಾರೆ. ಲೈಫ್‌ಸ್ಟೈಲ್ ಸರ್ಕಲ್‌ನಿಂದ ರಿಚ್ಮಂಡ್ ರಸ್ತೆಯವರೆಗೆ ಪರಿಶೀಲನೆ ನಡೆಸಿದ ವೇಳೆ, ಪಾದಚಾರಿ ಮಾರ್ಗಗಳ ಮೇಲೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯುವವರ ವಿರುದ್ಧ ದಂಡ ವಿಧಿಸುವುದು, ತಳ್ಳುವ ಗಾಡಿಗಳನ್ನು ತೆರವುಗೊಳಿಸುವುದು ಹಾಗೂ ಹಾಳಾಗಿರುವ ಬೀದಿ ದೀಪಗಳನ್ನು ತಕ್ಷಣ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ನಿರ್ದೇಶನ:
ನಗರದ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ವೈಟ್ ಟಾಪಿಂಗ್ ಮತ್ತು ಡಾಂಬರೀಕರಣ ಕಾಮಗಾರಿಗಳನ್ನು ಪರಿಶೀಲಿಸಿದ ಆಯುಕ್ತರು, ನಿಗದಿತ ತಾಂತ್ರಿಕ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪ್ರತಿಯೊಂದು ಹಂತದಲ್ಲೂ ಗುಣಮಟ್ಟದ ಪರಿಶೀಲನೆ ನಡೆಸಬೇಕು ಎಂದು ತಾಕೀತು ಮಾಡಿದರು. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಬ್ಯಾರಿಕೇಡ್ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಈ ತಪಾಸಣೆಯ ವೇಳೆ ಅಭಿವೃದ್ಧಿ ವಿಭಾಗದ ಅಪರ ಆಯುಕ್ತ ವೆಂಕಟಾಚಲಪತಿ ಆರ್., ಜಂಟಿ ಆಯುಕ್ತರಾದ ಹೇಮಂತ್ ಶರಣ್ ಮತ್ತು ಸಪ್ತಶ್ರೀ, ಮುಖ್ಯ ಎಂಜಿನಿಯರ್‌ಗಳಾದ ವಿಜಯ್ ಕುಮಾರ್ ಮತ್ತು ಹರಿದಾಸ್ ಸೇರಿದಂತೆ ಹಲವು ಅಧಿಕಾರಿಗಳು ಜತೆಗಿದ್ದರು.

