ಡಿಜಿಟಲ್ ಸ್ಕ್ಯಾನರ್‌ ಬಳಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್ ಸೆರೆ
x

ಡಿಜಿಟಲ್ ಸ್ಕ್ಯಾನರ್‌ ಬಳಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್ ಸೆರೆ

ಇಸ್ಪೀಟ್ ಅಡ್ಡೆಗಳಲ್ಲಿ ಕೇವಲ ಅದೃಷ್ಟವನ್ನು ನಂಬಿ ಆಡುವವರನ್ನು ಆಧುನಿಕ ಎಲೆಕ್ಟ್ರಾನಿಕ್ ಡಿವೈಸ್‌ಗಳ ಮೂಲಕ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ತಂತ್ರಗಳು ಅಚ್ಚರಿಯನ್ನುಂಟು ಮಾಡಿವೆ.


Click the Play button to hear this message in audio format

ಬೆಂಗಳೂರಿನ ಸಿಸಿಬಿ ಪೊಲೀಸರು ಇತ್ತೀಚೆಗೆ ಕಾರ್ಯಾಚರಣೆಯೊಂದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಜೂಜಾಟದಲ್ಲಿ ವಂಚನೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವ ಮೂಲಕ ಅಕ್ರಮ ಜೂಜಾಟದ ಲೋಕದ ಮತ್ತೊಂದು ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ. ಇಸ್ಪೀಟ್ ಅಡ್ಡೆಗಳಲ್ಲಿ ಕೇವಲ ಅದೃಷ್ಟವನ್ನು ನಂಬಿ ಆಡುವವರನ್ನು ಆಧುನಿಕ ಎಲೆಕ್ಟ್ರಾನಿಕ್ ಡಿವೈಸ್‌ಗಳ ಮೂಲಕ ವಂಚಿಸುತ್ತಿದ್ದ ಈ ಖತರ್ನಾಕ್ ಗ್ಯಾಂಗ್‌ನ ತಂತ್ರಗಳು ಅಚ್ಚರಿಯನ್ನುಂಟು ಮಾಡಿವೆ.

ಸಿಸಿಬಿ ವಿಶೇಷ ವಿಚಾರಣಾ ದಳ ನಡೆಸಿದ ದಾಳಿಯಲ್ಲಿ ತಬ್ರೇಜ್, ಸೈಯ್ಯದ್ ಅಲಿ, ಅಬತ್ಹಲ್ಲಾ, ನಕೀಬ್ ಹಾಗೂ ಅಬ್ದುಲ್ ಎಂಬ ಐವರನ್ನು ಬಂಧಿಸಲಾಗಿದೆ. ಈ ಆರೋಪಿಗಳಿಂದ ಪೊಲೀಸರು 50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ ಒಂದು ಕಾರು, ಒಂದು ಆಟೋ, ಮೂರು ದ್ವಿಚಕ್ರ ವಾಹನಗಳು, 7 ಮೊಬೈಲ್‌ಗಳು ಮತ್ತು ಅಕ್ರಮಕ್ಕೆ ಬಳಸುತ್ತಿದ್ದ ಅತ್ಯಾಧುನಿಕ ಡಿಜಿಟಲ್ ಇಸ್ಪೀಟ್ ಸ್ಕ್ಯಾನರ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿವೆ. ಈ ಗ್ಯಾಂಗ್ ಜೂಜಾಟವನ್ನು ಸಾಮಾನ್ಯ ಆಟದಂತೆ ನಡೆಸುತ್ತಿರಲಿಲ್ಲ. ಅವರು ವ್ಯವಸ್ಥಿತವಾಗಿ ಯೋಜನೆ ರೂಪಿಸಿ, ಹಣವಂತ ವ್ಯಕ್ತಿಗಳನ್ನೇ ತಮ್ಮ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಆಟದ ಅಡ್ಡೆಗಳನ್ನು ಮೊದಲೇ ಫಿಕ್ಸ್ ಮಾಡಿ, ಅಲ್ಲಿ ತಮ್ಮ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸುತ್ತಿದ್ದರು.

ಮೋಸದ ಜಾಲದಲ್ಲಿ ಬಳಕೆಯಾಗುತ್ತಿದ್ದ ಪರಿಕರಗಳು

ಸ್ಪೀಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ವಿಶೇಷವಾದ ಮೊಬೈಲ್‌ನಂತಹ ಡಿವೈಸ್ ಬಳಕೆಯಾಗುತ್ತಿತ್ತು. ಕಣ್ಣಿಗೆ ಕಾಣಿಸದಷ್ಟು ಸಣ್ಣದಾದ ಬ್ಲೂಟೂತ್ ಇಯರ್ ಬಡ್ಸ್. ಇವುಗಳ ಒಳಗೆ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಅಳವಡಿಸಿ, ಆಟದ ಚಲನವಲನಗಳನ್ನು ಪತ್ತೆ ಹಚ್ಚುತ್ತಿದ್ದರು. ಆಟದಲ್ಲಿನ ಕಾರ್ಡ್‌ಗಳ ಬಣ್ಣ ಮತ್ತು ಚಿಹ್ನೆಗಳನ್ನು ಗುರುತಿಸಲು ತಂತ್ರಜ್ಞಾನಾಧಾರಿತ ಲೆನ್ಸ್‌ಗಳನ್ನು ಬಳಸುತ್ತಿದ್ದರು. ಈ ಉಪಕರಣಗಳ ಸಹಾಯದಿಂದ, ಆಟದಲ್ಲಿ ಯಾವ ಕಾರ್ಡ್ ಯಾರಿಗಿದೆ, ಮುಂದಿನ ಕಾರ್ಡ್ ಯಾವುದು ಬರಲಿದೆ ಎಂಬ ಸಂಪೂರ್ಣ ಮಾಹಿತಿ ಆರೋಪಿಗಳಿಗೆ ನಿಖರವಾಗಿ ತಿಳಿಯುತ್ತಿತ್ತು. ಎದುರಾಳಿ ಆಟಗಾರ ಕಾರ್ಡ್‌ಗಳನ್ನು ಎತ್ತುವ ಮೊದಲೇ, ಇವರು ಅಳವಡಿಸಿದ್ದ ಸಾಫ್ಟ್‌ವೇರ್ ಅವರಿಗೆ ಗೆಲುವಿನ ಸುಳಿವು ನೀಡುತ್ತಿತ್ತು.

ನಂಬಿಕೆಗೆ ದ್ರೋಹ - ಪಂಗನಾಮದ ಕಲೆ

ಆರೋಪಿಗಳು ತಕ್ಷಣವೇ ಗೆಲ್ಲಲು ಪ್ರಯತ್ನಿಸುತ್ತಿರಲಿಲ್ಲ. ಆಟದ ಆರಂಭದಲ್ಲಿ ಎದುರಾಳಿಯ ನಂಬಿಕೆಯನ್ನು ಗಳಿಸಲು ಉದ್ದೇಶಪೂರ್ವಕವಾಗಿ ಒಂದೆರಡು ಸುತ್ತುಗಳಲ್ಲಿ ಸೋಲುತ್ತಿದ್ದರು. ಹೀಗೆ ಎದುರಾಳಿಗೆ ನಾವು ಗೆಲ್ಲಬಹುದು ಎಂಬ ಭ್ರಮೆ ಹುಟ್ಟಿಸಿ, ಆಟದಲ್ಲಿ ದೊಡ್ಡ ಮೊತ್ತದ ಹಣವನ್ನು ಪಣಕ್ಕಿಡುವಂತೆ ಪ್ರೇರೇಪಿಸುತ್ತಿದ್ದರು. ಒಮ್ಮೆ ಹಣದ ಪಣ ಹೆಚ್ಚಾದ ನಂತರ, ತಂತ್ರಜ್ಞಾನದ ಸಹಾಯದಿಂದ ಸತತವಾಗಿ ಗೆಲ್ಲುತ್ತಾ, ಎದುರಾಳಿಯ ಜೇಬಿಗೆ ಕನ್ನ ಹಾಕುತ್ತಿದ್ದರು. ಎದುರಿಗೆ ಕುಳಿತು ಆಡುವವರಿಗೆ ತಾವೇಕೆ ಪದೇ ಪದೆ ಸೋಲುತ್ತಿದ್ದೇವೆ ಎಂಬ ಅರಿವೇ ಆಗುತ್ತಿರಲಿಲ್ಲ. ಇದು ಬರೀ ಕೌಶಲ್ಯದ ಆಟವಲ್ಲ, ವ್ಯವಸ್ಥಿತವಾದ ಡಿಜಿಟಲ್ ಕಳ್ಳತನ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ಕೇವಲ ತಮ್ಮ ಅಡ್ಡೆಗಳಲ್ಲಿ ಈ ಮೋಸ ಮಾಡುತ್ತಿರಲಿಲ್ಲ, ಬದಲಾಗಿ ಇಂತಹ ಅತ್ಯಾಧುನಿಕ ಡಿವೈಸ್‌ಗಳನ್ನು ಇತರ ಜೂಜುಕೋರರಿಗೂ ಸಹ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಕ್ರಮ ಜೂಜಾಟದ ಮಾರುಕಟ್ಟೆಯಲ್ಲಿ ಈ ತಂತ್ರಜ್ಞಾನದ ಮೂಲಕ ವಂಚನೆಯ ಜಾಲವನ್ನು ಇವರು ವಿಸ್ತರಿಸಿದ್ದರು.

ಪೊಲೀಸರ ಎಚ್ಚರಿಕೆ

ಪ್ರಸ್ತುತ ಬಂಧಿತ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸಾರ್ವಜನಿಕರು ಜೂಜಾಟದಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಮತ್ತು ಇಂತಹ ಅಡ್ಡೆಯಲ್ಲಿ ಹಣ ತೊಡಗಿಸುವ ಮುನ್ನ ಎಚ್ಚರದಿಂದ ಇರಬೇಕೆಂದು ಸಿಸಿಬಿ ಪೊಲೀಸರು ಕಠಿಣ ಸಂದೇಶ ರವಾನಿಸಿದ್ದಾರೆ. ಈ ಪ್ರಕರಣವು ತಂತ್ರಜ್ಞಾನವು ಮನುಷ್ಯನಿಗೆ ಅನುಕೂಲವಾಗುವ ಬದಲು, ಅಪರಾಧಿಗಳ ಕೈಗೆ ಸಿಕ್ಕರೆ ಎಷ್ಟು ಅಪಾಯಕಾರಿ ಎಂಬುವುದನ್ನು ತೋರಿಸಿಕೊಟ್ಟಿದೆ. ಜೂಜಾಟ ಎಂಬುದು ಕಾನೂನುಬಾಹಿರ ಚಟುವಟಿಕೆ ಮಾತ್ರವಲ್ಲ, ಅದು ಇಂತಹ ತಾಂತ್ರಿಕ ವಂಚಕರ ಬಲೆಗೆ ಬೀಳುವ ಅಪಾಯವನ್ನೂ ಒಳಗೊಂಡಿದೆ.

Read More
Next Story