
Auto LPG| ಬೆಂಗಳೂರಿಗೆ ಆಟೋ ಎಲ್‌ಪಿಜಿ ಪೂರೈಕೆ ಶೇ.300 ರಷ್ಟು ಹೆಚ್ಚಳ
ಏ.15 ರಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ಬೆಂಗಳೂರಿಗೆ 75.53 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿ ಪೂರೈಸಿದೆ. ಇದು ಬಿಕ್ಕಟ್ಟಿನ ಆರಂಭಕ್ಕೂ ಮುಂಚಿನ ದಿನದ ಸರಾಸರಿ 23 ಮೆಟ್ರಿಕ್ ಟನ್‌ಗಿಂತ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ.
ಮಧ್ಯ ಏಷ್ಯಾ ಸಂಘರ್ಷದಿಂದ ಎದುರಾಗಿರುವ ಎಲ್‌ಪಿಜಿ ಅನಿಲ ಬಿಕ್ಕಟ್ಟು ಶಮನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಎಲ್‌ಪಿಜಿ ಗ್ಯಾಸ್ ಅಭಾವ ತಡೆಯಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ಬೆಂಗಳೂರಿಗೆ ಆಟೋ ಎಲ್‌ಪಿಜಿ ಪೂರೈಕೆಯನ್ನು ಶೇ.300 ರಷ್ಟು ಹೆಚ್ಚಿಸಿದೆ.
ಏ.15 ರಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ಬೆಂಗಳೂರಿಗೆ 75.53 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿ ಪೂರೈಸಿದೆ. ಇದು ಬಿಕ್ಕಟ್ಟಿನ ಆರಂಭಕ್ಕೂ ಮುಂಚಿನ ದಿನದ ಸರಾಸರಿ 23 ಮೆಟ್ರಿಕ್ ಟನ್‌ಗಿಂತ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. ಈ ತ್ವರಿತ ಕ್ರಮದಿಂದಾಗಿ ಬೆಂಗಳೂರು ನಗರದ ಆಟೋ ಚಾಲಕರ ಬವಣೆಗೆ ತುರ್ತಾಗಿ ಸ್ಪಂದಿಸಿದ್ದು, ಇಂಧನ ಲಭ್ಯತೆಯನ್ನು ಖಾತ್ರಿಪಡಿಸಿದೆ.
ರಾಜ್ಯಾದ್ಯಂತ ಪೂರೈಕೆ ಹೆಚ್ಚಳ
ಇನ್ನು ಕರ್ನಾಟಕದಾದ್ಯಂತ ಇಂಡಿಯನ್ ಆಯಿಲ್ ತನ್ನ ಆಟೋ ಎಲ್‌ಪಿಜಿ ಪೂರೈಕೆ ಪ್ರಮಾಣ ಹೆಚ್ಚಿಸಿದ್ದು, ಬಿಕ್ಕಟ್ಟಿನ ಮುಂಚಿನ ಸರಾಸರಿ ದಿನದಿಂದ ಸುಮಾರು 43.5 ಮೆಟ್ರಿಕ್ ಟನ್ ಪೂರೈಕೆಗೆ ಹೋಲಿಸಿದರೆ, ಇತ್ತೀಚಿನ ದಿನಗಳಲ್ಲಿ ತನ್ನ ದೈನಂದಿನ ಪೂರೈಕೆಯನ್ನು 83 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಮಾಡಿದೆ. ಈ ಮೂಲಕ ರಾಜ್ಯದ ಅಗತ್ಯತೆ ಬೆಂಬಲಿಸಲು ಪೂರೈಕೆಯನ್ನು ಪರಿಣಾಮಕಾರಿಯಾಗಿ ದ್ವಿಗುಣಗೊಳಿಸಿದೆ.
ಬೆಂಗಳೂರು ಮತ್ತು ಕರ್ನಾಟಕದ ಆಟೋ ಎಲ್‌ಪಿಜಿ ಮಾರುಕಟ್ಟೆಯ ಸುಮಾರು ಶೇ.80 ರಷ್ಟು ಪಾಲು ಹೊಂದಿರುವ ಖಾಸಗಿ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಈ ಬೇಡಿಕೆ ಹೆಚ್ಚಿಸಲಾಗಿದೆ. ಈ ಖಾಸಗಿ ಕೇಂದ್ರಗಳ ಕಾರ್ಯಾಚರಣೆ ಸ್ಥಗಿತ ಅಥವಾ ಮುಚ್ಚುವಿಕೆಯಿಂದಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯನ್ ಆಯಿಲ್ ಮಾರಾಟ ಮಳಿಗೆಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ, ಇಂಡಿಯನ್ ಆಯಿಲ್ ಎಎಲ್‌ಡಿಎಸ್ ಕೇಂದ್ರಗಳ ಎದುರು ಉದ್ದನೆಯ ಸಾಲುಗಳು ಕಂಡುಬರುತ್ತಿವೆ.
ವಾರಪೂರ್ತಿ ಲೋಡಿಂಗ್, ಬಾಟ್ಲಿಂಗ್
ಎಲ್‌ಪಿಜಿ ಗ್ಯಾಸ್ ಬಿಕ್ಕಟ್ಟು ಪರಿಹರಿಸಲು ಇಂಡಿಯನ್ ಆಯಿಲ್ ಸಂಸ್ಥೆಯು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಮಗ್ರ ಕಾರ್ಯಾಚರಣೆ ಕಾರ್ಯತಂತ್ರದ ಮೂಲಕ ಸ್ಪಂದಿಸುತ್ತಿದ್ದು, ಬೆಂಗಳೂರಿನ ತನ್ನೆಲ್ಲಾ ಎಎಲ್‌ಡಿಎಸ್ ಮಳಿಗೆಗಳು ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತಿದೆ. ಅಲ್ಲದೇ ಗ್ರಾಹಕರಿಗೆ ಸುಗಮ ಸೇವೆ ಖಚಿತಪಡಿಸುತ್ತಿವೆ. ಬೇಡಿಕೆಯ ಪರಿಸ್ಥಿತಿ ಎದುರಿಸಲು ಇಂಡಿಯನ್ ಆಯಿಲ್ ಸಂಸ್ಥೆಯು ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗಳು ಮತ್ತು ಲೋಡಿಂಗ್ ಕೇಂದ್ರಗಳು ಕಳೆದ ವಾರದ ಎಲ್ಲಾ ಏಳು ದಿನಗಳೂ ಕಾರ್ಯನಿರ್ವಹಿಸಿವೆ.
ತನ್ನ ಮಳಿಗೆಗಳಲ್ಲಿನ ಉದ್ದನೆಯ ಸಾಲುಗಳಿಂದಾಗಿ ಆಟೋ ಎಲ್‌ಪಿಜಿ ಗ್ರಾಹಕರಿಗೆ ಉಂಟಾಗಿರುವ ಅನಾನುಕೂಲತೆಯನ್ನು ಇಂಡಿಯನ್ ಆಯಿಲ್ ಗಂಭೀರವಾಗಿ ಪರಿಗಣಿಸಿ ಸಹಾನುಭೂತಿಯಿಂದ ಸಮಸ್ಯೆ ಬಗೆಹರಿಸಿದೆ. ಅಲ್ಲದೇ ಸಾರ್ವಜನಿಕ ವಲಯದ ಉದ್ಯಮವಾಗಿ ತನ್ನ ಜವಾಬ್ದಾರಿಯನ್ನು ಎತ್ತಿಹಿಡಿಯುವ ಮೂಲಕ ಇಂಡಿಯನ್ ಆಯಿಲ್ ಸಂಸ್ಥೆಯು ಗರಿಷ್ಠ ಮಟ್ಟದಲ್ಲಿ ಉತ್ಪನ್ನದ ಲಭ್ಯತೆ ಖಾತ್ರಿಪಡಿಸುವ ಭರವಸೆ ನೀಡಿದೆ.

