
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4.22 ಕೋಟಿ ರೂ. ಮೌಲ್ಯದ ಗಾಂಜಾ ವಶ
ಇತ್ತೀಚಿನ ದಿನಗಳಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಡ್ರಗ್ಸ್ ಸಾಗಾಟದ ಜಾಲ ವಿಸ್ತರಿಸುತ್ತಿರುವುದು ಕಳವಳಕಾರಿಯಾಗಿದೆ. ಕಳೆದ ಕೆಲವೇ ವಾರಗಳಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ನಡೆಸಿರುವ ಸರಣಿ ಕಾರ್ಯಾಚರಣೆಗಳ ಇದು ನಾಲ್ಕನೇ ದೊಡ್ಡ ಮೊತ್ತದ ಮಾದಕ ವಸ್ತುವಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.ಬ್ಯಾಂಕಾಕ್ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.22 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕನ ಲಗೇಜ್ ಬ್ಯಾಗ್ ತಪಾಸಣೆ ವೇಳೆ 12.07 ಕೆ.ಜಿ. ತೂಕದ ಹೈಡ್ರೋಪೋನಿಕ್ ಗಾಂಜಾ ಸಾಗಣೆ ಮಾಡಲಾಗುತ್ತಿತ್ತು.
ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸಾಗಿಸುತ್ತಿದ್ದ ಮಾದಕ ವಸ್ತುವು ಸಾಮಾನ್ಯ ಗಾಂಜಾಗಿಂತ ಅತ್ಯಂತ ದುಬಾರಿಯಾಗಿದ್ದು, ಇದರ ಒಟ್ಟು ಮೌಲ್ಯ 4.22 ಕೋಟಿ ಎಂದು ಅಂದಾಜಿಸಲಾಗಿದೆ.
ಡ್ರಗ್ಸ್ ಮಾಫಿಯಾಗೆ ಹಾಟ್‌ಸ್ಪಾಟ್?
ಇತ್ತೀಚಿನ ದಿನಗಳಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಡ್ರಗ್ಸ್ ಸಾಗಾಟದ ಜಾಲ ವಿಸ್ತರಿಸುತ್ತಿರುವುದು ಕಳವಳಕಾರಿಯಾಗಿದೆ. ಕಳೆದ ಕೆಲವೇ ವಾರಗಳಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ನಡೆಸಿರುವ ಸರಣಿ ಕಾರ್ಯಾಚರಣೆಗಳ ಇದು ನಾಲ್ಕನೇ ದೊಡ್ಡ ಮೊತ್ತದ ಮಾದಕ ವಸ್ತುವಾಗಿದೆ.
ಜೂನ್ 29 ರಂದು 8 ಕೆ.ಜಿ. ತೂಕದ 2.80 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು. ಜೂನ್ 26 ರಂದು 5.960 ಕೆ.ಜಿ. ತೂಕದ 2.08 ಕೋಟಿ ರೂ. ಮೌಲ್ಯದ ಹೈಡ್ರೋಪೊನಿಕ್ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಅದೇ ದಿನ ಮತ್ತೊಬ್ಬ ಪ್ರಯಾಣಿಕನಿಂದ 6.98 ಕೆಜಿ ತೂಕದ 5.58 ಕೋಟಿ ಮೌಲ್ಯದ ಮೆಸ್ಕಲಿನ್ ವಶಕ್ಕೆ ಪಡೆಯಲಾಗಿತ್ತು.
ಇನ್ನು ಜೂನ್ 17 ರಂದು 15.520 ಕೆಜಿ ತೂಕದ 5.43 ಕೋಟಿ ರೂ. ಮೌಲ್ಯದ ಹೈಡ್ರೋಪೊನಿಕ್ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿತ್ತು. ಜೂನ್ 26 ರಂದು ನಡೆದ ಎರಡೂ ಕಾರ್ಯಾಚರಣೆಯಲ್ಲಿ ಬ್ಯಾಂಕಾಕ್ನಿಂದ ಬಂದ ಪ್ರಯಾಣಿಕನಿಂದ ಗಾಂಜಾ ಜೊತೆಗೆ ಅಪಾಯಕಾರಿ 'ಮೆಸ್ಕಲಿನ್' ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು.
ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬರುವ ವಿಮಾನಗಳ ಮೇಲೆ ಹಾಗೂ ಅಲ್ಲಿಂದ ಬರುವ ಪ್ರಯಾಣಿಕರ ಮೇಲೆ ಕಸ್ಟಮ್ಸ್ ಮತ್ತು ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಈಗ ತೀವ್ರ ನಿಗಾ ಇರಿಸಿದ್ದಾರೆ. ಅಂತರರಾಷ್ಟ್ರೀಯ ಡ್ರಗ್ ಪೆಡ್ಲರ್ಗಳ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

