ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನದ ಸಾಗಾಟ: 1.6 ಕೆಜಿ ಚಿನ್ನದ ಬಾರ್‌ ವಶ
x

ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನದ ಸಾಗಾಟ: 1.6 ಕೆಜಿ ಚಿನ್ನದ ಬಾರ್‌ ವಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಚೆನ್ನೈನ ನಾಲ್ವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.


Click the Play button to hear this message in audio format

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ನಾಲ್ವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ದುಬೈನಿಂದ ಆಗಮಿಸಿದ್ದ ಈ ಗ್ಯಾಂಗ್ ತನ್ನ ಪಾದಗಳ ಅಡಿಯಲ್ಲಿ ಕಪ್ಪು ಟೇಪ್ ಬಳಸಿ ಚಿನ್ನದ ಬಾರ್‌ಗಳನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಕಸ್ಟಮ್ಸ್ ಬಲೆಗೆ ಬಿದ್ದಿದೆ.

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಈ ನಾಲ್ವರ ತಂಡದ ನಡವಳಿಕೆಗಳ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು, ಟರ್ಮಿನಲ್-2ರ ನಿರ್ಗಮನ ದ್ವಾರದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಿದರು. ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ ಈ ತಪಾಸಣೆಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದವು. ಆರೋಪಿಗಳು ತಮ್ಮ ಪಾದಗಳ ಅಡಿಯಲ್ಲಿ ಹಾಗೂ ಪಾದದ ಅಕ್ಕಪಕ್ಕದಲ್ಲಿ ಕಪ್ಪು ಟೇಪ್ ಬಳಸಿ ಚಿನ್ನದ ಬಾರ್‌ಗಳನ್ನು ಗಟ್ಟಿಯಾಗಿ ಕಟ್ಟಿಕೊಂಡಿದ್ದರು. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸುಮಾರು 1.6 ಕೆಜಿ ತೂಕದ 28 ಚಿನ್ನದ ಬಾರ್‌ಗಳು ಪತ್ತೆಯಾಗಿವೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 2.6 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ನಂಟಿನ ತಂಡ

ಬಂಧಿತ ನಾಲ್ವರು ಆರೋಪಿಗಳನ್ನು ಚೆನ್ನೈ ವ್ಯಾಸರ್ಪಾಡಿ ಮೂಲದ ರಂಜಾನ್ ಬೇಗಂ ಸಿರಾಜುದ್ದೀನ್, ನಸ್ರಿನ್ ಬಾನು ಸಿರಾಜುದ್ದೀನ್, ಹೈರುನ್ ಫಾತಿಮಾ ಸಿರಾಜುದ್ದೀನ್ ಮತ್ತು ಅಶಾರುದ್ದೀನ್ ಚೆಲ್ಲದುರೈ ಎಂದು ಗುರುತಿಸಲಾಗಿದೆ. ಇವರಲ್ಲಿ ನಸ್ರಿನ್ ಮತ್ತು ಹೈರುನ್ ಸಹೋದರಿಯರಾಗಿದ್ದಾರೆ. ಇವರು ದುಬೈನಿಂದ ವಿಶೇಷ ಯೋಜನೆ ರೂಪಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಭಾರತದೊಳಕ್ಕೆ ಪ್ರವೇಶಿಸಲು ಯತ್ನಿಸಿದ್ದರು. ಚಿನ್ನದ ಜೊತೆಗೆ, 13 ಮೊಬೈಲ್ ಫೋನ್‌ಗಳು ಮತ್ತು 8 ಲ್ಯಾಪ್‌ಟಾಪ್‌ಗಳನ್ನು ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಬಂಧಿತರು ಅಧಿಕಾರಿಗಳೊಂದಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. "ವಿಚಾರಣೆ ವೇಳೆ ಆರೋಪಿಗಳು ಮೌನಕ್ಕೆ ಶರಣಾಗಿದ್ದಾರೆ ಅಥವಾ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಅಕ್ರಮ ಜಾಲದ ಹಿಂದೆ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರ ಕೈವಾಡವಿರುವ ಶಂಕೆ ಇದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಪಾಸಣೆಯ ವೇಳೆ ಕೆಲವು ಚಿನ್ನದ ಬಾರ್‌ಗಳು ಟ್ರಾಲಿಗಳ ಮೇಲೂ ಪತ್ತೆಯಾಗಿದ್ದು, ಇವರು ಎಲ್ಲಿಯವರೆಗೆ ಚಿನ್ನವನ್ನು ಸಾಗಿಸಲು ಯೋಜಿಸಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಪ್ರಕರಣ ದಾಖಲು

ಕಸ್ಟಮ್ಸ್ ಕಾಯ್ದೆ 1962ರ ಸೆಕ್ಷನ್ 110ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಇದು ಕೇವಲ ಸಣ್ಣ ಕಳ್ಳಸಾಗಣೆಯಲ್ಲ, ಇದೊಂದು ವ್ಯವಸ್ಥಿತ ಜಾಲ ಎಂದು ಶಂಕಿಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಪಾದಗಳ ಅಡಿಯಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಕರಣಗಳು ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದ್ದವು. ಈ ಆರೋಪಿಗಳು ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ತರುವಾಗ ಬಳಸಿದ್ದ ಮಾರ್ಗಗಳೇನು? ವಿಮಾನ ನಿಲ್ದಾಣದಲ್ಲಿ ಯಾರಾದರೂ ಇವರಿಗೆ ಸಹಕರಿಸಿದ್ದಾರೆಯೇ? ಎಂಬುದರ ಕುರಿತು ತನಿಖೆ ತೀವ್ರಗೊಂಡಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಅಕ್ರಮ ಸಾಗಣೆಯ ಹಿಂದೆ ಕೆಲಸ ಮಾಡುತ್ತಿರುವ ಮಾಸ್ಟರ್ ಮೈಂಡ್ ಯಾರೆಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಆರೋಪಿಗಳ ಮೊಬೈಲ್ ಕರೆಗಳ ವಿವರ ಮತ್ತು ಅವರ ವಿದೇಶ ಪ್ರವಾಸದ ಇತಿಹಾಸವನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣವು ಅಕ್ರಮ ಚಿನ್ನ ಸಾಗಾಟ ಮಾಡುವವರಿಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

Read More
Next Story