
ಹೂಗಳ ಲೋಕದಲ್ಲಿ ಗಂಗರ ಇತಿಹಾಸ: ಕಣ್ಮನ ಸೆಳೆಯುತ್ತಿದೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ
ಬೆಂಗಳೂರಿನಲ್ಲಿ ಲಾಲ್‌ಬಾಗ್ ಮಾದರಿಯ ಮೂರು ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರನ್ನು ಉದ್ಯಾನ ನಗರಿಯಾಗಿ ಮತ್ತೊಮ್ಮೆ ಮರುಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ಪರಿಸರವನ್ನು ರಕ್ಷಿಸುವ ಮತ್ತು ಹಸಿರನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಲಾಲ್‌ಬಾಗ್ ಮಾದರಿಯ ಮೂರು ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಗುರುವಾರ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದ್ದ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಮೂಲಸೌಕರ್ಯ ಮತ್ತು ಪರಿಸರ ಸಮತೋಲನದ ಕುರಿತಾದ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಬೆಂಗಳೂರಿನಲ್ಲಿ ಕಾಂಕ್ರೀಟ್ ಕಾಡಿನ ನಡುವೆ ಉಸಿರುಗಟ್ಟುವ ವಾತಾವರಣವನ್ನು ಬದಲಾಯಿಸಲು ಸರ್ಕಾರ ಹೊಸ ಯೋಜನೆ ರೂಪಿಸಿದೆ. ನಗರದಲ್ಲಿರುವ ರಕ್ಷಣಾ ಇಲಾಖೆಯ ಖಾಲಿ ಜಾಗದಲ್ಲಿ ಈ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಭೂಮಿಯು ರಕ್ಷಣಾ ಇಲಾಖೆಯ ವಶದಲ್ಲೇ ಇರುತ್ತದೆ, ಆದರೆ ಸಾರ್ವಜನಿಕರಿಗೆ ಹಸಿರು ವಾತಾವರಣ ಕಲ್ಪಿಸಲು ಅನುಮತಿ ಕೋರಿ ಪತ್ರ ಬರೆಯಲಾಗಿದೆ. ವಾರಣಾಸಿಯಲ್ಲಿ ಇದೇ ಮಾದರಿಯಲ್ಲಿ ರಕ್ಷಣಾ ಇಲಾಖೆಯ ಜಾಗವನ್ನು ಉದ್ಯಾನವನಕ್ಕಾಗಿ ಬಳಸಲು ಪ್ರಧಾನಮಂತ್ರಿಗಳು ಅನುಮತಿ ನೀಡಿದ್ದಾರೆ. ಅದೇ ಮಾದರಿಯನ್ನು ಇಲ್ಲಿಯೂ ಅಳವಡಿಸಲು ಕೇಂದ್ರ ರಕ್ಷಣಾ ಸಚಿವರನ್ನು ಶೀಘ್ರವೇ ಭೇಟಿ ಮಾಡಿ ಮನವಿ ಮಾಡಲಾಗುವುದು. ನಗರದ ಒಳಗೆ ಲಭ್ಯವಿರುವ ಅರಣ್ಯ ಇಲಾಖೆಯ ಜಾಗಗಳನ್ನು ಗುರುತಿಸಿ, ಅಲ್ಲಿಯೂ ಉದ್ಯಾನಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಯೋಜನೆಗಳಿಗೆ ಜಿಬಿಎ, ಬಿಡಿಎ ಮತ್ತು ತೋಟಗಾರಿಕಾ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
'ಗಂಗ ಸಾಮ್ರಾಜ್ಯ ವೈಭವ': ಕಲಾತ್ಮಕ ಸಂಭ್ರಮ
ಈ ಬಾರಿಯ ಫಲಪುಷ್ಪ ಪ್ರದರ್ಶನವು 'ಗಂಗ ಸಾಮ್ರಾಜ್ಯ ವೈಭವ' ಎಂಬ ಪರಿಕಲ್ಪನೆಯಲ್ಲಿ ಅರಳಿದೆ. ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ ಗಂಗರ ಸಂಸ್ಕೃತಿ, ಅವರ ಸಾಧನೆಗಳು ಮತ್ತು ರೈತರ ಬದುಕಿನ ಚಿತ್ರಣವನ್ನು ಹೂವುಗಳ ಮೂಲಕ ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ಗಂಗರ ಕಾಲದಲ್ಲಿ ನಿರ್ಮಿಸಲಾದ ಕೆರೆಗಳು ಮತ್ತು ಅವರ ಕೃಷಿ ಸಂಸ್ಕೃತಿಯನ್ನು ಪುಷ್ಪಗಳ ಮೂಲಕ ಅನಾವರಣಗೊಳಿಸಲಾಗಿದೆ. ತೋಟಗಾರಿಕಾ ಇಲಾಖೆಯು ಅತ್ಯುತ್ತಮವಾಗಿ ಈ ಪ್ರದರ್ಶನವನ್ನು ರೂಪಿಸಿದ್ದು, ಕಳೆದ ಹತ್ತು ದಿನಗಳಿಂದ ನಡೆದ ಸಿದ್ಧತೆ ಫಲ ನೀಡಿದೆ. ಈ ಪ್ರದರ್ಶನವನ್ನು ವೀಕ್ಷಿಸಲು ಯುವಕರು, ಮಹಿಳೆಯರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರೆ ನೀಡಿದರು.
ಆಗಸ್ಟ್ 15ರಂದು ರೈತಪರ ಕಾರ್ಯಕ್ರಮ ಘೋಷಣೆ
ಪರಿಸರ ಸಂರಕ್ಷಣೆಯ ಜೊತೆಗೆ ರೈತರ ಬದುಕಿಗೂ ಒತ್ತು ನೀಡಲು ಸರ್ಕಾರ ನಿರ್ಧರಿಸಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ರೈತರು ಮತ್ತು ಸರ್ಕಾರದ ಪಾಲುದಾರಿಕೆಯ ವಿಶೇಷ ಕಾರ್ಯಕ್ರಮವೊಂದನ್ನು ಘೋಷಿಸುವುದಾಗಿ ಸಿಎಂ ತಿಳಿಸಿದರು. ರಾಜ್ಯದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಮತ್ತು ರೈತರ ಆದಾಯಕ್ಕೆ ಸ್ಥಿರತೆ ನೀಡುವುದು ನಮ್ಮ ಗುರಿ. ಸರ್ಕಾರದ 100 ದಿನಗಳ ಯೋಜನೆಗಳಲ್ಲಿ ಇದು ಪ್ರಮುಖವಾಗಿರಲಿದೆ ಎಂದು ವಿವರಿಸಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್, "ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ, ಅಸಮಾಧಾನ ಇರುವುದು ಮಾಧ್ಯಮಗಳಲ್ಲಿ ಮಾತ್ರ" ಎಂದು ಉತ್ತರಿಸಿದರು. ಕಾಂಗ್ರೆಸ್‌ನಲ್ಲಿ 140 ಶಾಸಕರು ಮತ್ತು 40 ಪರಿಷತ್ ಸದಸ್ಯರು ಇದ್ದಾರೆ. ಅವರೆಲ್ಲರೂ ಸಚಿವ ಸ್ಥಾನಕ್ಕೆ ಅರ್ಹರು. ಆದರೆ ಸಚಿವ ಸಂಪುಟದ ಮಿತಿ 33 ಮಾತ್ರ. ಹೀಗಾಗಿ ಎಲ್ಲರಿಗೂ ಸ್ಥಾನ ನೀಡಲು ಸಾಧ್ಯವಿಲ್ಲ. ಹಿರಿಯ ನಾಯಕರ ಆಕಾಂಕ್ಷೆಗಳನ್ನು ನಾವು ಗೌರವಿಸುತ್ತೇವೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ, ಎಲ್ಲರೂ ಪಕ್ಷಕ್ಕೆ ಪ್ರಾಮಾಣಿಕರಾಗಿ ದುಡಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

