
ಶಿವಂ ಅಸೋಸಿಯೇಟ್ಸ್ ವಂಚನೆ ಜಾಲ ಬಯಲು; ಇಡಿ ವಶಕ್ಕೆ ಆರೋಪಿ ಶಿವಾನಂದ ನೀಲಣ್ಣನವರ್
ಇಡಿ ಅಧಿಕಾರಿಗಳು ನಡೆಸಿದ ಸುದೀರ್ಘ ತನಿಖೆಯಲ್ಲಿ ಶಿವಾನಂದ ನೀಲಣ್ಣನವರ್ ಈ ಹಣಕಾಸು ಸಾಮ್ರಾಜ್ಯದ ಸೂತ್ರಧಾರ ಎಂಬುದು ಬಯಲಾಗಿದೆ. ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಮತ್ತು ಲಾಭದ ಆಮಿಷ ಒಡ್ಡಿ ಹಣ ಸಂಗ್ರಹಿಸಲಾಗುತ್ತಿತ್ತು.
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮದ ಬೃಹತ್ ಜಾಲವನ್ನು ಭೇದಿಸಿದ್ದಾರೆ.
ಸುಮಾರು 2,110.97 ಕೋಟಿ ರೂ.ಗಳ ಬೃಹತ್ ವಂಚನೆಯ ರೂವಾರಿ, ಸಂಸ್ಥೆಯ ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣನವರ್ ಅವರನ್ನು ಮಂಗಳೂರು ವಲಯದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯನ್ನು ಮಂಗಳೂರಿನ ವಿಶೇಷ ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಪೀಠವು 12 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆರೋಪಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
4 ರಾಜ್ಯಗಳಲ್ಲಿ ಹರಡಿದ್ದ ಪೊಂಜಿ ಜಾಲ
ಇಡಿ ಅಧಿಕಾರಿಗಳು ನಡೆಸಿದ ಸುದೀರ್ಘ ತನಿಖೆಯಲ್ಲಿ ಶಿವಾನಂದ ನೀಲಣ್ಣನವರ್ ಈ ಹಣಕಾಸು ಸಾಮ್ರಾಜ್ಯದ ಸೂತ್ರಧಾರ ಎಂಬುದು ಬಯಲಾಗಿದೆ. ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಮತ್ತು ಲಾಭದ ಆಮಿಷ ಒಡ್ಡಿ ಹಣ ಸಂಗ್ರಹಿಸಲಾಗುತ್ತಿತ್ತು. ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್ಗಢ ರಾಜ್ಯಗಳಾದ್ಯಂತ ಈ ಜಾಲ ಹರಡಿತ್ತು.
ಆಕರ್ಷಕ ಸ್ಕೀಮ್‌ಗಳನ್ನು ನೀಡಿ ಸಾರ್ವಜನಿಕರಿಂದ ಒಟ್ಟು 2,110.97 ಕೋಟಿ ಅಕ್ರಮವಾಗಿ ಠೇವಣಿ ರೂಪದಲ್ಲಿ ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಕೋಟ್ಯಂತರ ರೂಪಾಯಿಯಲ್ಲಿ ಹೂಡಿಕೆದಾರರಿಗೆ ಮರುಪಾವತಿಸಿರುವುದು ತೀರ ಅತ್ಯಲ್ಪ ಮಾತ್ರ ಎಂಬುದು ಇಡಿ ತನಿಖೆಯಿಂದ ಬಯಲಾಗಿತ್ತು.
ಷೇರು ಮಾರುಕಟ್ಟೆ ನಷ್ಟ ಮುಚ್ಚಿಟ್ಟಿದ್ದರು
ತನಿಖಾ ವರದಿಯ ಪ್ರಕಾರ, ಈ ಕಂಪನಿಯು 2019ರಿಂದಲೇ ಷೇರು ಮಾರುಕಟ್ಟೆಯಲ್ಲಿ ತೀವ್ರ ನಷ್ಟ ಅನುಭವಿಸುತ್ತಿತ್ತು. ಆದರೆ, ಈ ಸತ್ಯವನ್ನು ಹೂಡಿಕೆದಾರರಿಂದ ಮರೆಮಾಚಲಾಗಿತ್ತು.
ಸಂಸ್ಥೆಯು ಮಾರುಕಟ್ಟೆಯಲ್ಲಿ ತನ್ನ ಮೇಲಿದ್ದ ನಂಬಿಕೆಯನ್ನು ಉಳಿಸಿಕೊಳ್ಳಲು ಪೊಂಜಿ ತಂತ್ರ ಅನುಸರಿಸಿತ್ತು. ಹೊಸ ಹೂಡಿಕೆದಾರರಿಂದ ಬರುವ ಠೇವಣಿ ಹಣವನ್ನೇ ಹಳೆಯ ಹೂಡಿಕೆದಾರರಿಗೆ ಬಡ್ಡಿ ಹಾಗೂ ಲಾಭಾಂಶದ ರೂಪದಲ್ಲಿ ಹಂಚಿ, ವಂಚನೆಯ ಜಾಲವನ್ನು ಮುಂದುವರಿಸಿಕೊಂಡು ಬರಲಾಗಿತ್ತು.
ಸಾರ್ವಜನಿಕರ ಹಣದಲ್ಲಿ ಶಿವಾನಂದ ನೀಲಣ್ಣವರ್ ಐಷಾರಾಮಿ ಜೀವನ ನಡೆಸುತ್ತಿದ್ದರು. ಕೋಟ್ಯಂತರ ಮೌಲ್ಯದ ದುಬಾರಿ ಕಾರು ಖರೀದಿಸಿದ್ದರಲ್ಲದೇ ಪಾಲುದಾರರು ಹಾಗೂ ಸಂಬಂಧಿಕರ ಹೆಸರಲ್ಲಿ ಬಂಗಲೆಗಳು ಮತ್ತು ಸ್ಥಿರಾಸ್ತಿಗಳನ್ನು ಖರೀದಿಸಲಾಗಿತ್ತು. ಹೂಡಿಕೆದಾರರ ಹಣವನ್ನು ಅಕ್ರಮವಾಗಿ ಚಲನಚಿತ್ರ ನಿರ್ಮಾಣ ಉದ್ದೇಶಕ್ಕೂ ವರ್ಗಾವಣೆ ಮಾಡಲಾಗಿತ್ತು. ಈ ಎಲ್ಲಾ ದುರುಪಯೋಗದ ಹಣ ಹಾಗೂ ಸ್ಥಿರ-ಚರ ಆಸ್ತಿಗಳನ್ನು ಇಡಿ ಬಯಲು ಮಾಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಪ್ತಿ ಪ್ರಕ್ರಿಯೆ ಹಾಗೂ ತೀವ್ರ ವಿಚಾರಣೆ ನಡೆಸಿತ್ತು.

