
ಗುಂಡಿನ ಸದ್ದು ಹಾಗೂ ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮತ್ತು ಅಪರಾಧ ಸ್ಥಳ ಪರಿಶೀಲನಾ ತಂಡ ಸ್ಥಳಕ್ಕೆ ದೌಡಾಯಿಸಿದೆ.
ಬೆಳಗಾವಿ: ಖ್ಯಾತ ವಕೀಲೆಯ ನಿವಾಸದ ಮೇಲೆ ಮಧ್ಯರಾತ್ರಿ ಫೈರಿಂಗ್; ಕೂದಲೆಳೆ ಅಂತರದಲ್ಲಿ ಪಾರಾದ ಪುತ್ರಿ
ಪೂಜಾ ಕಾಕತಕರ್ ಅವರು ಕಳೆದ 18 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ಸಕ್ರಿಯರಾಗಿದ್ದು, ನಗರದ ಪ್ರಮುಖ ವಕೀಲರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತಹ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ನಗರದ ಮಂಡೋಳಿ ರಸ್ತೆಯಲ್ಲಿರುವ ಪ್ರಸಿದ್ಧ ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೇಲೆ ಶನಿವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಆಘಾತಕಾರಿ ಘಟನೆಯಲ್ಲಿ ಪೂಜಾ ಅವರ ಪುತ್ರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ತಡರಾತ್ರಿ ಅಂದರೆ ಸುಮಾರು 1 ರಿಂದ 2 ಗಂಟೆಯ ಸಮಯದಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಗಿದೆ. ಘಟನೆ ನಡೆದಾಗ, ಮೊದಲ ಮಹಡಿಯ ಕೊಠಡಿಯೊಂದರಲ್ಲಿ ಪೂಜಾ ಅವರ ಮಗಳು ಸಂಸ್ಕೃತಿ ತಮ್ಮ ಮುಂಬರುವ ಪರೀಕ್ಷೆಗಾಗಿ ಓದುತ್ತಿದ್ದರು. ದುಷ್ಕರ್ಮಿಗಳು ಹಾರಿಸಿದ ಗುಂಡು ನೇರವಾಗಿ ಕೊಠಡಿಯ ಕಿಟಕಿಯ ಗಾಜಿಗೆ ಬಡಿದಿದೆ. ಅದೃಷ್ಟವಶಾತ್, ಗುಂಡು ಸಂಸ್ಕೃತಿ ಅವರಿಗೆ ತಾಗದೆ ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದಿಢೀರ್ ದಾಳಿಯಿಂದ ಇಡೀ ಕುಟುಂಬ ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಆತಂಕಗೊಂಡಿದ್ದಾರೆ.
ಪೊಲೀಸರ ತನಿಖೆ ಮತ್ತು ವಿಧಿವಿಜ್ಞಾನ ಪರೀಕ್ಷೆ
ಗುಂಡಿನ ಸದ್ದು ಹಾಗೂ ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮತ್ತು ಅಪರಾಧ ಸ್ಥಳ ಪರಿಶೀಲನಾ ತಂಡ ಸ್ಥಳಕ್ಕೆ ದೌಡಾಯಿಸಿದೆ. ಕಿಟಕಿಯ ಗಾಜಿನ ಮೇಲಿರುವ ಗುಂಡಿನ ಗುರುತುಗಳು ಹಾಗೂ ಸ್ಥಳದಲ್ಲಿ ಪತ್ತೆಯಾದ ಗುಂಡಿನ (ಕಾರ್ಟ್ರಿಡ್ಜ್) ಅಂಶಗಳನ್ನು ಸಂಗ್ರಹಿಸಿ, ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ದಾಳಿಗೆ ಬಳಸಿದ ಶಸ್ತ್ರಾಸ್ತ್ರದ ಮಾದರಿಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಸದ್ಯಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ವಕೀಲೆಯ ಕುಟುಂಬಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ವೃತ್ತಿ ವೈಷಮ್ಯದ ಶಂಕೆ
ಪೂಜಾ ಕಾಕತಕರ್ ಅವರು ಕಳೆದ 18 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ಸಕ್ರಿಯರಾಗಿದ್ದು, ನಗರದ ಪ್ರಮುಖ ವಕೀಲರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ. ತಾವು ವಾದಿಸುತ್ತಿರುವ ಯಾವುದಾದರೂ ಸೂಕ್ಷ್ಮ ಹಾಗೂ ಹೈ-ಪ್ರೊಫೈಲ್ ಪ್ರಕರಣಗಳ ಹಿನ್ನೆಲೆಯಲ್ಲಿ ವೃತ್ತಿ ದ್ವೇಷದಿಂದ ಈ ದಾಳಿ ನಡೆದಿರಬಹುದೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ವೈಯಕ್ತಿಕ ದ್ವೇಷವಿದೆಯೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ವಕೀಲರ ಮೇಲಿನ ಹಲ್ಲೆ, ಬೆದರಿಕೆ ಹಾಗೂ ದಬ್ಬಾಳಿಕೆ ಪ್ರಕರಣಗಳು ವರದಿಯಾಗುತ್ತಿರುವುದು ಕಾನೂನು ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ. ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ "ವಕೀಲರ ರಕ್ಷಣಾ ಕಾಯ್ದೆ"ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಕೂಗು ಈ ಘಟನೆಯಿಂದಾಗಿ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಯಿದೆ.

