x

ನದಿ ಜೋಡಣೆ ಹೆಸರಲ್ಲಿ ಪಶ್ಚಿಮ ಘಟ್ಟಕ್ಕೆ ಕಂಟಕ.. ಬೇಡ್ತಿ–ಅಘನಾಶಿನಿ ಮುಟ್ಟಬೇಡಿ.!

ಬೇಡ್ತಿ - ಅಘನಾಶಿನಿ ನದಿ ತಿರುಗಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಬೆಂಗಳೂರಿನಲ್ಲಿ ನಡೆದ ಬೃಹತ್ ಜನಾಂದೋಲನವು ರಾಜ್ಯ ಸರ್ಕಾರದ ಎಚ್ಚೆತ್ತುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.


Click the Play button to hear this message in audio format

ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಗಳಾದ ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ತಿರುಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ ಪರಿಸರ ವಿರೋಧಿ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಇವತ್ತು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಜನಾಂದೋಲನವು ರಾಜ್ಯ ಸರ್ಕಾರದ ಎಚ್ಚೆತ್ತುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪರಿಸರ ಪ್ರೇಮಿಗಳು, ರೈತರು, ಸಾಹಿತಿಗಳು ಹಾಗೂ ಗಣ್ಯರು, "ಪಶ್ಚಿಮ ಘಟ್ಟವನ್ನು ಬಲಿ ಕೊಟ್ಟು ಅಭಿವೃದ್ಧಿ ಬೇಡ" ಎಂಬ ದನಿ ಮೊಳಗಿಸಿದರು.

ಉತ್ತರ ಕನ್ನಡ ಜಿಲ್ಲೆಯ ಪರಿಸರ ನಾಶದ ಭೀತಿಯನ್ನು ಹೊತ್ತು ಬೆಂಗಳೂರಿಗೆ ಆಗಮಿಸಿದ ಸಾವಿರಾರು ಜನರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್, ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ, ತೇಜಸ್ವಿನಿ ಅನಂತ್‌ಕುಮಾರ್, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸಾಹಿತಿ ಜಯಂತ್ ಕಾಯ್ಕಿಣಿ, ನಟ ನೀರ್ನಳ್ಳಿ ರಾಮಕೃಷ್ಣ ಸೇರಿದಂತೆ ನಾಡಿನ ಹಲವು ದಿಗ್ಗಜರು ಹೋರಾಟಕ್ಕೆ ಸಾಥ್ ನೀಡಿದರು. ಬೇಡ್ತಿ-ಅಘನಾಶಿನಿ ಕಣಿವೆಗಳು ವನ್ಯಜೀವಿ ಸಂರಕ್ಷಿತ ಪ್ರದೇಶಗಳು ಮತ್ತು ಸೂಕ್ಷ್ಮ ಪರಿಸರ ವಲಯದಲ್ಲಿ ಬರುತ್ತವೆ. ಅರಣ್ಯ ಮತ್ತು ವನ್ಯಜೀವಿ ಕಾಯಿದೆಗಳ ಅಡಿಯಲ್ಲಿ ಈ ಪ್ರದೇಶದ ರಕ್ಷಣೆ ಸರ್ಕಾರಗಳ ಕರ್ತವ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ತಜ್ಞರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ತುರ್ತಾಗಿ ಕರೆಯಬೇಕು. ಜೊತೆಗೆ, ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ದಿನಾಂಕ ನಿಗದಿಪಡಿಸಬೇಕು. ಕರಾವಳಿಯ ರೈತರು, ಮೀನುಗಾರರು ಮತ್ತು ನಾಗರಿಕರು ಈ ಆಂದೋಲನವನ್ನು ತಳಮಟ್ಟದಿಂದ ಬಲಪಡಿಸಲು ನಿರ್ಧರಿಸಲಾಗಿದೆ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಪರಿಸರ ತಜ್ಞರು, ವಿಜ್ಞಾನಿಗಳು, ಹೋರಾಟಗಾರರು, ಬೇಡ್ತಿ-ಅಘನಾಶಿನಿ ನದಿ ತಿರುವು ಮಾತ್ರವಲ್ಲದೆ, ಶರಾವತಿ ಪಂಪ್ಡ್ ಸ್ಟೋರೇಜ್ ಸೇರಿದಂತೆ ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದಲ್ಲಿ ಯಾವುದೇ ಬೃಹತ್ ಜಲವಿದ್ಯುತ್ ಯೋಜನೆಗಳನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿದರು. ಇದು ದಕ್ಷಿಣ ಭಾರತದ ಹವಾಮಾನ ನಿಯಂತ್ರಕ. ಬೇಡ್ತಿ-ಅಘನಾಶಿನಿ ನದಿಗಳನ್ನು ತಿರುಗಿಸುವುದರಿಂದ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿ, ಕರಾವಳಿಯ ಕೃಷಿ ಮತ್ತು ಮೀನುಗಾರಿಕೆ ಸಂಪೂರ್ಣ ನಾಶವಾಗುತ್ತದೆ. ಸಾವಿರಾರು ಎಕರೆ ಅರಣ್ಯ ಪ್ರದೇಶವು ಮುಳುಗಡೆಯಾಗಲಿದ್ದು, ಅಪಾರ ಪ್ರಮಾಣದ ಜೀವವೈವಿಧ್ಯವು ಶಾಶ್ವತವಾಗಿ ಕಣ್ಮರೆಯಾಗಲಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಕೊಲ್ಲಬೇಡಿ ಎಂದು ಒತ್ತಾಯಿಸಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ಮಾರುವುದು ಅತ್ಯಂತ ದೊಡ್ಡ ಅಪರಾಧ. ಇಂದು ಈ ಯೋಜನೆಯನ್ನು ವಿರೋಧಿಸುವುದು ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುತ್ತಿರುವ ಅಳಿವು ಉಳಿವಿನ ಭರವಸೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವುದರ ಜತೆಗೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

Read More
Next Story