ಪಶುವೈದ್ಯಾಧಿಕಾರಿಗಳ ನೇಮಕ ಹಗರಣ; ಕನ್ನಾಳೆ ಸಿಂಡಿಕೇಟ್ ಸದಸ್ಯತ್ವಕ್ಕೆ ಕುತ್ತು
x

ಪಶುವೈದ್ಯಾಧಿಕಾರಿಗಳ ನೇಮಕ ಹಗರಣ; ಕನ್ನಾಳೆ ಸಿಂಡಿಕೇಟ್ ಸದಸ್ಯತ್ವಕ್ಕೆ ಕುತ್ತು

ಸೆ.10 ಹಾಗೂ ಸೆ.21ರಂದು ಎರಡು ಬಾರಿ ವಿವಿ ಸಿಬ್ಬಂದಿ ಬಸವರಾಜ್‌ ಕನ್ನಾಳೆಯ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿರುವ ಅವರ ನಿವಾಸಕ್ಕೆ ತೆರಳಿ ಪೋಷಕರ ಕೈಗೆ ನೋಟಿಸ್ ತಲುಪಿಸಿದ್ದರು. ನೋಟಿಸ್ ತಲುಪಿದ 7 ದಿನಗಳೊಳಗೆ ಸಮರ್ಪಕ ಉತ್ತರ ನೀಡುವಂತೆ ಸೂಚಿಸಲಾಗಿತ್ತು.


ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಹೊಂದಿರುವ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವಕ್ಕೂ ಈಗ ಕುತ್ತು ಎದುರಾಗಿದೆ. ರಾಜಕೀಯ ಪ್ರಭಾವ ಬಳಸಿ ರಾಜ್ಯಪಾಲರ ಕೋಟಾದಡಿ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ಕನ್ನಾಳೆಗೆ ಈಗ ಕೆಪಿಎಸ್ಸಿ ಅಕ್ರಮವೇ ಉರುಳಾಗಿ ಪರಿಣಮಿಸಿದೆ.

ಎರಡು ಬಾರಿ ನೋಟಿಸ್

ಕೆಪಿಎಸ್ಸಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಬಸವರಾಜ್ ಕನ್ನಾಳೆ ಪಾತ್ರವಿರುವುದು ಸಿಐಡಿ ತನಿಖೆಯಿಂದ ಬಹಿರಂಗವಾದ ಬೆನ್ನಲ್ಲೇ ರಾಜ್ಯಪಾಲರ ನಿರ್ದೇಶನದಂತೆ ತುಮಕೂರು ವಿಶ್ವವಿದ್ಯಾಲಯವು ಆರೋಪಿ ಬಸವರಾಜ್‌ ಕನ್ನಾಳೆಗೆ ಅಧಿಕೃತವಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಸೆಪ್ಟೆಂಬರ್ 10 ಹಾಗೂ ಸೆಪ್ಟೆಂಬರ್ 21ರಂದು ಎರಡು ಬಾರಿ ವಿವಿ ಸಿಬ್ಬಂದಿ ಕನ್ನಾಳೆಯ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿರುವ ಅವರ ನಿವಾಸಕ್ಕೆ ತೆರಳಿ ಪೋಷಕರ ಕೈಗೆ ನೋಟಿಸ್ ತಲುಪಿಸಿದ್ದರು. ಹಗರಣದಲ್ಲಿ ಭಾಗಿಯಾದ ಆರೋಪದ ಗಂಭೀರತೆ ಪರಿಗಣಿಸಿ, ನೋಟಿಸ್ ತಲುಪಿದ 7 ದಿನಗಳೊಳಗೆ ಸಮರ್ಪಕ ಉತ್ತರ ನೀಡುವಂತೆ ಸೂಚಿಸಲಾಗಿತ್ತು. ಒಂದು ವೇಳೆ ಉತ್ತರಿಸಲು ವಿಫಲವಾದರೆ ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸುವ ಎಚ್ಚರಿಕೆ ನೀಡಲಾಗಿತ್ತು.

ರಾಜ್ಯಪಾಲರಿಗೆ ವರದಿ ಸಲ್ಲಿಕೆ

ಎರಡನೇ ನೋಟಿಸ್‌ಗೂ ನಿಗದಿಪಡಿಸಿದ್ದ 7 ದಿನಗಳ ಗಡುವು ಸೆ.28ಕ್ಕೆ ಮುಕ್ತಾಯಗೊಂಡಿದೆ. ಆದರೂ, ಬಸವರಾಜ್ ಕನ್ನಾಳೆ ಕಡೆಯಿಂದ ವಿಶ್ವವಿದ್ಯಾಲಯಕ್ಕೆ ಯಾವುದೇ ಸ್ಪಷ್ಟನೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ. ಕೆಪಿಎಸ್ಸಿ ಹಗರಣದ ತನಿಖೆ ನಡೆಸುತ್ತಿರುವ ತನಿಖಾ ತಂಡದಿಂದಲೂ ಕನ್ನಾಳೆ ಕೃತ್ಯಗಳ ಹಾಗೂ ಹಗರಣದಲ್ಲಿ ಆತನ ನೇರ ಪಾತ್ರದ ಕುರಿತು ಅಧಿಕೃತ ಮಾಹಿತಿ ಪಡೆದು, ರಾಜ್ಯಪಾಲರಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ವಿಶ್ವವಿದ್ಯಾಲಯದ ನಿಯಮ ಮತ್ತು ಹಗರಣದ ಗಂಭೀರತೆ ಹಿನ್ನೆಲೆಯಲ್ಲಿ ಬಸವರಾಜ್ ಕನ್ನಾಳೆಯ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ನಿಚ್ಚಳವಾಗಿದೆ.

Read More
Next Story