
ಅರಣ್ಯಾಧಿಕಾರಿಗಳಿಂದ ಯೋಜಿತ ಕೊಲೆ; ಸಮಗ್ರ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ
ಘಟನೆಯಲ್ಲಿ ಭಾಗಿಯಾದ ಹಾಗೂ ನಿರ್ಲಕ್ಷ್ಯ ವಹಿಸಿದ ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸರ್ಕಾರ ತಕ್ಷಣವೇ ಅಮಾನತು ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ಧಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಡೆದ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆಯ ಕುರಿತು ಸ್ಥಳೀಯ ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಗೆ ನಿರಂತರವಾಗಿ ಸಂಪರ್ಕವಿರುತ್ತದೆ. ಆದರೆ ಈ ರೀತಿಯ ಹತ್ಯೆ ಘಟನೆಗಳು ಸಂಭವಿಸಿರುವುದು ಹಾಗೂ ಬೆದರಿಸುವ ಕೆಲಸಗಳು ನಡೆಯುತ್ತಿರುವುದು ತೀವ್ರ ಆತಂಕಕಾರಿ ಸಂಗತಿ ಎಂದರು.
ಅರಣ್ಯ ಇಲಾಖೆ ಹಾಗೂ ಸ್ಥಳೀಯ ಜನರ ನಡುವೆ ನಿಕಟ ಸಂಬಂಧವಿರುತ್ತದೆ. ಸ್ಥಳೀಯ ಗಾರ್ಡ್ಸ್ ಹಾಗೂ ಕೆಳಹಂತದ ಅರಣ್ಯ ಅಧಿಕಾರಿಗಳಿಗೆ ಪ್ರತಿಯೊಬ್ಬರ ಬಗ್ಗೆಯೂ ಮಾಹಿತಿ ಇರುತ್ತದೆ. ಹೀಗಿರುವಾಗ ಅತ್ಯಂತ ಕಡಿಮೆ ಅಂತರದಿಂದ ಮೂವರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಕಾರಣಗಳು ಸುಳ್ಳು
ಇಲಾಖೆಯ ಅಧಿಕಾರಿಗಳು ನೀಡುತ್ತಿರುವ ಸಮರ್ಥನೆಗಳು ಹಾಗೂ ಕಾರಣಗಳು ಸತ್ಯಕ್ಕೆ ದೂರವಾದವು. ಈ ಪ್ರಕರಣದ ತನಿಖೆ ಕೆಳಹಂತದ ಅಧಿಕಾರಿಗಳಿಂದ ನಡೆದರೆ ಸತ್ಯ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು. ಮೃತರ ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು. ಘಟನೆಯ ಹಿಂದಿನ ನೈಜ ಸತ್ಯಾಂಶಗಳನ್ನು ಹೊರತಂದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾದ ಹಾಗೂ ನಿರ್ಲಕ್ಷ್ಯ ವಹಿಸಿದ ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸರ್ಕಾರ ತಕ್ಷಣವೇ ಅಮಾನತು ಮಾಡಬೇಕು. ಬೇರೆ ಬೇರೆ ಪ್ರಕರಣಗಳಿಗೆ ಸರ್ಕಾರ ಎಸ್‌ಐಟಿ ರಚನೆ ಮಾಡುವಂತೆ, ಈ ಘಟನೆಗೂ ನ್ಯಾಯಾಲಯದ ನೇರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಘಟನೆಯ ಹಿಂದಿನ ಸತ್ಯಾಂಶ ಹೊರಬರದಿದ್ದರೆ ಇದು ‘ಕೋಲ್ಡ್ ಬ್ಲಡೆಡ್ ಮರ್ಡರ್’ (ಯೋಜಿತ ಹತ್ಯೆ) ಎಂದು ಬಿಂಬಿತವಾಗುತ್ತದೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆಯೊಂದೇ ಸತ್ಯವನ್ನು ಹೊರತ ಬರಲು ಸಾಧ್ಯ. ಸರ್ಕಾರ ತಕ್ಷಣವೇ ಹೆಚ್ಚೆತ್ತುಕೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ನೈಸ್ ಯೋಜನೆ ಸಮಗ್ರ ತನಿಖೆಗೆಯಾಗಲಿ
ನೈಸ್ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೈಸ್ ಯೋಜನೆಯಲ್ಲಿ ಹಲವು ನ್ಯೂನತೆಗಳಿದ್ದು, ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. "ನೈಸ್ ಯೋಜನೆಯಡಿ ನಿರ್ಮಿಸಲಾಗಿರುವ ರಸ್ತೆಯಿಂದ ಬೆಂಗಳೂರಿಗೆ ಒಂದಿಷ್ಟು ಅನುಕೂಲವಾಗಿರುವುದನ್ನು ಹೊರತುಪಡಿಸಿದರೆ, ಸಾರ್ವಜನಿಕರಿಂದ ಅತಿಯಾದ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಮೊದಲಿನಿಂದಲೂ ಇವೆ" ಎಂದು ಹೇಳಿದರು.
ನೈಸ್ ಯೋಜನೆಯ ಅಕ್ರಮ ಹಾಗೂ ನ್ಯೂನತೆಗಳ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಹಲವು ಬಾರಿ ಅರ್ಜಿಗಳು ಸಲ್ಲಿಕೆಯಾಗಿವೆ. ಇತ್ತೀಚೆಗೆ ಹೈಕೋರ್ಟ್ ನೀಡಿರುವ ಗಮನಾರ್ಹ ಟಿಪ್ಪಣಿಯಿಂದಾಗಿ ಈ ವಿಷಯದ ಗಂಭೀರತೆ ಹೆಚ್ಚಾಗಿದೆ. ನೈಸ್ ಕುರಿತು ಪಬ್ಲಿಕ್ ಅಕೌಂಟ್ಸ್ ಕಮಿಟಿ, ವರದಿ ಹಾಗೂ ಲೋಕೋಪಯೋಗಿ ಇಲಾಖೆ ನೀಡಿದ ವರದಿಗಳು ಈಗಾಗಲೇ ಸರ್ಕಾರದ ಬಳಿ ಇವೆ. ಯೋಜನೆಯಿಂದ ಸಂತ್ರಸ್ತರಾದ ಅನೇಕ ಜನರಿಗೆ ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ಇಂದಿಗೂ ಸರಿಯಾದ ಪರಿಹಾರ ತಲುಪಿಲ್ಲ. ಕೆಲವರಿಗೆ ಪರ್ಯಾಯ ನಿವೇಶನ (ಸೈಟ್) ಕೊಡುವುದಾಗಿ ಹೇಳಿ ಇನ್ನೂ ನೀಡಿಲ್ಲ ಎಂದು ಆರೋಪಿಸಿದರು.
ಅತಿಯಾದ ಟೋಲ್ ವಸೂಲಿಯನ್ನು ತಡೆದು ದರ ಕಡಿತಗೊಳಿಸಬೇಕು ಮತ್ತು ಇಡೀ ಯೋಜನೆಯನ್ನು ಪುನರ್ ವಿಮರ್ಶೆ ಮಾಡಿ ಸಮಗ್ರ ತನಿಖೆ ನಡೆಸಬೇಕು. ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸುವುದು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಅವರು ಆಗ್ರಹಿಸಿದ್ದಾರೆ.
ನಾಗೇಂದ್ರ ಸೇರ್ಪಡೆ ನೈತಿಕತೆ ಪತನ
ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ರಾಜ್ಯದ ವಿಶೇಷ ತನಿಖಾ ತಂಡ ಕ್ಲೀನ್ ಚೀಟ್ ನೀಡಿದೆಯೋ, ಅದೇ ವಹಿವಾಟಿನ ವಿಷಯದಲ್ಲಿ ಜಾರಿ ನಿರ್ದೇಶನಾಲಯ ಈಗಾಗಲೇ ಚಾರ್ಜ್‌ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಸಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ವ್ಯಕ್ತಿಯನ್ನು ಸಂಪುಟಕ್ಕೆ ಸೇರಿಸಿಕೊಂಡು ಮಂತ್ರಿ ಮಾಡುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಈ ಪ್ರಕರಣವು ಕೇವಲ ಎಫ್‌ಐಆರ್ ಅಥವಾ ದೂರಿನ ಹಂತದಲ್ಲಿ ಉಳಿದಿಲ್ಲ, ಬದಲಿಗೆ ತನಿಖೆ ಮುಗಿದು ತನಿಖಾ ಸಂಸ್ಥೆಯಿಂದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಚಾರ್ಜ್‌ಶೀಟ್ ಎದುರಿಸುತ್ತಿರುವವರನ್ನು ಸರ್ಕಾರದ ಉನ್ನತ ಸ್ಥಾನದಲ್ಲಿ ಕೂರಿಸುವುದು ನೈತಿಕತೆಗೆ ದೂರವಾದದ್ದು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶೋಭೆ ತರುವುದಿಲ್ಲ
ಡಿ.ಕೆ ಶಿವಕುಮಾರ್ ಸಂಪುಟಗಳಲ್ಲಿ ಮಹಿಳಾ ಸಚಿವೆ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಮಹಿಳೆಯರ ಬಗ್ಗೆ ಬಹಳ ಮಾತನಾಡುತ್ತಾರೆ. ಈಗ ಕಾಂಗ್ರೆಸ್ ಬಣ್ಣ ಬದಲಾಗಿದೆ ಗೌರವಯುತಾಗಿರುವ ಮಹಿಳಾ ಸಚಿವರನ್ನ ಸಂಪುಟಕ್ಕೆ ತರುವುದು ಸಿಎಂ ಜವಾಬ್ದಾರಿ ಇತ್ತು, ಆದರೆ ಇದುವರೆಗೂ ಡಿ.ಕೆ ಶಿವಕುಮಾರ್ ಸಂಪುಟಕ್ಕೆ ಮಹಿಳಾ ಸಚಿವೆಯನ್ನು ತೆಗೆದುಕೊಂಡಿಲ್ಲ ಮಹಿಳೆಯರನ್ನು ಹಗುರವಾಗಿ ತೆಗೆದುಕೊಳ್ಳುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮನಸ್ಥಿತಿ
ಇದೇ ವೇಳೆ ವಂದೆ ಮಾತರಂ ಗೀತೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವಮಾನ ಮಾಡಿದ್ದಾರೆ ಎನ್ನುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಮೈಂಡ್ ಸೆಟ್ ಏನು ಅಂತ ಗೊತ್ತಾಗಿದೆ. ಮೊದಲಿನಿಂದಲೂ ಅವರು ದೇಶಪ್ರೇಮ, ರಾಷ್ಟ್ರೀಯತೆಯ ವಿಷಯ ಬಂದಾಗ ಅದೇ ರೀತಿ ನಡೆದುಕೊಂಡಿದ್ದಾರೆ. ವಂದೇ ಮಾತರಂ ಗೀತೆಗೆ 150 ವರ್ಷವಾಗಿರುವ ಹಿನ್ನೆಲೆಯಲ್ಲಿ ಈಗ ಅದನ್ನು ಅಧಿಕೃತ ರಾಷ್ಟ್ರೀಯ ಗೀತೆಯನ್ನಾಗಿ ಮಾಡಲಾಗಿದೆ. ಅದಕ್ಕೆ ಅವಮಾನ ಮಾಡುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಆ ರೀತಿ ಮಾಡಿರುವುದು ಅಪರಾಧ ಎಂದು ಹೇಳಿದರು.

