
ಬಾಂಗ್ಲಾದೇಶದ ಉತ್ತರದ ಗಾಯ್‌ಬಂಧ (Gaibandha) ಜಿಲ್ಲೆಯ ಪಲಾಶ್‌ಬರಿಯಲ್ಲಿರುವ ಶ್ರೀ ಶ್ರೀ ರಾಧಾ ಗೋವಿಂದ ದೇವಾಲಯ ಸಂಕೀರ್ಣದಲ್ಲಿ ಈ ಬೃಹತ್ ಮೂರ್ತಿಗಳನ್ನು ನಿರ್ಮಿಸಲಾಗುತ್ತಿತ್ತು.
ಬಾಂಗ್ಲಾದೇಶದಲ್ಲಿ 81 ಅಡಿ ಎತ್ತರದ ರಾಮಮೂರ್ತಿ ನಿರ್ಮಾಣಕ್ಕೆ ಬ್ರೇಕ್: ಇಸ್ಲಾಮಿಕ್ ಮೂಲಭೂತವಾದಿಗಳ ಬೆದರಿಕೆಗೆ ಮಣಿದ ಆಡಳಿತ
ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮಿಕ್ ಬೋಧಕರು ಮೂರ್ತಿ ಧ್ವಂಸಗೊಳಿಸುವಂತೆ ನಿರಂತರವಾಗಿ ಕರೆ ನೀಡಿದ ಪರಿಣಾಮ, ಶೇ.80ರಷ್ಟು ಮುಕ್ತಾಯಗೊಂಡಿದ್ದ ಕಾಮಗಾರಿಗೆ ಈಗ ಬೀಗ ಬಿದ್ದಿದೆ.
ಬಾಂಗ್ಲಾದೇಶದಲ್ಲಿ ನಿರ್ಮಾಣವಾಗುತ್ತಿದ್ದ ಅತಿ ದೊಡ್ಡ, 81 ಅಡಿ ಎತ್ತರದ ಶ್ರೀರಾಮನ ಮೂರ್ತಿಯ ಕಾಮಗಾರಿಯನ್ನು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳ ತೀವ್ರ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಇದು ಕೇವಲ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿರುವುದಲ್ಲದೆ, ಪ್ರಧಾನಿ ತಾರಿಕ್ ರೆಹಮಾನ್ ಆಡಳಿತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮಿಕ್ ಬೋಧಕರು ಮೂರ್ತಿ ಧ್ವಂಸಗೊಳಿಸುವಂತೆ ನಿರಂತರವಾಗಿ ಕರೆ ನೀಡಿದ ಪರಿಣಾಮ, ಶೇ.80ರಷ್ಟು ಮುಕ್ತಾಯಗೊಂಡಿದ್ದ ಕಾಮಗಾರಿಗೆ ಈಗ ಬೀಗ ಬಿದ್ದಿದೆ.
ಏನಿದು ವಿವಾದ?
ಬಾಂಗ್ಲಾದೇಶದ ಉತ್ತರದ ಗಾಯ್‌ಬಂಧ (Gaibandha) ಜಿಲ್ಲೆಯ ಪಲಾಶ್‌ಬರಿಯಲ್ಲಿರುವ ಶ್ರೀ ಶ್ರೀ ರಾಧಾ ಗೋವಿಂದ ದೇವಾಲಯ ಸಂಕೀರ್ಣದಲ್ಲಿ ಈ ಬೃಹತ್ ಮೂರ್ತಿಗಳನ್ನು ನಿರ್ಮಿಸಲಾಗುತ್ತಿತ್ತು. ಅಂದಾಜು 22 ಕೋಟಿ ಟಾಕಾ (15.6 ಕೋಟಿ ರೂ.) ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ 81 ಅಡಿ ಎತ್ತರದ ಶ್ರೀರಾಮ, 50 ಅಡಿ ಎತ್ತರದ ಶ್ರೀಕೃಷ್ಣ ಮತ್ತು 30 ಅಡಿ ಎತ್ತರದ ಶಿವನ ಮೂರ್ತಿಗಳ ನಿರ್ಮಾಣ ಸೇರಿತ್ತು. ಸನಾತನ ಧರ್ಮದ ಆರಾಧ್ಯ ದೈವಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಉಗ್ರ ಇಸ್ಲಾಮಿಕ್ ಗುಂಪುಗಳ ಬೆದರಿಕೆಯಿಂದಾಗಿ ಸಂಘಟಕರು ಭಯಭೀತರಾಗಿದ್ದು, ಅನಿವಾರ್ಯವಾಗಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.
ಶಾಂತಿ ಕಾಪಾಡಲು ಹಿಂದೇಟು
"ಸಾಮಾಜಿಕ ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಾವು ಈ ಕೆಲಸವನ್ನು ನಿಲ್ಲಿಸುತ್ತಿದ್ದೇವೆ. ನಮಗೆ ಯಾವುದೇ ವಿವಾದಕ್ಕೆ ಕಾರಣರಾಗುವುದು ಇಷ್ಟವಿಲ್ಲ ಮತ್ತು ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವುದು ನಮಗೆ ಬೇಕಿಲ್ಲ" ಎಂದು ದೇವಾಲಯ ಸಮಿತಿಯ ಸಲಹೆಗಾರ ಶ್ಯಾಮಲಾಲ್ ಕುಮಾರ್ ಮಹಾಂತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ತಾರಿಕ್ ರೆಹಮಾನ್ ಅವರು ತಮ್ಮ ಮೊದಲ ಭಾಷಣದಲ್ಲಿ, "ಧರ್ಮ ವೈಯಕ್ತಿಕ, ಆದರೆ ದೇಶ ಎಲ್ಲರಿಗೂ ಸೇರಿದ್ದು" ಎಂದು ಹೇಳಿದ್ದರು. ಆದರೆ, ದೇಶ ಎಲ್ಲರಿಗೂ ಸೇರಿದ್ದೇ ಆದರೆ, ಹಿಂದೂಗಳಿಗೆ ತಮ್ಮ ದೇವರ ಮೂರ್ತಿ ಸ್ಥಾಪಿಸುವ ಹಕ್ಕು ಏಕೆ ಸಿಗುತ್ತಿಲ್ಲ ಎಂಬ ಗಂಭೀರ ಪ್ರಶ್ನೆಯನ್ನು ಅಲ್ಪಸಂಖ್ಯಾತರು ಎತ್ತಿದ್ದಾರೆ.
ಬೆದರಿಕೆ ಹಾಕಿದ ಮೌಲ್ವಿ, ಢಾಕಾದಲ್ಲಿ ಹಿಂದೂಗಳ ಪ್ರತಿಭಟನೆ
ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಮೊದಲಿನಿಂದಲೂ ಇಸ್ಲಾಮಿಕ್ ಗುಂಪುಗಳು ಅಡ್ಡಿಪಡಿಸುತ್ತಲೇ ಬಂದಿದ್ದವು. ಇತ್ತೀಚೆಗೆ ಇಸ್ಲಾಮಿಕ್ ಬೋಧಕನೊಬ್ಬ, "ಸರ್ಕಾರವೇ ಬುಲ್ಡೋಜರ್ ಬಳಸಿ ರಾಮನ ಮೂರ್ತಿಯನ್ನು ಧ್ವಂಸಗೊಳಿಸಬೇಕು. ಇಲ್ಲದಿದ್ದರೆ ಮುಸ್ಲಿಮರು ಅದನ್ನು ಒಡೆದು ಹಾಕಲಿದ್ದಾರೆ" ಎಂದು ಬೆದರಿಕೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.
ಇದರ ಜೊತೆಗೆ ಇತ್ತೀಚೆಗೆ ಗಾಯ್‌ಬಂಧದಲ್ಲಿ ನಡೆದ ಇಸ್ಲಾಮಿಸ್ಟರ ಪ್ರತಿಭಟನಾ ಮೆರವಣಿಗೆಯಲ್ಲಿ ಶ್ರೀರಾಮನ ಚಿತ್ರಕ್ಕೆ ಅಪಮಾನ ಮಾಡಲಾಗಿತ್ತು. ಇದರ ವಿರುದ್ಧ ಸಿಡಿದೆದ್ದ ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಮಂಗಳವಾರ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖ ಶಾಹಬಾಗ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿದ ಅವರು, ರಾಮಮೂರ್ತಿಯ ನಿರ್ಮಾಣ ಕಾಮಗಾರಿಯನ್ನು ಮರುಪ್ರಾರಂಭಿಸಲು ಅವಕಾಶ ನೀಡಬೇಕು ಹಾಗೂ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಹದಗೆಡುತ್ತಿರುವ ಭಾರತ-ಬಾಂಗ್ಲಾ ಸಂಬಂಧ
ಈ ವಿವಾದವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಡುತ್ತಿರುವ ಸಮಯದಲ್ಲೇ ಭುಗಿಲೆದ್ದಿದೆ. ಇತ್ತೀಚೆಗಷ್ಟೇ ಬಾಂಗ್ಲಾ ಪ್ರಧಾನಿ ಸಲಹೆಗಾರ ಜಾಹೇದ್ ಉರ್ ರೆಹಮಾನ್ ಅವರನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆಹಿಡಿದಿದ್ದರು. ಭಾರತದ ವಿರುದ್ಧ ಅವರು ಹಿಂದೊಮ್ಮೆ ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ಕೋಪಗೊಂಡ ರೆಹಮಾನ್ ತಮ್ಮ ಭಾರತ ಭೇಟಿಯನ್ನೇ ರದ್ದುಗೊಳಿಸಿದ್ದರು.
ಇದಲ್ಲದೆ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಪ್ರತಿವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖ ನಾಯಕರಿಗೆ ಮಾವು ಕಳುಹಿಸುವ 'ಮ್ಯಾಂಗೋ ಡಿಪ್ಲೊಮಸಿ' ರೂಢಿಸಿಕೊಂಡಿದ್ದರು. ಆದರೆ, ಪ್ರಸ್ತುತ ಪ್ರಧಾನಿ ತಾರಿಕ್ ರೆಹಮಾನ್ ಈ ಬಾರಿ ನೇಪಾಳಕ್ಕೆ ಮಾವು ಕಳುಹಿಸಿದ್ದು, ಭಾರತಕ್ಕೆ ಕಳುಹಿಸುವ ಯಾವುದೇ ಲಕ್ಷಣಗಳಿಲ್ಲ. ಇದು ಉಭಯ ದೇಶಗಳ ನಡುವಿನ ಶೀತಲ ಸಮರವನ್ನು ಎತ್ತಿ ತೋರಿಸುತ್ತಿದೆ.
ತಾಲಿಬಾನ್ ಮನಸ್ಥಿತಿ: ತಸ್ಲೀಮಾ ನಸ್ರೀನ್ ಕಿಡಿ
ರಾಮನ ಮೂರ್ತಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಗಡೀಪಾರಾದ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ತೀವ್ರವಾಗಿ ಖಂಡಿಸಿದ್ದಾರೆ. ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಅವರು, "ಇದು ತಾಲಿಬಾನ್ ಮನಸ್ಥಿತಿಯನ್ನು ತೋರಿಸುತ್ತದೆ. ಎಲ್ಲೆಡೆ ಹೊಸ ಮಸೀದಿಗಳು ನಿರ್ಮಾಣವಾಗುತ್ತಿರುವಾಗ ರಾಮಮೂರ್ತಿ ನಿರ್ಮಾಣಕ್ಕೆ ಮಾತ್ರ ಏಕೆ ವಿರೋಧ? ಧಾರ್ಮಿಕ ಸ್ವಾತಂತ್ರ್ಯ ಎಂಬುದು ಕೇವಲ ಬಹುಸಂಖ್ಯಾತರಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರಿಗೂ ಸಮಾನವಾಗಿ ಅನ್ವಯಿಸಬೇಕು" ಎಂದು ಚಾಟಿ ಬೀಸಿದ್ದಾರೆ.
ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಒಕ್ಕೂಟದ ವರದಿಯಂತೆ ಈ ವರ್ಷದ ಜನವರಿ 1 ರಿಂದ ಮಾರ್ಚ್ 31ರ ವರೆಗೆ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 133 ಕೋಮು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. ಈ ಘಟನೆಯು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಭದ್ರತೆಗೆ ಹಿಡಿದ ಕನ್ನಡಿಯಾಗಿದೆ.

