
ಮಾದಾಪಟ್ಟಣ ಕ್ವಾರಿ ದುರಂತ: ಮೂವರು ಆರೋಪಿಗಳ ಬಂಧನ, ಮಾಲೀಕರಿಗಾಗಿ ಶೋಧ
ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಕಾರ್ಮಿಕ ಗೋಪಿಕೃಷ್ಣನ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ತಾವರೆಕೆರೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಸಮೀಪದ ಮಾದಾಪಟ್ಟಣ ಗ್ರಾಮದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಯಿ ರಾಮ್ ಕ್ರಷರ್ ಮಾಲೀಕ ಪಾಂಡುರಂಗ, ಕ್ವಾರಿ ಉಸ್ತುವಾರಿ ಲೋಕೇಶ್ ಹಾಗೂ ಸ್ಥಳೀಯ ಮೇಲ್ವಿಚಾರಕ ರಾಜು ಬಂಧಿತರು. ಗುರುವಾರ ಬೆಳಿಗ್ಗೆ(ಜು.2) ಸಂಭವಿಸಿದ ಬಂಡೆ ಕುಸಿತದ ದುರಂತದಲ್ಲಿ ಒಟ್ಟು 7 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಮಾದಾಪಟ್ಟಣದ ಕಾವೇರಿ ಕ್ರಷರ್ ನಲ್ಲಿ ಎಂದಿನಂತೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ, ಮೇಲ್ಭಾಗದಲ್ಲಿದ್ದ ಬಸವೇಶ್ವರ ಕ್ರಷರ್‌ನಿಂದ ಬೃಹತ್ ಕಲ್ಲುಬಂಡೆ ಉರುಳಿ ಬಿದ್ದಿದೆ. ಸುರಕ್ಷತಾ ಕ್ರಮಗಳ ಲೋಪದಿಂದಾದ ಈ ದುರಂತದಲ್ಲಿ ಬಿಹಾರ ರಾಜ್ಯದ ವಲಸೆ ಕಾರ್ಮಿಕರು ಸೇರಿ ಏಳು ಮಂದಿ ಬಲಿಯಾಗಿದ್ದರು.
ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಕಾರ್ಮಿಕ ಗೋಪಿಕೃಷ್ಣನ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ತಾವರೆಕೆರೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ನಿರ್ಲಕ್ಷ್ಯ ಹಾಗೂ ಪ್ರಾಣಹಾನಿ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಲೀಸ್ ಪಡೆದಿದ್ದ ಮಾಲೀಕ ವಶಕ್ಕೆ
ಬಂಧಿತ ಪ್ರಮುಖ ಆರೋಪಿ ಪಾಂಡುರಂಗ ಎಂಬಾತ ಬಸವೇಶ್ವರ ಕ್ರಷರ್ ಅನ್ನು ಲೀಸ್‌ಗೆ ಪಡೆದು ನಡೆಸುತ್ತಿದ್ದ ಎನ್ನಲಾಗಿದೆ.
ಸದ್ಯ ಬಂಧಿತ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಗಣಿಗಾರಿಕೆ ನಿಯಮಗಳ ಉಲ್ಲಂಘನೆ ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಮುಂದುವರಿದ ಮಾಲೀಕರ ಹುಡುಕಾಟ
ದುರಂತ ನಡೆದು 24 ಗಂಟೆ ಕಳೆದರೂ ಪ್ರಕರಣದ ಪ್ರಮುಖ ಆರೋಪಿಗಳಾದ ಕಾವೇರಿ ಕ್ರಷರ್ ಮಾಲೀಕ ಉದಯ್ ಶಂಕರ್ ಮತ್ತು ಬಸವೇಶ್ವರ ಕ್ರಷರ್ ಮಾಲೀಕ ಡಿ.ಆನಂದಸ್ವಾಮಿ ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ. ಇವರಿಬ್ಬರೂ ಸದ್ಯ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

