ಹೆಬ್ಬಾಳದಲ್ಲಿ ಸುರಂಗ ಮಾರ್ಗ: 893 ಮರಗಳ ತೆರವಿಗೆ ಬಿಡಿಎ ಯೋಜನೆ, ಪರಿಸರವಾದಿಗಳ ಕಳವಳ
x

ಎಐ ಚಿತ್ರ

ಹೆಬ್ಬಾಳದಲ್ಲಿ ಸುರಂಗ ಮಾರ್ಗ: 893 ಮರಗಳ ತೆರವಿಗೆ ಬಿಡಿಎ ಯೋಜನೆ, ಪರಿಸರವಾದಿಗಳ ಕಳವಳ

ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ ಮರಗಳ ಉದ್ಯಾನ, ಹೆಬ್ಬಾಳ ಕೆರೆಯ ಬಫರ್ ವಲಯ ಹಾಗೂ ಸುತ್ತಮುತ್ತಲಿನ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ಮರಗಳ ಹನನ ನಡೆಯಲಿದೆ.


ಬೆಂಗಳೂರಿನ ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಪಶುವೈದ್ಯಕೀಯ ಕಾಲೇಜುವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ 2.2 ಕಿ.ಮೀ. ಉದ್ದದ ಸುರಂಗ ಮಾರ್ಗ ಯೋಜನೆಗೆ ಬರೋಬ್ಬರಿ 893 ಮರಗಳು ಹಾನಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.

ಸುರಂಗಕ್ಕಾಗಿ ಮರಗಳನ್ನು ಕಡಿಯುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಡೆಗೆ ಪರಿಸರಾಸಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಯೋಜನೆಯಿಂದ ತೊಂದರೆಗೆ ಒಳಗಾಗುವ ಒಟ್ಟು 893 ಮರಗಳಲ್ಲಿ ಶೇ 85ರಷ್ಟು ಮರಗಳನ್ನು ಸಂಪೂರ್ಣ ಕಡಿದುಹಾಕುವ ಬದಲಿಗೆ ಬೇರೆಡೆಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ತೆರವು ಮಾಡುವ ಮರಗಳನ್ನು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣ ಹಾಗೂ ಬಿಡಿಎಗೆ ಸೇರಿದ ಇತರೆ ಖಾಲಿ ಜಾಗಗಳಲ್ಲಿ ನೆಡಲು ಚಿಂತನೆ ನಡೆಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್, "ಮರಗಳ ತೆರವು ಅಥವಾ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಬಿಡಿಎ ಇನ್ನು ಸಂಪೂರ್ಣವಾಗಿ 'ಫಾರ್ಮ್–1' ಅಡಿ ಅಧಿಕೃತ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಕೆಯಾದ ನಂತರ ಅರಣ್ಯ ಇಲಾಖೆಯಿಂದ ಕ್ಷೇತ್ರ ಪರಿಶೀಲನೆ ನಡೆಸಿ, ನಿಯಮಾನುಸಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು," ಎಂದು ಸ್ಪಷ್ಟಪಡಿಸಿದ್ದಾರೆ.

ಜೀವ ವೈವಿಧ್ಯತೆಗೆ ಪೆಟ್ಟು

ಪ್ರಸ್ತಾವಿತ ಸುರಂಗ ಮಾರ್ಗವು ನಗರದ ಅತಿ ಸೂಕ್ಷ್ಮ ಹಾಗೂ ಶ್ರೀಮಂತ ನೈಸರ್ಗಿಕ ವಲಯಗಳ ಮೂಲಕ ಹಾದು ಹೋಗಲಿದೆ. ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ ಮರಗಳ ಉದ್ಯಾನ, ಹೆಬ್ಬಾಳ ಕೆರೆಯ ಬಫರ್ ವಲಯ ಹಾಗೂ ಸುತ್ತಮುತ್ತಲಿನ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ಮರಗಳ ಹನನ ನಡೆಯಲಿದೆ.

ಈ ಪ್ರದೇಶಗಳಲ್ಲಿ ನೂರಾರು ಜಾತಿಯ ಪಕ್ಷಿಗಳು, ಚಿಟ್ಟೆಗಳು ಹಾಗೂ ಸಣ್ಣ ಕ್ರಿಮಿ ಕೀಟಗಳು ಆಶ್ರಯ ಪಡೆದಿವೆ. ಇಡೀ ಪ್ರದೇಶವು ನಗರದಲ್ಲಿ 10 ಕಿ.ಮೀ. ಉದ್ದದ ಹಸಿರು ಸಂಪರ್ಕ ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಸಾಲು ಸಾಲು ಮೂಲಸೌಕರ್ಯ ಯೋಜನೆಗಳಿಂದ ಈ ನೈಸರ್ಗಿಕ ಸಂಪರ್ಕ ಕೊಂಡಿ ಈಗಾಗಲೇ ದುರ್ಬಲಗೊಂಡಿದ್ದು, ಸುರಂಗ ಮಾರ್ಗ ಯೋಜನೆಯು ಮತ್ತಷ್ಟು ನಾಶಪಡಿಸಲಿದೆ.

ಸ್ಥಳಾಂತರ ಕಣ್ಣೊರೆಸುವ ತಂತ್ರವೇ?

ಮರಗಳನ್ನು ಸ್ಥಳಾಂತರಿಸುವ ಬಿಡಿಎ ಯೋಜನೆಯ ಕುರಿತು ಪರಿಸರ ವಿಜ್ಞಾನಿಗಳು ಮತ್ತು ಸಸ್ಯಶಾಸ್ತ್ರಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್' ಸಂಸ್ಥೆಯ ಹಿರಿಯ ವಿಜ್ಞಾನಿ ಹಾಗೂ ಸಸ್ಯಶಾಸ್ತ್ರಜ್ಞ ಗಣೇಶನ್ ಮಾತನಾಡಿ, ದೊಡ್ಡ ಮರಗಳ ಸ್ಥಳಾಂತರ ಪ್ರಕ್ರಿಯೆ ಯಶಸ್ವಿಯಾಗುವುದು ಅತ್ಯಂತ ವಿರಳ. ಹೆಚ್ಚಿನ ಸಂದರ್ಭಗಳಲ್ಲಿ ಮರಗಳ ಸ್ಥಳಾಂತರ ಪ್ರಕ್ರಿಯೆಯು ಕೇವಲ ಹೆಸರಿಗಷ್ಟೇ ನಡೆಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Read More
Next Story