ಬೆಂಗಳೂರಲ್ಲಿ ರಾತ್ರಿಯಿಡೀ ವರುಣಾರ್ಭಟ, ಜನಜೀವನ ಅಸ್ತವ್ಯಸ್ತ
x

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದೆ.

ಬೆಂಗಳೂರಲ್ಲಿ ರಾತ್ರಿಯಿಡೀ ವರುಣಾರ್ಭಟ, ಜನಜೀವನ ಅಸ್ತವ್ಯಸ್ತ

ಮಳೆಯಿಂದಾಗಿ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು.


ಬಂಗಾಳಕೊಲ್ಲಿಯಲ್ಲಿ ಉಂಟಾದ ದಿಢೀರ್ ವಾಯುಭಾರ ಕುಸಿತದ ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ಭಾರಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ಶನಿವಾರ ತಡರಾತ್ರಿ ಆರಂಭವಾದ ವರುಣನ ಆರ್ಭಟ ಭಾನುವಾರ(ಸೆ.20) ಬೆಳಿಗ್ಗೆಯವರೆಗೂ ಮುಂದುವರಿದಿದ್ದು, ಇದರಿಂದ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟ ಎದುರಿಸುವಂತಾಯಿತು.

ಶಾಂತಿನಗರ, ವಸಂತನಗರ, ಕಾರ್ಪೊರೇಷನ್, ಮೆಜೆಸ್ಟಿಕ್, ಕೋರಮಂಗಲ, ಸಿಟಿ ಮಾರ್ಕೆಟ್, ಮಲ್ಲೇಶ್ವರಂ, ಯಶವಂತಪುರ, ಜಯನಗರ, ವಿಜಯನಗರ, ಜೆ.ಪಿ. ನಗರ, ರಾಜಾಜಿನಗರ, ಚಂದ್ರಾಲೇಔಟ್, ನಾಗರಬಾವಿ, ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರ ಹಾಗೂ ಹೆಬ್ಬಾಳ ಸೇರಿದಂತೆ ಹಲವೆಡೆ ರಾತ್ರಿಯಿಡೀ ಬಿಡುವಿಲ್ಲದೆ ಮಳೆ ಸುರಿದಿದೆ.

ಜಲಾವೃತಗೊಂಡ ರಸ್ತೆಗಳು

ಮಳೆಯಿಂದಾಗಿ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು. ಮೆಜೆಸ್ಟಿಕ್, ಮೈಸೂರು ರಸ್ತೆ ಮತ್ತು ಹೆಬ್ಬಾಳ ಫ್ಲೈಓವರ್ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೇ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು.

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಸುತ್ತಮುತ್ತ ತಗ್ಗು ಪ್ರದೇಶದ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ಹವಾಮಾನ ಇಲಾಖೆ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಸುರಕ್ಷಿತವಾಗಿ ಪ್ರಯಾಣಿಸಲು ಮತ್ತು ನೀರು ನಿಂತಿರುವ ರಸ್ತೆಗಳಲ್ಲಿ ಜಾಗರೂಕರಾಗಿರುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.

Read More
Next Story