
ಸಿ.ಇ.ಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ಪ್ರಕರಣ: ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ
ಬೆಂಗಳೂರಿನ ಕೃಪಾನಿಧಿ ಪಿ.ಯು ಕಾಲೇಜು (Krupanidhi PU College) ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಿದ ನಂತರವೇ ಅವರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು.
ಬೆಂಗಳೂರು ನಗರದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಪರೀಕ್ಷಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಘಟನೆಯ ಬಗ್ಗೆ ಸಮಗ್ರ ವಿಚಾರಣೆ ನಡೆಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಲ್ಲಿ ಬೆಂಗಳೂರು ದಕ್ಷಿಣ ವಲಯದ ಪದವಿ ಪೂರ್ವ ಶಿಕ್ಷಣ ಇಲಾಖೆ ಸದಸ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಸಹಾಯಕರು, ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಸಮಿತಿಯ ಸದಸ್ಯರಾಗಿದ್ದಾರೆ.
ಘಟನೆ ಹಿನ್ನೆಲೆ ಏನು?
ಏ. 23 ರಂದು ನಡೆದ 2026ನೇ ಸಾಲಿನ ಸಿ.ಇ.ಟಿ ಪರೀಕ್ಷೆಯ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆಯ ಸಂದರ್ಭದಲ್ಲಿ ಬೆಂಗಳೂರಿನ ಕೃಪಾನಿಧಿ ಪಿ.ಯು ಕಾಲೇಜು (Krupanidhi PU College) ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಿದ ನಂತರವೇ ಅವರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಸ್ತ್ರ ಸಂಹಿತೆಯ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದರೂ ಸಹ, ಇಂತಹ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಮಾಡಿದಂತೆ ಕಂಡುಬರುತ್ತಿದೆ ಎಂದು ಜಿಲ್ಲಾಧಿಕಾರಿಗಳ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಕುರಿತು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೆ.ಇ.ಎ ಕಾರ್ಯನಿರ್ವಾಹಕ ನಿರ್ದೇಶಕರು ಕೋರಿದ ಹಿನ್ನೆಲೆಯಲ್ಲಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಈ ತನಿಖಾ ತಂಡವು ಘಟನೆಯ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಿ ಎರಡು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ತನಿಖೆಗೆ ಕೋರಿದ್ದ ಕೆಇಎ
ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಘಟನೆ ಕುರಿತಂತೆ ತನಿಖೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿತ್ತು.
ಕೃಪಾನಿಧಿ ಪಿಯು ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ ಕೆಲವು ವಿದ್ಯಾರ್ಥಿಗಳಿಗೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯುವಂತೆ ಸೂಚನೆ ನೀಡಿದ್ದರು. ಜನಿವಾರ ತೆಗೆದ ಬಳಿಕವಷ್ಟೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುಮತಿ ನೀಡಲಾಗಿತ್ತು ಎಂಬ ಅಂಶವು ಕೆಇಎ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ತನಿಖೆಗೆ ಕೋರಿತ್ತು.
ಕೆಇಎ ಅಧಿಕಾರಿಗಳ ಖಡಕ್ ಸೂಚನೆ
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು, ಪರೀಕ್ಷಾ ವಸ್ತ್ರ ಸಂಹಿತೆಯ ಬಗ್ಗೆ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ವಿವರಿಸಿದ್ದರು. ಜನಿವಾರ, ಲಿಂಗ ಸೇರಿದಂತೆ ಧಾರ್ಮಿಕ ದಿರಿಸುಗಳನ್ನು ತೆಗೆಸಬಾರದು ಎಂದು ಸಿಬ್ಬಂದಿಗೆ ತರಬೇತಿಯ ವೇಳೆ ಸ್ಪಷ್ಟ ಸೂಚನೆ ನೀಡಲಾಗಿತ್ತು. ಕಳೆದ ವರ್ಷವೂ ಇಂತಹದ್ದೇ ಘಟನೆ ನಡೆದಿದ್ದರಿಂದ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿತ್ತು. ಈ ಬಾರಿ ಮತ್ತೆ ಇಂತಹ ಘಟನೆ ಮರುಕಳುಹಿಸದಂತೆ ಎಚ್ಷರಿಕೆ ವಹಿಸಿದರೂ ಯಾರೋ ಉದ್ದೇಶಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪ್ರಾಧಿಕಾರ ಆತಂಕ ವ್ಯಕ್ತಪಡಿಸಿತ್ತು.
ಇನ್ನು ಘಟನೆಗೆ ಸಂಬಂಧಿಸಿದಂತೆ ರಾಜಕೀಯವಾಗಿಯೂ ಕೋಲಾಹಲ ಸೃಷ್ಟಿಯಾಗಿತ್ತು. ಪೋಷಕರು, ಬ್ರಾಹ್ಮಣ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದವು. ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದ್ದರು.

