ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ ಹೊಸ ಇತಿಹಾಸ: ಅತ್ಯಾಧುನಿಕ ಸಮಗ್ರ ತಾಣದ ನಿರ್ಮಾಣ
x

ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ ಹೊಸ ಇತಿಹಾಸ: ಅತ್ಯಾಧುನಿಕ ಸಮಗ್ರ ತಾಣದ ನಿರ್ಮಾಣ

ಅತ್ಯಾಧುನಿಕ ಸಮಾವೇಶ ಕೇಂದ್ರವು ಅಂತಾರಾಷ್ಟ್ರೀಯ ಸಮ್ಮೇಳನಗಳು, ಬೃಹತ್ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಇದು ಪ್ರದೇಶದ ಅತ್ಯಂತ ಪ್ರಮುಖ ಕೇಂದ್ರವಾಗಿರಲಿದೆ.


Click the Play button to hear this message in audio format

ದೇಶದ ಐಟಿ ರಾಜಧಾನಿ ಬೆಂಗಳೂರು ಮತ್ತೊಂದು ಜಾಗತಿಕ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಬೆಂಗಳೂರು ಏರ್‌ಪೋರ್ಟ್ ಸಿಟಿಯು, ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಪ್ರೆಸ್ಟೀಜ್ ಗ್ರೂಪ್‌ನೊಂದಿಗೆ ಕೈ ಜೋಡಿಸಿ, ಅತ್ಯಾಧುನಿಕ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ವ್ಯವಹಾರ, ಆತಿಥ್ಯ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಒಂದೇ ಸೂರಿನಡಿ ತರುವ ಮೂಲಕ ಭಾರತದ ಅತಿದೊಡ್ಡ ಮತ್ತು ಅತ್ಯಂತ ಆಧುನಿಕ ನಗರ ಗಮ್ಯಸ್ಥಾನವಾಗಿ ಹೊರಹೊಮ್ಮಲಿದೆ.

ಬೆಂಗಳೂರು ಏರ್‌ಪೋರ್ಟ್ ಸಿಟಿಯ ಹೃದಯಭಾಗದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯು ಕೇವಲ ಒಂದು ಕಟ್ಟಡವಲ್ಲ, ಬದಲಾಗಿ ಒಂದು ಬೃಹತ್ ಪರಿಸರ ವ್ಯವಸ್ಥೆಯಾಗಿದೆ. ಅತ್ಯಾಧುನಿಕ ಸಮಾವೇಶ ಕೇಂದ್ರವು ಅಂತಾರಾಷ್ಟ್ರೀಯ ಸಮ್ಮೇಳನಗಳು, ಬೃಹತ್ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಇದು ಪ್ರದೇಶದ ಅತ್ಯಂತ ಪ್ರಮುಖ ಕೇಂದ್ರವಾಗಿರಲಿದೆ. ಜಾಗತಿಕ ಖ್ಯಾತಿಯ 'ಸೇಂಟ್ ರೆಜಿಸ್' ಮತ್ತು 'ಮ್ಯಾರಿಯಟ್ ಮಾರ್ಕ್ವಿಸ್' ಬ್ರ್ಯಾಂಡ್‌ಗಳ ಹೋಟೆಲ್‌ಗಳು ಇಲ್ಲಿ ತಲೆ ಎತ್ತಲಿವೆ. ಇದು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಮತ್ತು ವ್ಯಾಪಾರಸ್ಥರಿಗೆ ಐಷಾರಾಮಿ ವಾಸ್ತವ್ಯವನ್ನು ಒದಗಿಸಲಿದೆ. ಉನ್ನತ ದರ್ಜೆಯ ಕಾರ್ಪೊರೇಟ್ ಕಚೇರಿಗಳು ಮತ್ತು ವೈವಿಧ್ಯಮಯ ಆಹಾರ-ಪಾನೀಯ ಮಳಿಗೆಗಳು ಇಲ್ಲಿರಲಿದ್ದು, ಕೆಲಸ ಮತ್ತು ಮನರಂಜನೆಯನ್ನು ಸಮತೋಲನದಲ್ಲಿಡಲು ಸಹಕರಿಸುತ್ತವೆ.

ದೂರದೃಷ್ಟಿ ಮತ್ತು ಬದ್ಧತೆ

ಈ ಮಹತ್ವದ ಸಹಭಾಗಿತ್ವದ ಕುರಿತು ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಜಾಕ್ ಅವರು ಮಾತನಾಡಿ, "ಭಾರತದಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸುವುದು ನಮ್ಮ ಗುರಿ. ಆತಿಥ್ಯ ಮತ್ತು ವ್ಯವಹಾರಗಳನ್ನು ಒಂದೇ ಪರಿಸರದಲ್ಲಿ ಸಂಯೋಜಿಸುವ ಮೂಲಕ ನಾವು ಬೆಂಗಳೂರಿನ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸುತ್ತಿದ್ದೇವೆ ಎಂದು ತಿಳಿಸಿದರು. ಇನ್ನು ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್, ವಿಮಾನ ನಿಲ್ದಾಣದ ಅನುಭವವು ಕೇವಲ ಪ್ರಯಾಣಕ್ಕೆ ಸೀಮಿತವಾಗಬಾರದು. ನಾವು ವಾಣಿಜ್ಯೋದ್ಯಮ, ಪ್ರತಿಭೆ ಮತ್ತು ನವೀನ ಆಲೋಚನೆಗಳನ್ನು ಬೆಸೆಯುವ ಅಂತಹ ತಾಣವನ್ನು ನಿರ್ಮಿಸುತ್ತಿದ್ದೇವೆ, ಇದು ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ವಿವರಿಸಿದರು.

ಬೆಂಗಳೂರು ಈಗಾಗಲೇ ಭಾರತದ ನವೋದ್ಯಮ ಮತ್ತು ತಂತ್ರಜ್ಞಾನದ ರಾಜಧಾನಿಯಾಗಿದೆ. ಈ ಯೋಜನೆ ಜಾರಿಗೆ ಬರುವುದರಿಂದ ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಲಿದೆ. ಈ ಯೋಜನೆಯು ಅಪಾರ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸಲಿದ್ದು, ಸಾವಿರಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರದಿಂದಾಗಿ, ಜಾಗತಿಕ ಕಾರ್ಪೊರೇಟ್ ಕಂಪನಿಗಳು ತಮ್ಮ ಸಭೆ ಮತ್ತು ಸಮಾರಂಭಗಳನ್ನು ಆಯೋಜಿಸಲು ಬೆಂಗಳೂರನ್ನು ಮೊದಲ ಆಯ್ಕೆಯಾಗಿ ಪರಿಗಣಿಸುತ್ತವೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವು ಈಗಾಗಲೇ ವೇಗವಾಗಿ ಬೆಳೆಯುತ್ತಿದೆ. ಈ ಸಮಗ್ರ ತಾಣವು ಆ ಕಾರಿಡಾರ್‌ಗೆ ಹೊಸ ಚೈತನ್ಯವನ್ನು ನೀಡಲಿದ್ದು, ಈ ಭಾಗವನ್ನು ಒಂದು 'ಸ್ಮಾರ್ಟ್ ಸಿಟಿ' ಮಾದರಿಯ ಪ್ರದೇಶವನ್ನಾಗಿ ಪರಿವರ್ತಿಸಲಿದೆ.

ಜೀವಂತ ನಗರ ಗಮ್ಯಸ್ಥಾನ

ಈ ಯೋಜನೆಯು ಆಧುನಿಕ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. 'ಲೈವ್-ವರ್ಕ್-ಪ್ಲೇ' ಎಂಬ ಪರಿಕಲ್ಪನೆಯಡಿ, ಇಲ್ಲಿ ಬರುವ ವ್ಯಕ್ತಿಗಳಿಗೆ ಒಂದೇ ಸ್ಥಳದಲ್ಲಿ ಎಲ್ಲವೂ ದೊರೆಯಲಿದೆ. ಅಂತಾರಾಷ್ಟ್ರೀಯ ಭೇಟಿಗೆ ಬರುವ ಕಾರ್ಪೊರೇಟ್ ಪ್ರತಿನಿಧಿಗಳು, ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಿಗೆ ಇದು ಆರಾಮದಾಯಕ ಮತ್ತು ಕ್ರಿಯಾಶೀಲ ವಾತಾವರಣವನ್ನು ಒದಗಿಸುತ್ತದೆ.

ಪ್ರೆಸ್ಟೀಜ್ ಗ್ರೂಪ್ ಮತ್ತು ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್‌ನ ಈ ಸಹಭಾಗಿತ್ವವು ಬೆಂಗಳೂರಿನ ಮೂಲಸೌಕರ್ಯ ಮತ್ತು ಆರ್ಥಿಕ ವಲಯದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಸಮಗ್ರ ಮೂಲಸೌಕರ್ಯವನ್ನು ಸಾಂಸ್ಕೃತಿಕ ಮತ್ತು ವಾಣಿಜ್ಯ ಸೌಲಭ್ಯಗಳೊಂದಿಗೆ ಬೆಸೆಯುವ ಈ ನಿರ್ಧಾರ, ಬೆಂಗಳೂರನ್ನು ಜಾಗತಿಕ ನಗರಗಳ ಪಟ್ಟಿಯಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ವಿಮಾನಯಾನ ಸೇವೆಯನ್ನು ಮೀರಿ, ಒಂದು ನಗರದ ಸಾಂಸ್ಕೃತಿಕ ಮತ್ತು ವಾಣಿಜ್ಯ ದ್ವಾರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಯೋಜನೆಯ ಮೂಲಕ ಹೊಸ ಇತಿಹಾಸ ಬರೆಯಲಿದೆ.

Read More
Next Story