
Bangalore Air Show| ಯಲಹಂಕ ಏರ್ ಶೋ ರನ್ ವೇ ಕೂಡ ಅರಣ್ಯ ಭೂಮಿ! ಜಮೀನು ವಾಪಸ್‌ಗೆ ಸರ್ಕಾರ ಎಚ್ಚರ
159 ಎಕರೆ ಪ್ರದೇಶವು ಸರ್ಕಾರಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ವಾಯುಪಡೆಯು ಈ ಜಾಗವನ್ನು ರನ್ ವೇ ಆಗಿ ಬಳಸಿಕೊಳ್ಳುತ್ತಿದೆ. ಪರ್ಯಾಯ ಭೂಮಿ ನೀಡದಿದ್ದರೆ ವಾಪಸ್ ಪಡೆಯಲು ಅರಣ್ಯ ಇಲಾಖೆ ಮುಂದಾಗಿದೆ.
ಯಲಹಂಕದ ವಾಯುನೆಲೆ ಪ್ರದೇಶದಲ್ಲಿನ 159 ಎಕರೆ ಪ್ರದೇಶಕ್ಕೆ ವಾಯುಪಡೆಯು ಅರಣ್ಯ ತೀರುವಳಿ ಪ್ರಸ್ತಾವನೆಯನ್ನು ಸಲ್ಲಿಸಿ ಪರ್ಯಾಯ ಭೂಮಿ ನೀಡದಿದ್ದರೆ ಆ ಪ್ರದೇಶವನ್ನು ವಾಪಸ್ ಪಡೆಯಲು ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯು ಮುಂದಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ನಡೆಯುವ ಯಲಹಂಕದ ವಾಯುನೆಲೆ ದೇಶದ ಹೆಮ್ಮೆಯ ತಾಣವಾಗಿದೆ. ಆದರೆ, ವಾಯುನೆಲೆ ಇರುವ ಯಲಹಂಕದ ಗಂಟಿಗಾನಹಳ್ಳಿಯ ಸುಮಾರು 159 ಎಕರೆ ಪ್ರದೇಶವು ಸರ್ಕಾರಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ವಾಯುಪಡೆಯು ಪ್ರಸ್ತುತ ಈ ಜಾಗವನ್ನು ತನ್ನ ವಿಮಾನ ನಿಲ್ದಾಣದ ರನ್ ವೇ ಆಗಿ ಬಳಸಿಕೊಳ್ಳುತ್ತಿದೆ. ಈ ಜಮೀನಿನ ಆರ್‌ಟಿಸಿ ಮತ್ತು ಮ್ಯುಟೇಶನ್ ಇಂದಿಗೂ ಅರಣ್ಯ ಇಲಾಖೆಯ ಹೆಸರಿನಲ್ಲೇ ಇದೆ. ಈ ಭೂಮಿಯು ಇದುವರೆಗೆ 'ಭೂ ಪರಿವರ್ತನೆ' ಆಗಿಲ್ಲ.
ಅರಣ್ಯ ಸಂರಕ್ಷಣಾ ಕಾಯ್ದೆಯನ್ವಯ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಈ ಹಿನ್ನೆಲೆಯಲ್ಲಿ, ವಾಯುಪಡೆಯು ಅರಣ್ಯ ತೀರುವಳಿ ಪ್ರಸ್ತಾವನೆಯನ್ನು ಸಲ್ಲಿಸಿ, ಅರಣ್ಯ ಇಲಾಖೆಗೆ ಪರ್ಯಾಯ ಭೂಮಿಯನ್ನು ನೀಡಬೇಕು; ಇಲ್ಲದಿದ್ದರೆ ಆ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಿಂಪಡೆಯಲು ಕಾನೂನುಬದ್ಧ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ವಾಯುಪಡೆಯು ಮುಂದಿನ ಕ್ರಮ ಕೈಗೊಳ್ಳದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವೆ ಕಾನೂನು ಹೋರಾಟಕ್ಕೆ ಹಾದಿ ಮಾಡಿಕೊಡುವ ಸಾಧ್ಯತೆ ಇದೆ.
ಎಚ್‌ಎಂಟಿ ಹೋರಾಟ
ಕರ್ನಾಟಕ ಮಾಧ್ಯಮ ಅಕಾಡಮಿ ಆಯೋಜಿಸಿದ್ದ ವಿತರೀತ ಬಿಸಿ ಮತ್ತು ಬೆಂಗಳೂರಿನ ಮೇಲೆ ಅದರ ಪರಿಣಾಮ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೈಗಾರಿಕಾ ಉದ್ದೇಶಕ್ಕಾಗಿ ಹಿಂದೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಗೆ ಈ ಹಿಂದೆ ಪೀಣ್ಯ ಪ್ಲಾಂಟೇಷನ್‌ನಲ್ಲಿ 400 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ನೀಡಲಾಗಿತ್ತು. ಆದರೆ, ಸಂಸ್ಥೆಯು ಇದರಲ್ಲಿ 160 ಎಕರೆ ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಇನ್ನೂ ಉಳಿದಿರುವ 280 ಎಕರೆ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದೆ. ವಾಯುಪಡೆಗೆ ಜಾರಕಬಂಡೆಯಲ್ಲಿ ನೀಡಲಾಗಿದ್ದ 444 ಎಕರೆ ಭೂಮಿಯ ಮಂಜೂರಾತಿಯನ್ನು 1980ರ ಅರಣ್ಯ ಕಾಯ್ದೆಯ ಉಲ್ಲಂಘನೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇದನ್ನು ಮರಳಿ ಪಡೆಯಲು ಇಲಾಖೆ ಸಜ್ಜಾಗಿದೆ ಎಂದು ಹೇಳಿದರು.
ಬೆಂಗಳೂರಿನ ಶ್ವಾಸತಾಣಗಳ ರಕ್ಷಣೆ ಹಾಗೂ ಒತ್ತುವರಿ ತೆರವು
ಬೆಂಗಳೂರಿನ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ನಗರದ ಆಮ್ಲಜನಕದ ಮೂಲಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಭೂಮಾಫಿಯಾದ ಕಣ್ಣು ಈ ಹಸಿರು ತಾಣಗಳ ಮೇಲೆ ಬಿದ್ದಿತ್ತು. ಬೆಂಗಳೂರಿನ ಅರಣ್ಯ ಭೂಮಿ ಅತಿಕ್ರಮಣದ ವಿರುದ್ಧ ಸಮರ ಸಾರಲಾಗಿದೆ. ನಗರದ ಕೊತ್ತನೂರು, ಕಾಡುಗೋಡಿ, ಬಿ.ಎಂ. ಕಾವಲ್, ತುರಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ. ಬೆಲೆ ಬಾಳುವ 250 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಕೇವಲ ಭೂಮಿಯನ್ನು ವಶಪಡಿಸಿಕೊಂಡು ಸುಮ್ಮನಾಗದೆ, ಆ ಜಾಗದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಹೊಸ ನೆಡುತೋಪುಗಳನ್ನು ನಿರ್ಮಿಸುವ ಮೂಲಕ ನಗರಕ್ಕೆ 'ಶ್ವಾಸತಾಣ'ಗಳನ್ನು ಮರಳಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ವೈಜ್ಞಾನಿಕವಾಗಿ ಎದುರಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ರೂಪಿಸಿದೆ. ಈ ಯೋಜನೆಯನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್‌ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಅಧಿಕಾರಿಗಳಿಗೆ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಹವಾಮಾನ ಬದಲಾವಣೆ ತಡೆಗಟ್ಟುವ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ. ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಏಪ್ರಿಲ್ 2025ರಲ್ಲಿ 'ಹವಮಾನ ಮಿತ್ರ' ಎಂಬ ರೇಡಿಯೋ ಕಾರ್ಯಕ್ರಮವನ್ನು ಆಕಾಶವಾಣಿಯಲ್ಲಿ ಪ್ರಾರಂಭಿಸಲಾಗಿದ್ದು, ಈಗಾಗಲೇ 24 ಕಂತುಗಳು ಪ್ರಸಾರವಾಗಿವೆ. ಇದು ಹವಾಮಾನ ಬದಲಾವಣೆಯ ಕುರಿತು ಜನರಿಗೆ ಮಾಹಿತಿ ನೀಡುವ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮಿದೆ ಎಂದರು.
ವಿಶ್ವಗುರು ಬಸವಣ್ಣ ಜೈವಿಕ ಉದ್ಯಾನ
ಬೆಂಗಳೂರು ನಗರದ ಹಸಿರು ಇತಿಹಾಸದಲ್ಲಿ ಮುಂದಿನ ತಿಂಗಳು ಒಂದು ದೊಡ್ಡ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದಪ್ಪನಹಳ್ಳಿಯಲ್ಲಿ 153 ಎಕರೆ ವಿಸ್ತೀರ್ಣದಲ್ಲಿ 'ವಿಶ್ವಗುರು ಬೃಹತ್ ಜೈವಿಕ ಉದ್ಯಾನ' ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಇದು ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರ ಬೆಂಗಳೂರಿನ ಅತಿ ದೊಡ್ಡ ಉದ್ಯಾನವನವಾಗಲಿದೆ. ನಗರದ ಜನರಿಗೆ ಶುದ್ಧ ಗಾಳಿ ಮತ್ತು ಪ್ರವಾಸಿ ತಾಣವಾಗಿ ಇದು ಮಹತ್ವದ ಪಾತ್ರ ವಹಿಸಲಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯಾದ್ಯಂತ ಸುಮಾರು 11 ಕೋಟಿ ಸಸಿಗಳನ್ನು ನೆಡಲಾಗಿದೆ. ಸಾರ್ವಜನಿಕರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ನೆಟ್ಟ ಸಸಿಗಳಲ್ಲಿ ಎಷ್ಟು ಬದುಕುಳಿದಿವೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದು ಅರಣ್ಯ ಇಲಾಖೆಯ ಹೊಣೆಗಾರಿಕೆಯನ್ನು ಸಾಬೀತುಪಡಿಸುತ್ತದೆ ಎಂದರು.

