ಅರಣ್ಯ ಇಲಾಖೆಯಿಂದ ಬಂಡೀಪುರ, ನಾಗರಹೊಳೆ ಸಫಾರಿ ಶುಲ್ಕ ಹೆಚ್ಚಳ
x

ಅರಣ್ಯ ಇಲಾಖೆಯಿಂದ ಬಂಡೀಪುರ, ನಾಗರಹೊಳೆ ಸಫಾರಿ ಶುಲ್ಕ ಹೆಚ್ಚಳ

ಇಂಧನ ಬೆಲೆ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಫಾರಿ, ಖಾಸಗಿ ವಾಹನಗಳ ಪ್ರವೇಶ ಹಾಗೂ ಕ್ಯಾಮೆರಾ ಶುಲ್ಕ ಪರಿಷ್ಕರಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಸೆಪ್ಟೆಂಬರ್ 1ರಿಂದ ಹೊಸ ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ.


ಕರ್ನಾಟಕದ ಪ್ರಸಿದ್ಧ ವನ್ಯಜೀವಿ ಪ್ರವಾಸಿ ತಾಣಗಳಾದ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗಾಗಿ ಬರುವ ಪ್ರವಾಸಿಗರ ಜೇಬಿಗೆ ಇನ್ನು ಮುಂದೆ ಕತ್ತರಿ ಬೀಳಲಿದೆ. ಇಂಧನ ಬೆಲೆ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಫಾರಿ, ಖಾಸಗಿ ವಾಹನಗಳ ಪ್ರವೇಶ ಹಾಗೂ ಕ್ಯಾಮೆರಾ ಶುಲ್ಕ ಪರಿಷ್ಕರಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಸೆಪ್ಟೆಂಬರ್ 1ರಿಂದ ಹೊಸ ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ.

2023 ಏ.9 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ಹಾಗೂ ನಾಗರಹೊಳೆಗೆ ಭೇಟಿ ನೀಡಿ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ 2 ಗಂಟೆಗಳ ಕಾಲ ಸಫಾರಿ ನಡೆಸಿದ್ದರು. ಅಂದಿನಿಂದ ದೇಶ-ವಿದೇಶಗಳಿಂದ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ, ಅರಣ್ಯ ಇಲಾಖೆಯ ಈ ನಿರ್ಧಾರವು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಪ್ರವಾಸಿಗರಿಗೆ ತುಸು ಹೊರೆಯಾಗಲಿದೆ. ಅರಣ್ಯ ಇಲಾಖೆಯ ಬಸ್ ಸಫಾರಿ ಶುಲ್ಕ ವಯಸ್ಕರಿಗೆ 650 ರಿಂದ 1ಸಾವಿರ, 12 ವರ್ಷದೊಳಗಿನ ಮಕ್ಕಳಿಗೆ 350 ರಿಂದ 500 ಕ್ಕೆ ಹೆಚ್ಚಳ ಮಾಡಲಾಗುತ್ತಿದೆ.

ಅರಣ್ಯ ಇಲಾಖೆ ಜೀಪ್ ಸಫಾರಿಗಾಗಿ ವಯಸ್ಕರಿಗೆ 750/1,100 ರಿಂದ 1,500, ಮಕ್ಕಳಿಗೆ 750 ರೂ. ನಿಗದಿ ಮಾಡಲಾಗಿದೆ. ಕ್ಯಾಮೆರಾ ಬಳಕೆಯ ಮೇಲಿನ ಶುಲ್ಕವನ್ನೂ ಹೆಚ್ಚಿಸಲಾಗಿದೆ. 200 ಎಂಎಂ ವರೆಗಿನ ಲೆನ್ಸ್‌ಗೆ ಉಚಿತ ಪ್ರವೇಶವಿದೆ.

200 ಎಂಎಂಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗೆ 1,500 ರೂ. ಹಾಗೂ ಶೇ 18 ಜಿಎಸ್‌ಟಿ ಸೇರಿ ಒಟ್ಟು 1,770 ರೂ. ನಿಗದಿಪಡಿಸಲಾಗಿದೆ. ಖಾಸಗಿ ವಾಹನಗಳ ಪ್ರವೇಶ ಶುಲ್ಕಕ್ಕೂ ಶೇ 18 ರಷ್ಟು ಪ್ರತ್ಯೇಕ ಜಿಎಸ್‌ಟಿ ಹಾಕಲಾಗಿದೆ. ವನ್ಯಧಾಮ ಪ್ರವೇಶಿಸುವ ಖಾಸಗಿ ಕಾರುಗಳಿಗೆ 100 ರೂ. ಹಾಗೂ ಶೇ 18 ಜಿಎಸ್‌ಟಿ, ಲಘು ವಾಣಿಜ್ಯ ವಾಹನಗಳಿಗೆ 200 ರೂ. ಹಾಗೂ ಶೇ 18 ಜಿಎಸ್‌ಟಿ, ಬಸ್‌ಗಳಿಗೆ 300 ರೂ ಹಾಗೂ ಶೇ 18 ಜಿಎಸ್‌ಟಿ ನಿಗದಿಪಡಿಸಲಾಗಿದೆ.

ಅನುಮತಿ ಪಡೆದ ನಿರ್ದಿಷ್ಟ ಪ್ರದೇಶಗಳಲ್ಲಿ ಸ್ವಂತ ವಾಹನ ಅಥವಾ ಬೋಟ್ ಬಳಸುವ ವಯಸ್ಕರಿಗೆ 600 ರೂ, ಮಕ್ಕಳಿಗೆ 300 ರೂ. ದರ ನಿಗದಿ ಮಾಡಲಾಗಿದೆ. ಖಾಸಗಿ ಜೀಪ್ ಪ್ರವೇಶ ಶುಲ್ಕವನ್ನು 2,500 ರೂ.ಹಾಗೂ ಬೋಟ್ ಶುಲ್ಕವನ್ನು ತಲಾ 3,500ಗಳಿಗೆ ಏರಿಕೆ ಮಾಡಲಾಗಿದೆ.

ಪರಿಸರ ಪ್ರಿಯರ ಆಕ್ರೋಶ

ಅರಣ್ಯ ಪ್ರವಾಸೋದ್ಯಮದ ಗುಣಮಟ್ಟ ಸುಧಾರಿಸಲು ಮತ್ತು ನಿರ್ವಹಣೆಯನ್ನು ಉತ್ತಮಗೊಳಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ಪರಿಸರಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

"ಈ ರೀತಿಯ ಏಕಾಏಕಿ ಭಾರಿ ದರ ಏರಿಕೆಯಿಂದಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ವನ್ಯಜೀವಿಗಳನ್ನು ಕಣ್ಣುಂಬಿಕೊಳ್ಳುವ ಅವಕಾಶದಿಂದ ವಂಚಿತರಾಗಲಿವೆ. ಇದು ಸಫಾರಿಯನ್ನು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತಗೊಳಿಸುವ ಯತ್ನ" ಎಂದು ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Read More
Next Story