ಬಂಡೀಪುರ ಫಾರ್ಮ್‌ಹೌಸ್‌ ಮೇಲೆ ಅರಣ್ಯ ಇಲಾಖೆ ದಾಳಿ: ಶಸ್ತ್ರಾಸ್ತ್ರ, ವನ್ಯಜೀವಿ ಟ್ರೋಫಿ ಜಪ್ತಿ
x

ಬಂಡೀಪುರ ಫಾರ್ಮ್‌ಹೌಸ್‌ ಮೇಲೆ ಅರಣ್ಯ ಇಲಾಖೆ ದಾಳಿ: ಶಸ್ತ್ರಾಸ್ತ್ರ, ವನ್ಯಜೀವಿ ಟ್ರೋಫಿ ಜಪ್ತಿ

ಕಾರ್ಯಾಚರಣೆ ವೇಳೆ 48 ಜಿಂಕೆ ಹಾಗೂ ಸಾಂಬಾರ್ ಜಿಂಕೆ ಕೊಂಬುಗಳು, ಜಿಂಕೆಯ ತಲೆಬುರುಡೆ, ಕಾಡುಪ್ರಾಣಿಗಳ ಚರ್ಮ, 120 ನವಿಲು ಗರಿಗಳು ಹಾಗೂ ಆನೆ ದಂತದಿಂದ ತಯಾರಿಸಿದ ಚೈನೀಸ್ ಚಾಪ್‌ಸ್ಟಿಕ್‌ಗಳು ದೊರೆತಿವೆ.


ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಕೆಬ್ಬೆಪುರ ಗ್ರಾಮದ ಫಾರ್ಮ್‌ಹೌಸ್ಮೇ ಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಅಪಾರ ಪ್ರಮಾಣದ ವನ್ಯಜೀವಿ ಟ್ರೋಫಿ (ಹಂಟಿಂಗ್‌ ಟ್ರೋಫಿ) ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ವನ್ಯಮೃಗಗಳ ಅಂಗಾಂಗಗಳು ಹಾಗೂ ಮಾರಕ ಆಯುಧಗಳನ್ನು ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಮಂಗಳವಾರ ಸಂಜೆ ದಿಢೀರ್ ಕಾರ್ಯಾಚರಣೆ ನಡೆಸಿದೆ.

ಕಾರ್ಯಾಚರಣೆ ವೇಳೆ 48 ಜಿಂಕೆ ಹಾಗೂ ಸಾಂಬಾರ್ ಜಿಂಕೆ ಕೊಂಬುಗಳು, ಜಿಂಕೆಯ ತಲೆಬುರುಡೆ, ಕಾಡುಪ್ರಾಣಿಗಳ ಚರ್ಮ, 120 ನವಿಲು ಗರಿಗಳು ಹಾಗೂ ಆನೆ ದಂತದಿಂದ ತಯಾರಿಸಿದ ಚೈನೀಸ್ ಚಾಪ್‌ಸ್ಟಿಕ್‌ಗಳು ದೊರೆತಿವೆ. ಸ್ವಿಟ್ಜರ್ಲೆಂಡ್ ಹಾಗೂ ತೈವಾನ್ ತಯಾರಿತ ವಿದೇಶಿ ಬಂದೂಕುಗಳು, ರಿವಾಲ್ವರ್, ಏರ್ ಪಿಸ್ತೂಲ್, ರೈಫಲ್ ಮತ್ತು ಕುಡುಗೋಲು (ಖುಕ್ರಿ), 62 ಜೀವಂತ ಬುಲೆಟ್‌ಗಳು ಹಾಗೂ 7 ಖಾಲಿ ರೌಂಡ್ಸ್‌ಗಳು ಸಿಕ್ಕಿವೆ.

ಮೇಲ್ವಿಚಾರಕನ ಬಂಧನ

ದಾಳಿಯ ವೇಳೆ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ದಾಸ್ತಾನು ಪತ್ತೆಯಾದ ಹಿನ್ನೆಲೆಯಲ್ಲಿ ಮೇಲ್ವಿಚಾರಕ ಸುರೇಶ್ ಪರಿಯಾರ್ ಎಂಬುವರನ್ನು ಅರಣ್ಯಾಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಕುಂದುಕೆರೆ ವನ್ಯಜೀವಿ ವಲಯದಲ್ಲಿ ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ವಿವಿಧ ನಿಯಮಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಡೀಪುರ ಸಂರಕ್ಷಿತ ಅರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಇಷ್ಟೊಂದು ಪ್ರಮಾಣದ ಅಕ್ರಮ ಆಯುಧ ಮತ್ತು ವನ್ಯಮೃಗಗಳ ಚರ್ಮ ಪತ್ತೆಯಾಗಿರುವುದು ಗಂಭೀರ ವಿಚಾರವಾಗಿದ್ದು, ಈ ಜಾಲದ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಆದೇಶಿಸಿದ್ದಾರೆ.

Read More
Next Story