
ಬಳ್ಳಾರಿ ಎಪಿಎಂಸಿಯಲ್ಲಿ ಭಾರಿ ಅಕ್ರಮ ಬಹಿರಂಗ: 11 ಕೋಟಿ ರಾಜಸ್ವಕ್ಕೆ ಕನ್ನ?
ಎಪಿಎಂಸಿಯ ಹಲವು ಮಳಿಗೆಗಳು ವರ್ಷಗಳಿಂದ ಖಾಲಿ ಉಳಿದಿರುವುದನ್ನು ತನಿಖಾ ಸಮಿತಿ ಗುರುತಿಸಿದೆ. ಈ ಸಾಲು ಸಾಲು ಉಲ್ಲಂಘನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಎಪಿಎಂಸಿ ಕಾರ್ಯದರ್ಶಿಯ ಕರ್ತವ್ಯ ಲೋಪದ ವಿರುದ್ಧ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬಳ್ಳಾರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳು ಹಾಗೂ ಭ್ರಷ್ಟಾಚಾರದ ಪ್ರಕರಣಗಳು ಇದೀಗ ತನಿಖೆಯಿಂದ ದೃಢಪಟ್ಟಿವೆ. ವ್ಯಾಪಕ ನಿಯಮ ಉಲ್ಲಂಘನೆ, ನಿವೇಶನ ಮತ್ತು ಮಳಿಗೆಗಳ ಅಕ್ರಮ ಹಸ್ತಾಂತರದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವುದು ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ. ನೇತೃತ್ವದ ತನಿಖಾ ತಂಡದ ವರದಿಯಿಂದ ಬಹಿರಂಗವಾಗಿದೆ.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಸೂಚನೆಯಂತೆ ಸ್ಥಳ ಪರಿಶೀಲನೆ ನಡೆಸಿದ ವಿಶೇಷ ತನಿಖಾ ತಂಡವು ಸುದೀರ್ಘ ವರದಿ ಸಲ್ಲಿಸಿದ್ದು, ಎಪಿಎಂಸಿಯ ಅಕ್ರಮಗಳನ್ನು ಬಯಲು ಮಾಡಿದೆ. ಬೊಕ್ಕಸಕ್ಕೆ ಸುಮಾರು 10 ರಿಂದ 11 ಕೋಟಿಯಷ್ಟು ನಷ್ಟವಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದ್ದು, ತೀವ್ರ ಸಂಚಲನ ಮೂಡಿಸಿದೆ.
ಕೃಷಿ ಮಳಿಗೆಗಳಲ್ಲಿ ಜೀನ್ಸ್, ಕೂಲ್ ಡ್ರಿಂಕ್ಸ್ ಕಾರುಬಾರು
ಕೃಷಿ ಉತ್ಪನ್ನಗಳ ಮಾರಾಟ ಮತ್ತು ರೈತರ ಹಿತರಕ್ಷಣೆಗಾಗಿ ನೀಡಿದ್ದ ಮಳಿಗೆಗಳಲ್ಲಿ ಕೃಷಿಯೇತರ ವ್ಯವಹಾರಗಳು ನಡೆಯುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎಪಿಎಂಸಿ ಮಳಿಗೆಗಳಲ್ಲಿ ಟೈಲರಿಂಗ್ ಮತ್ತು ಜೀನ್ಸ್ ಬಟ್ಟೆ ತಯಾರಿಕೆ, ಕಿರಾಣಿ ಅಂಗಡಿಗಳು ಹಾಗೂ ಕೂಲ್ ಡ್ರಿಂಕ್ಸ್ ಸೆಂಟರ್ಗಳು, ಆಟೋಮೊಬೈಲ್ ಬಿಡಿಭಾಗಗಳ ಮಾರಾಟ ನಡೆಯುತ್ತಿತ್ತು.
ಮಳಿಗೆಗಳನ್ನು ನಿಯಮಬಾಹಿರವಾಗಿ ಬೇರೆಯವರಿಗೆ ಬಾಡಿಗೆ ಮತ್ತು ಭೋಗ್ಯಕ್ಕೆ ನೀಡಲಾಗಿತ್ತು. ಹಲವು ಮಳಿಗೆಗಳು ವರ್ಷಗಳಿಂದ ಖಾಲಿ ಉಳಿದಿರುವುದನ್ನು ತನಿಖಾ ಸಮಿತಿ ಗುರುತಿಸಿದೆ. ಈ ಸಾಲು ಸಾಲು ಉಲ್ಲಂಘನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಎಪಿಎಂಸಿ ಕಾರ್ಯದರ್ಶಿಯ ಕರ್ತವ್ಯ ಲೋಪದ ವಿರುದ್ಧ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪೆಟ್ರೋಲ್ ಬಂಕ್ ಜಾಗ ಹಂಚಿಕೆಯಲ್ಲೂ ಅಕ್ರಮ
ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿಗೆ ಸೇರಿದ ಜಾಗದಲ್ಲಿ ಪೆಟ್ರೋಲ್ ಬಂಕ್ಗಾಗಿ 15 ಸಾವಿರ ಚದರ ಅಡಿ ಹಂಚಿಕೆ ಮಾಡಿರುವ ಪ್ರಕ್ರಿಯೆಯಲ್ಲೂ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ವರದಿ ಬೊಟ್ಟು ಮಾಡಿದೆ.
ಪ್ರಸ್ತುತ ಚಾಲ್ತಿ ದರ ಅಥವಾ ಸರ್ಕಾರಿ ಮಾರ್ಗಸೂಚಿ ದರದ ಆಧಾರದ ಮೇಲೆ ಮುಕ್ತ ಹರಾಜು ನಡೆಸಬೇಕಿತ್ತು. ಆದರೆ, ಎಪಿಎಂಸಿ ಸಮಿತಿಯು ನಿಯಮಗಳನ್ನು ಗಾಳಿಗೆ ತೂರಿ ಕೇವಲ ಚದರ ಅಡಿಗೆ 800 ದರದಲ್ಲಿ ಜಾಗವನ್ನು ಹಂಚಿಕೆ ಮಾಡಿದೆ. ಸರ್ಕಾರಿ ಮಾರ್ಗಸೂಚಿ ದರದಂತೆ ಲೆಕ್ಕ ಹಾಕಿದರೂ ಸರ್ಕಾರಕ್ಕೆ 7.50 ಕೋಟಿ ನಷ್ಟ ಸಂಭವಿಸಿದೆ. ಇನ್ನು ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಪರಿಗಣಿಸಿದರೆ 10 ರಿಂದ 11 ಕೋಟಿ ರೂಪಾಯಿಯಷ್ಟು ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಸಮಿತಿ ಅಂದಾಜಿಸಿದೆ.
ತನಿಖಾ ಸಮಿತಿಯ ಶಿಫಾರಸುಗಳೇನು?
ಪೆಟ್ರೋಲ್ ಬಂಕ್ಗೆ ಸಂಬಂಧಿಸಿದ ಟೆಂಡರ್ ಅನ್ನು ತಕ್ಷಣವೇ ರದ್ದುಗೊಳಿಸಿ, ಹೊಸದಾಗಿ ಮರು ಟೆಂಡರ್ ಕರೆಯಬೇಕು.
ಜುಲೈ 3 ಮತ್ತು ಜುಲೈ 6ರಂದು ಹೊರಡಿಸಿದ ಹೊಸ ಟೆಂಡರ್ ಪ್ರಕ್ರಿಯೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
ನಿಯಮಬಾಹಿರವಾಗಿ ಮಾಡಿರುವ ಎಲ್ಲಾ ಮಳಿಗೆ ಹಾಗೂ ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಬೇಕು.
ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಬೇಕು.
ವರದಿ ಆಧರಿಸಿ ಕ್ರಮದ ಎಚ್ಚರಿಕೆ
ಉಪ ವಿಭಾಗಾಧಿಕಾರಿಗಳ ನೇತೃತ್ವದ ತನಿಖಾ ತಂಡವು ಸುದೀರ್ಘ ವರದಿ ಸಲ್ಲಿಸಿದೆ. ವರದಿಯಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಈ ವರದಿಯನ್ನು ತಕ್ಷಣವೇ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದರು.

