
ಬಳ್ಳಾರಿಯಲ್ಲಿ ಮಾಜಿ ಸಚಿವರ ಕಾಂಪೌಂಡ್ ಧ್ವಂಸ, ಟ್ರಸ್ಟ್‌ಗೆ ನೀಡಿದ್ದ ಜಮೀನು ವಶ
ಮಾಜಿ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ್ದು ಎನ್ನಲಾದ ಜಾಗದಲ್ಲಿ ಸಾರ್ವಜನಿಕ ರಸ್ತೆ ಸೇರಿ ಅತಿಕ್ರಮಣಗೊಂಡಿದ್ದ ಸೇರಿ 4 ಎಕರೆ ಸರ್ಕಾರಿ ಜಮೀನನ್ನು ಬಳ್ಳಾರಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.
ಬಳ್ಳಾರಿಯಲ್ಲಿ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿ, ಕೆರೆ, ಗೋಮಾಳ ಹಾಗೂ ಸಾರ್ವಜನಿಕ ರಸ್ತೆಗಳನ್ನು ಕಬಳಿಸಿರುವ ಭೂಗಳ್ಳರು ಮತ್ತು ಪ್ರಭಾವಿಗಳಿಗೆ ಜಿಲ್ಲಾಡಳಿತ ಶಾಕ್ ನೀಡಿದೆ. ರಾಜಕೀಯ ಪ್ರಭಾವ, ಹಣಬಲಕ್ಕೆ ಮಣಿಯದೆ ಅಕ್ರಮ ಒತ್ತುವರಿಗಳ ವಿರುದ್ಧ ಸಮರ ಸಾರಿರುವ ಜಿಲ್ಲಾಡಳಿತ, ಪೊಲೀಸ್ ಸರ್ಪಗಾವಲಿನಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಯಂತ್ರಗಳೊಂದಿಗೆ ಏಕಾಏಕಿ ದಾಳಿ ನಡೆಸಿ ಬೃಹತ್ ತೆರವು ಕಾರ್ಯಾಚರಣೆ ನಡೆಸಿದೆ.
ಮಾಜಿ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ್ದು ಎನ್ನಲಾದ ಜಾಗದಲ್ಲಿ ಸಾರ್ವಜನಿಕ ರಸ್ತೆ ಸೇರಿ ಅತಿಕ್ರಮಣಗೊಂಡಿದ್ದ ಭೂಮಿ ಹಾಗೂ ನಿಯಮ ಉಲ್ಲಂಘಿಸಿದ ಟ್ರಸ್ಟ್‌ಗೆ ನೀಡಲಾಗಿದ್ದ ಭೂಮಿ ಸೇರಿದಂತೆ ಒಟ್ಟಾರೆ ಒಂದೇ ಸರ್ವೆ ನಂಬರ್ ವ್ಯಾಪ್ತಿಯಲ್ಲಿದ್ದ ಬರೋಬ್ಬರಿ 4 ಎಕರೆ ಮೌಲ್ಯಯುತ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ಯಶಸ್ವಿಯಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ.
ಸೋಮವಾರ ಬೆಳಗ್ಗೆ ಬಳ್ಳಾರಿ ನಗರದ ಸರ್ವೆ ನಂಬರ್ 607/1ಎ 1ಎ ವ್ಯಾಪ್ತಿಯ ಪ್ರದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ನಗರಸಭೆ, ಪಾಲಿಕೆ ಸಿಬ್ಬಂದಿ, ಬೃಹತ್ ಜೆಸಿಬಿ ಯಂತ್ರಗಳು ಹಾಗೂ ಸಶಸ್ತ್ರ ಪೊಲೀಸ್ ಪಡೆಗಳೊಂದಿಗೆ ದಿಢೀರ್ ಲಗ್ಗೆ ಇಟ್ಟರು. ಯಾವುದೇ ಪ್ರತಿಭಟನೆ, ರಾಜಕೀಯ ಹಸ್ತಕ್ಷೇಪ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಇಡೀ ಪ್ರದೇಶವನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಸುತ್ತುವರಿದರು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗಡಿ ಗುರುತುಗಳನ್ನು ದೃಢಪಡಿಸಿಕೊಂಡ ತಕ್ಷಣವೇ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದರು. ಕ್ಷಣಾರ್ಧದಲ್ಲಿ ಜೆಸಿಬಿಗಳು ಕಾರ್ಯಪ್ರವೃತ್ತವಾಗಿ, ಕಾನೂನುಬಾಹಿರವಾಗಿ ನಿರ್ಮಿಸಲಾಗಿದ್ದ ಎತ್ತರದ ಕಾಂಪೌಂಡ್ ಗೋಡೆಗಳು, ಗೇಟ್‌ಗಳು ಮತ್ತು ತಾತ್ಕಾಲಿಕ ಶೆಡ್ಡುಗಳನ್ನು ನೆಲಸಮ ಮಾಡಿದವು.
ಮಾಜಿ ಸಚಿವರ ಕಾಂಪೌಂಡ್ ಧ್ವಂಸ
ಈ ಕಾರ್ಯಾಚರಣೆಯ ಪ್ರಮುಖ ಆಕರ್ಷಣೆ ಹಾಗೂ ಮಹತ್ವದ ತಿರುವು ಎಂದರೆ, ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ ಜಮೀನು ಎನ್ನಲಾದ ಜಾಗದಲ್ಲಿ ನಡೆದ ತೆರವು ಇದಾಗಿದೆ. ಸರ್ವೆ ನಂಬರ್ 607/1ಎ 1ಎ ವ್ಯಾಪ್ತಿಯಲ್ಲಿ ಸಾರ್ವಜನಿಕ ಓಡಾಟಕ್ಕೆ ಮೀಸಲಾಗಿದ್ದ ರಸ್ತೆ ಹಾಗೂ ಪಕ್ಕದ ಸರ್ಕಾರಿ ಜಮೀನು ಸೇರಿದಂತೆ ಸುಮಾರು 1 ಎಕರೆ 23 ಸೆಂಟ್ಸ್ ವಿಸ್ತೀರ್ಣದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸುತ್ತಲೂ ಬೃಹತ್ ಕಾಂಪೌಂಡ್ ಗೋಡೆ ನಿರ್ಮಿಸಿ ಸಾರ್ವಜನಿಕ ರಸ್ತೆಯನ್ನೇ ಬಂದ್ ಮಾಡಲಾಗಿತ್ತು. ಇದರಿಂದಾಗಿ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ವಾಹನ ಸವಾರರು ಹಲವು ವರ್ಷಗಳಿಂದ ಕಿಲೋಮೀಟರ್‌ಗಟ್ಟಲೆ ಸುತ್ತು ಬಳಸಿ ಸಂಚರಿಸಬೇಕಾದ ದುಸ್ಥಿತಿ ಇತ್ತು. ಸಾರ್ವಜನಿಕ ರಸ್ತೆ ಒತ್ತುವರಿಯಾಗಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಸರ್ವೇಯರ್‌ಗಳು ನಡೆಸಿದ ನಿಖರ ಅಳತೆಯಲ್ಲಿ ಒತ್ತುವರಿ ಸಾಬೀತಾಗಿತ್ತು. ನೋಟಿಸ್ ಪ್ರಕ್ರಿಯೆಗಳ ಬಳಿಕ, ಸೋಮವಾರ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಕಾಂಪೌಂಡ್ ಗೋಡೆಯನ್ನು ಸಂಪೂರ್ಣವಾಗಿ ಕೆಡವಿ, ಸಾರ್ವಜನಿಕ ರಸ್ತೆಯನ್ನು ಸಾರ್ವಜನಿಕರ ಮುಕ್ತ ಬಳಕೆಗೆ ಮರುಸ್ಥಾಪಿಸಿದರು.
ಇದೇ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಮಹತ್ವದ ಕಾನೂನು ಕ್ರಮವೆಂದರೆ, ಸರ್ಕಾರಿ ಜಮೀನನ್ನು ಮರಳಿ ಪಡೆದದ್ದು. ಸುಮಾರು 14 ವರ್ಷಗಳ ಹಿಂದೆ ಹಿಂದುಳಿದ ವರ್ಗದ ಹಾಗೂ ಬೌದ್ಧಿಕ ಅಸ್ವಸ್ಥತೆ ಹೊಂದಿರುವ ವಿಶೇಷ ಮಕ್ಕಳ ಪುನರ್ವಸತಿ, ಚಿಕಿತ್ಸೆ ಮತ್ತು ಕಲ್ಯಾಣ ಕಾರ್ಯಗಳಿಗಾಗಿ 'ಆರೋಗ್ಯ ನಿಕೇತನ ಟ್ರಸ್ಟ್'ಗೆ ಸರ್ಕಾರವು 2 ಎಕರೆ 77 ಸೆಂಟ್ಸ್ ಜಮೀನನ್ನು ಅತ್ಯಂತ ರಿಯಾಯಿತಿ ದರದಲ್ಲಿ ಮಂಜೂರು ಮಾಡಿತ್ತು.
ಆದರೆ, ಕರ್ನಾಟಕ ಭೂಕಂದಾಯ ಕಾಯ್ದೆ ಹಾಗೂ ಜಮೀನು ಮಂಜೂರಾತಿ ನಿಯಮಾವಳಿಗಳ ಪ್ರಕಾರ, ಯಾವುದೇ ಸಾಮಾಜಿಕ ಸಂಸ್ಥೆ ಅಥವಾ ಟ್ರಸ್ಟ್‌ಗೆ ಜಮೀನು ಮಂಜೂರಾದ ದಿನಾಂಕದಿಂದ ಗರಿಷ್ಠ ಎರಡು ವರ್ಷಗಳ ಒಳಗಾಗಿ ಉದ್ದೇಶಿತ ಯೋಜನೆ ಕಾರ್ಯವನ್ನು ಪ್ರಾರಂಭಿಸಿ ಪೂರ್ಣಗೊಳಿಸಬೇಕು.
ಮಂಜೂರಾದ ಉದ್ದೇಶವನ್ನು ಬಿಟ್ಟು ಬೇರೆ ಯಾವುದೇ ವಾಣಿಜ್ಯ ಅಥವಾ ಖಾಸಗಿ ಚಟುವಟಿಕೆಗಳಿಗೆ ಜಾಗ ಬಳಸುವಂತಿಲ್ಲ ಮತ್ತು ಖಾಲಿ ಬಿಡುವಂತಿಲ್ಲ. ಆದರೆ, ಆರೋಗ್ಯ ನಿಕೇತನ ಟ್ರಸ್ಟ್ ಜಮೀನು ಪಡೆದು 14 ವರ್ಷಗಳು ಕಳೆದರೂ ವಿಶೇಷ ಮಕ್ಕಳ ಕಲ್ಯಾಣಕ್ಕಾಗಿ ಯಾವುದೇ ಕಟ್ಟಡವನ್ನಾಗಲಿ, ಸಂಸ್ಥೆಯನ್ನಾಗಲಿ ಸ್ಥಾಪಿಸಿರಲಿಲ್ಲ. ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಯಾವುದೇ ಅಭಿವೃದ್ಧಿ ಮಾಡದೆ ಪಾಳು ಬಿಡಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಡಳಿತ, ಟ್ರಸ್ಟ್‌ಗೆ ಷೋಕಾಸ್ ನೋಟಿಸ್ ಜಾರಿ ಮಾಡಿತ್ತು. ಟ್ರಸ್ಟ್‌ನಿಂದ ಸಮಾಧಾನಕರ ಉತ್ತರ ಬಾರದ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘನೆಯ ಆಧಾರದ ಮೇಲೆ ಕಾನೂನುಬದ್ಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸದರಿ 2 ಎಕರೆ 77 ಸೆಂಟ್ಸ್ ಜಮೀನಿನ ಮಂಜೂರಾತಿಯನ್ನು ರದ್ದುಗೊಳಿಸಿ, ಸಂಪೂರ್ಣ ಜಾಗವನ್ನು ಪುನಃ ಸರ್ಕಾರದ ಸುಪರ್ದಿಗೆ ಪಡೆಯಲಾಯಿತು.
ಒಟ್ಟು 4 ಎಕರೆ ಜಮೀನು ವಶಕ್ಕೆ
ಈ ಒಂದೇ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ತೆರವುಗೊಳಿಸಲಾದ 1 ಎಕರೆ 23 ಸೆಂಟ್ಸ್ ಹಾಗೂ ಮಂಜೂರಾತಿ ರದ್ದುಪಡಿಸಲಾದ 2 ಎಕರೆ 77 ಸೆಂಟ್ಸ್ ಸೇರಿ ಒಟ್ಟು 4 ಎಕರೆ ಜಮೀನನ್ನು ಸಂಪೂರ್ಣವಾಗಿ ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ನಗರದ ಪ್ರಮುಖ ರಸ್ತೆ ಸಂಪರ್ಕ ಹೊಂದಿರುವ ಈ ಜಾಗಕ್ಕೆ ಪ್ರಸ್ತುತ ಮುಕ್ತ ಮಾರುಕಟ್ಟೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಬೆಲೆಯಿದೆ ಎಂದು ಅಂದಾಜಿಸಲಾಗಿದೆ. ಭೂಮಿಯನ್ನು ವಶಕ್ಕೆ ಪಡೆದ ತಕ್ಷಣವೇ ಕಂದಾಯ ಅಧಿಕಾರಿಗಳು ಸ್ಥಳದಲ್ಲಿ "ಈ ಜಮೀನು ಸರ್ಕಾರಕ್ಕೆ ಸೇರಿದ್ದು, ಅತಿಕ್ರಮಣ ಪ್ರವೇಶ ನಿಷೇಧಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು" ಎಂಬ ಎಚ್ಚರಿಕೆಯ ಅಧಿಕೃತ ನಾಮಫಲಕವನ್ನು ನೆಟ್ಟಿದ್ದಾರೆ.
ಸ್ಥಳದಲ್ಲೇ ಹಾಜರಿದ್ದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಮಾಧ್ಯಮಗಳಿಗೆ ಸಮಗ್ರ ಮಾಹಿತಿ ನೀಡಿದರು. "ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿ, ಕೆರೆ, ಗೋಮಾಳ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ 'ಟಾಸ್ಕ್‌ಫೋರ್ಸ್' ರಚಿಸಲಾಗಿದೆ. ಈ ಟಾಸ್ಕ್‌ಫೋರ್ಸ್ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ಸುಮಾರು 150 ಎಕರೆ ಅತ್ಯಂತ ಮೌಲ್ಯಯುತ ಒತ್ತುವರಿ ಜಮೀನನ್ನು ತೆರವುಗೊಳಿಸಲಾಗಿದೆ. ಇನ್ನು ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈವರೆಗೆ ಹಂತ ಹಂತವಾಗಿ ಸುಮಾರು 700 ಎಕರೆ ಪ್ರದೇಶದ ಸರ್ಕಾರಿ ಜಮೀನನ್ನು ಒತ್ತುವರಿದಾರರಿಂದ ಮುಕ್ತಗೊಳಿಸಲಾಗಿದೆ," ಎಂದು ಅವರು ವಿವರಿಸಿದರು.

