
ಬಿಜೆಪಿ ಪಾದಯಾತ್ರೆ: ಸಮಾರೋಪಕ್ಕೆ ಕೊನೆಗೂ ಜಿಲ್ಲಾಡಳಿತದಿಂದ ಅನುಮತಿ
ವಿಜಯೇಂದ್ರ ನೇತೃತ್ವದ ಪಾದಯಾತ್ರೆಯು ಸೆ.10 ರಂದು ಬಳ್ಳಾರಿಗೆ ತಲುಪಲಿದ್ದು, ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಬೃಹತ್ ಸಮಾರೋಪ ಸಮಾವೇಶ ನಡೆಸಲು ಬಿಜೆಪಿ ಪೂರ್ವತಯಾರಿ ಮಾಡಿಕೊಂಡಿತ್ತು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ 'ಬಳ್ಳಾರಿ ಚಲೋ' ಪಾದಯಾತ್ರೆಯ ಬೃಹತ್ ಸಮಾರೋಪ ಸಮಾವೇಶಕ್ಕೆ ಕೊನೆಗೂ ಜಿಲ್ಲಾಡಳಿತ ಅನುಮತಿ ನೀಡಿದೆ. ಸ್ಥಳದ ಗೊಂದಲ ಕುರಿತಂತೆ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಅನುಮತಿ ನಿರಾಕರಿಸಿತ್ತು.
ಈಗ ನಗರದ ಐತಿಹಾಸಿಕ ಎಕ್ಸ್ ಮುನ್ಸಿಪಲ್ ಶಾಲಾ ಮೈದಾನದಲ್ಲಿ ಸಮಾವೇಶ ನಡೆಸಲು ಜಿಲ್ಲಾಡಳಿತ ಕೊನೆಗೂ ಷರತ್ತುಬದ್ಧ ಅನುಮತಿ ನೀಡಿದೆ. ಬಿಜೆಪಿ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಜಾಗ ನೀಡಲು ನಿರಾಕರಿಸಿದ್ದರಿಂದ ವಿಪಕ್ಷ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಷರತ್ತುಬದ್ಧ ಅನುಮತಿ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು.
ವಿಜಯೇಂದ್ರ ನೇತೃತ್ವದ ಪಾದಯಾತ್ರೆಯು ಸೆ.10 ರಂದು ಬಳ್ಳಾರಿಗೆ ತಲುಪಲಿದ್ದು, ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಬೃಹತ್ ಸಮಾರೋಪ ಸಮಾವೇಶ ನಡೆಸಲು ಬಿಜೆಪಿ ಪೂರ್ವತಯಾರಿ ಮಾಡಿಕೊಂಡಿತ್ತು. ಆದರೆ, ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯು ಕಳೆದ ಒಂದು ವಾರದಿಂದ ಮೈದಾನ ನೀಡಲು ನಿರಾಕರಿಸಿತ್ತು.
"2015ರ ಸರ್ಕಾರಿ ಆದೇಶದಂತೆ ಶಿಕ್ಷಣ ಸಂಸ್ಥೆಗಳ ಮೈದಾನಗಳನ್ನು ರಾಜಕೀಯ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ನೀಡಲು ಅವಕಾಶವಿಲ್ಲ" ಎಂದು ಇಲಾಖೆ ಉಪ ನಿರ್ದೇಶಕರು ಲಿಖಿತ ಉತ್ತರ ನೀಡಿದ್ದರು.
ನಾಯಕರ ಆಕ್ರೋಶ; ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
ಇಲಾಖೆಯ ಈ ಕ್ರಮಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. "ಹಿಂದೆ ಕಾಂಗ್ರೆಸ್ನ ‘ಸಾಧನಾ ಸಮಾವೇಶ’ ಹಾಗೂ ರಾಹುಲ್ ಗಾಂಧಿ ಅವರ ಪಾದಯಾತ್ರೆಯ ಸಂದರ್ಭದಲ್ಲಿ ಇದೇ ಮೈದಾನವನ್ನು ಬಳಸಲು ಅನುಮತಿ ನೀಡಲಾಗಿತ್ತು. ಈಗ ವಿಪಕ್ಷದ ಹೋರಾಟವನ್ನು ಹತೋಟಿಗೆ ತರಲು ಸರ್ಕಾರ ರಾಜಕೀಯ ಒತ್ತಡ ಹೇರುತ್ತಿದೆ" ಎಂದು ವಿಜಯೇಂದ್ರ ಹಾಗೂ ಇತರ ನಾಯಕರು ಆರೋಪಿಸಿದ್ದರು.
ಶಾಸಕ ಜಿ. ಜನಾರ್ದನ ರೆಡ್ಡಿ ನೇತೃತ್ವದ ನಿಯೋಗವು ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿತು. ನಿಯೋಗದ ವಾದ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಹಿನ್ನೆಲೆಯಲ್ಲಿ, ಸಿಎಂ ಸೂಚನೆಯಂತೆ ಜಿಲ್ಲಾಡಳಿತವು ಪರಿಸ್ಥಿತಿಯನ್ನು ತಿಳಿಗೊಳಿಸಲು ಅನುಮತಿ ಪತ್ರ ನೀಡಿದೆ.
ಸೆಪ್ಟೆಂಬರ್ 10ಕ್ಕೆ ಸಮಾರೋಪ
ಜಿಲ್ಲಾಡಳಿತದಿಂದ ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದ್ದು, ಸೆ. 10ರಂದು ನಡೆಯುವ ಸಮಾರೋಪ ಸಮಾವೇಶಕ್ಕೆ ಸಿದ್ಧತೆ ಚುರುಕುಗೊಳಿಸಲಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

