ವಿದೇಶದಲ್ಲಿ ಹೂಡಿಕೆ ಸತ್ಯಕ್ಕೆ ದೂರ: ಬಾಲಚಂದ್ರ ಜಾರಕಿಹೊಳಿ
x

ವಿದೇಶದಲ್ಲಿ ಹೂಡಿಕೆ ಸತ್ಯಕ್ಕೆ ದೂರ: ಬಾಲಚಂದ್ರ ಜಾರಕಿಹೊಳಿ

ವಶಪಡಿಸಿಕೊಂಡಿರುವ 1.73 ಕೋಟಿ ರೂ.ಗೆ ಅಧಿಕೃತ ಲೆಕ್ಕಪತ್ರಗಳು ನಮ್ಮ ಬಳಿ ಇವೆ. ಅವುಗಳನ್ನು ಸಲ್ಲಿಸಿ ಕಾನೂನು ಬದ್ಧವಾಗಿ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತೇವೆ ಎಂದು ಬಾಲಚಂದ್ರ ತಿಳಿಸಿದರು.


Click the Play button to hear this message in audio format

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ನಡೆದಿರುವ ದಾಳಿ ಮತ್ತು ಆ ಸಂಬಂಧಿತ ವಿದೇಶಿ ಹೂಡಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೌನ ಮುರಿದಿದ್ದಾರೆ. ಗೋಕಾಕದಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಾಲಚಂದ್ರ ಜಾರಕಿಹೊಳಿ, ದಾಳಿಯ ಹಿಂದಿನ ವಾಸ್ತವಾಂಶಗಳು ಮತ್ತು ತಮ್ಮ ಕುಟುಂಬದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸತೀಶ್ ಜಾರಕಿಹೊಳಿ ವಿದೇಶದಲ್ಲಿ 770 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಬಾಲಚಂದ್ರ ಜಾರಕಿಹೊಳಿ, ವಿದೇಶದಲ್ಲಿ ಸತೀಶ್ ಅವರ ಯಾವುದೇ ಹೂಡಿಕೆ ಇಲ್ಲ. 770 ಕೋಟಿ ರೂ. ಹೂಡಿಕೆಯಾಗಿದೆ ಎಂಬ ಸುದ್ದಿಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿವೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ನಮ್ಮ ಕುಟುಂಬದ ಘನತೆಗೆ ಧಕ್ಕೆ ತರುವ ಕೆಲಸ ಮಾಡಬೇಡಿ" ಎಂದು ಕಿಡಿಕಾರಿದರು.

ದಾಳಿಯ ವೇಳೆ ಪತ್ತೆಯಾದ ಹಣದ ಲೆಕ್ಕಾಚಾರ

ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಸುಮಾರು 1.73 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಬಾಲಚಂದ್ರ ಜಾರಕಿಹೊಳಿ ಖಚಿತಪಡಿಸಿದರು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ ಅವರು, "ದಾಳಿ ನಡೆಸಿದ ಅಧಿಕಾರಿಗಳು ಎರಡು ಟ್ರಂಕ್‌ಗಳನ್ನು ತಂದಿದ್ದರು, ಅದರಲ್ಲಿ ಒಂದರಲ್ಲಿ ಮಾತ್ರ ಹಣ ಸೀಜ್ ಮಾಡಲಾಗಿದೆ. ವಶಪಡಿಸಿಕೊಂಡಿರುವ ಈ 1.73 ಕೋಟಿ ರೂ.ಗಳಿಗೆ ಸಂಬಂಧಿಸಿದ ಅಧಿಕೃತ ಲೆಕ್ಕಪತ್ರಗಳು ನಮ್ಮ ಬಳಿ ಇವೆ. ಆ ದಾಖಲೆಗಳನ್ನು ಸಲ್ಲಿಸಿ ಕಾನೂನು ಬದ್ಧವಾಗಿ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತೇವೆ" ಎಂದು ತಿಳಿಸಿದರು.

ಇದು ರಾಜಕೀಯ ಪ್ರೇರಿತವಲ್ಲ

ಈ ದಾಳಿಯು ರಾಜಕೀಯ ಪ್ರೇರಿತವಾಗಿದೆ ಎಂಬ ವ್ಯಾಪಕ ಚರ್ಚೆಗಳ ನಡುವೆಯೂ ಬಾಲಚಂದ್ರ ಜಾರಕಿಹೊಳಿ ಭಿನ್ನ ನಿಲುವನ್ನು ವ್ಯಕ್ತಪಡಿಸಿದರು. "ಇದು ಯಾವುದೇ ರಾಜಕೀಯ ದುರುದ್ದೇಶದಿಂದ ನಡೆದ ದಾಳಿಯಲ್ಲ. ಕೆಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾನೂನು ಪ್ರಕ್ರಿಯೆಯನ್ನು ನಾವು ಗೌರವಿಸುತ್ತೇವೆ. ಸತೀಶ್ ಜಾರಕಿಹೊಳಿ ಅವರು ಈ ದಾಳಿಯ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದಾರೆ" ಎಂದರು. ಇದೇ ವೇಳೆ, ದಾಳಿಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬ ವದಂತಿಯನ್ನು ಅವರು ತಳ್ಳಿಹಾಕಿದರು. ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅವರ ನಡುವೆ ಮೂರು ದಶಕಗಳ ಆಪ್ತ ಗೆಳೆತನವಿದೆ. ಈ ಅವಧಿಯಲ್ಲಿ ಅವರು ಹತ್ತು ಬಾರಿ ಜಗಳವಾಡಿಕೊಂಡು ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಸಂಬಂಧವನ್ನು ಹಾಳುಮಾಡುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದರು. "ಅವರಿಬ್ಬರೂ ಅಹಿಂದದ ಎರಡು ಕಣ್ಣುಗಳಿದ್ದಂತೆ. ಆ ಎರಡು ಕಣ್ಣುಗಳಿಗೆ ಪೆಟ್ಟು ಬಿದ್ದರೆ, ಅಹಿಂದ ಸಂಘಟನೆಗೆ ಪೆಟ್ಟು ಬೀಳುತ್ತದೆ" ಎಂದು ಹೇಳಿದರು.

ಇ.ಡಿ ದಾಳಿಯ ಹಿನ್ನೆಲೆ

ಮೇ ತಿಂಗಳಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ)ಗೆ ದೂರು ಸಲ್ಲಿಕೆಯಾಗಿತ್ತು. ಜೂನ್‌ನಲ್ಲಿ ಮಂಜುನಾಥ್ ಎಂಬುವವರ ಮನೆಯ ಮೇಲೆ ದಾಳಿಯಾಗಿತ್ತು. ಆ ದಾಳಿಯ ಮುಂದುವರಿದ ಭಾಗವಾಗಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ದಾಳಿ ನಡೆದಿದೆ. ದಾಳಿಯ ಕುರಿತು ಅಂತಿಮ ತೀರ್ಮಾನ ನ್ಯಾಯಾಲಯದ ಕೈಯಲ್ಲಿದೆ ಎಂದು ಅಭಿಪ್ರಾಯಪಟ್ಟರು. ರಾಜಕಾರಣ ಬೇರೆ, ಕುಟುಂಬದ ವಿಷಯ ಬೇರೆ. ಬಿಜೆಪಿ ಶಾಸಕನಾಗಿ ನಾನು ಇಲ್ಲಿಗೆ ಬಂದಿಲ್ಲ, ಬದಲಾಗಿ ನಮ್ಮ ಕುಟುಂಬದ ಸದಸ್ಯನಿಗೆ ಧೈರ್ಯ ತುಂಬಲು ಬಂದಿದ್ದೇನೆ. ರಾಜಕೀಯವಾಗಿ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಂದೇ ಎಂದು ಸ್ಪಷ್ಟಪಡಿಸಿದರು.

Read More
Next Story