
ಭ್ರೂಣಲಿಂಗ ಪತ್ತೆ ದಂಧೆ ಬಯಲಿಗೆ ಗರ್ಭಿಣಿ ವೇಷದಲ್ಲಿ ಎಸಿ
ಭ್ರೂಣಲಿಂಗ ಪತ್ತೆ ಜಾಲಕ್ಕೆ ಅಧಿಕಾರಿಗಳ ಮಾಸ್ಟರ್ ಪ್ಲ್ಯಾನ್.. ಗರ್ಭಿಣಿ ವೇಷದಲ್ಲಿ ಕಾರ್ಯಾಚರಣೆ
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಡಾ. ಸಂಜಯ್ ವಾಘ್ಮೋರೆ ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಭ್ರೂಣಹತ್ಯೆ ದಂಧೆಯನ್ನು ಪತ್ತೆಹಚ್ಚಲು ಬಾಗಲಕೋಟೆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ವಿಭಿನ್ನ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮಹಿಳಾ ಅಧಿಕಾರಿಗಳು ಗರ್ಭಿಣಿ, ಸಂಬಂಧಿಕರು ಹಾಗೂ ಆರೋಗ್ಯ ಸಿಬ್ಬಂದಿಯ ವೇಷದಲ್ಲಿ ತೆರಳಿ ಮಹಾರಾಷ್ಟ್ರದ ಗಡಿಭಾಗದಲ್ಲೂ ಪರಿಶೀಲನೆ ನಡೆಸಿದ್ದಾರೆ.
ಜಮಖಂಡಿ ಅಸಿಸ್ಟೆಂಟ್ ಕಮಿಷನರ್ ಶ್ವೇತಾ ಬಿಡಿಕರ್ ಗರ್ಭಿಣಿಯಂತೆ ವೇಷ ಧರಿಸಿದರೆ, ಆರೋಗ್ಯ ಸೌಧದ ಡಿಡಿ ಡಾ. ಶೋಭಾ ನಾದಿನಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಸುವರ್ಣಾ ಕುಲಕರ್ಣಿ ಕೂಡ ತಮ್ಮ ಗುರುತು ಮರೆಮಾಚಿಕೊಂಡು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಮಹಾಲಿಂಗಪುರದ ಕವಿತಾ ಎಂಬ ಮಹಿಳೆ ನೀಡಿದ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದಿ, ಕರ್ಜಗಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ತೋಟದ ಮನೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಪತ್ತೆ
ಕಾರ್ಯಾಚರಣೆಯ ವೇಳೆ ಜಾಡರ ಬಬಲಾದಿಯಲ್ಲಿರುವ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸ್ಥಳದಲ್ಲಿ ಎಂಟಿಬಿ ಔಷಧಿಗಳು ಹಾಗೂ ಎರಡು ಇಂಜೆಕ್ಷನ್ಗಳೂ ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ತೇಲಿ ಮತ್ತು ದಾನಮ್ಮ ತೇಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರೆಂದು ಹೇಳಲಾಗಿರುವ ಡಾ. ಸಂಜಯ್ ವಾಘ್ಮೋರೆ ಸದ್ಯ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಡಿಹೆಚ್ಒ ಪ್ರಕರಣವೂ ಚರ್ಚೆಗೆ
ಈ ಪ್ರಕರಣದ ಬೆನ್ನಲ್ಲೇ ಬಾಗಲಕೋಟೆಯ ಡಿಹೆಚ್ಒ ಆಗಿದ್ದ ಡಾ. ರಾಜಕುಮಾರ್ ಯರಗಲ್ ಅವರ ಪುತ್ರಿ ಅಂಕಿತಾ ಯರಗಲ್ ಅವರ ವಿಚಾರವೂ ಚರ್ಚೆಗೆ ಬಂದಿದೆ. ಅಂಕಿತಾ ಎಂಡಿ ವ್ಯಾಸಂಗ ಮಾಡುತ್ತಿದ್ದರೂ ವೈದ್ಯೆಯಾಗಿ ವೇತನ ಪಡೆಯುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಡಾ. ರಾಜಕುಮಾರ್ ಯರಗಲ್ ಮತ್ತು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಸುವರ್ಣಾ ಕುಲಕರ್ಣಿ ನಡುವೆ ಆರೋಪ-ಪ್ರತ್ಯಾರೋಪಗಳು ವ್ಯಕ್ತವಾಗಿವೆ.
ಆಸ್ಪತ್ರೆ ಮಾಲೀಕತ್ವದ ಬಗ್ಗೆ ಆರೋಪ-ಪ್ರತ್ಯಾರೋಪ
ಸುವರ್ಣಾ ಕುಲಕರ್ಣಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ ಎಂದು ಅಂಕಿತಾ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುವರ್ಣಾ, ಆಸ್ಪತ್ರೆ ತಮ್ಮ ಹೆಸರಿನಲ್ಲಿಲ್ಲ ಮತ್ತು ತಮ್ಮ ಪತಿಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದವರೆಗೂ ವಿಸ್ತರಿಸಿದ ಜಾಲ
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಿಂದ ಆರಂಭವಾದ ತನಿಖೆ ಮಹಾರಾಷ್ಟ್ರದ ಜತ್ತ ತಾಲೂಕಿನ ಹಲವು ಪ್ರದೇಶಗಳವರೆಗೆ ತಲುಪಿದೆ. ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣಹತ್ಯೆ ಕಾನೂನುಬಾಹಿರವಾಗಿದ್ದರೂ ಇಂತಹ ಚಟುವಟಿಕೆಗಳು ಗುಪ್ತವಾಗಿ ನಡೆಯುತ್ತಿರುವ ಆರೋಪಗಳ ನಡುವೆ ಅಧಿಕಾರಿಗಳ ಮಾರುವೇಷದ ಕಾರ್ಯಾಚರಣೆ ಪ್ರಕರಣದ ತನಿಖೆಗೆ ಮಹತ್ವದ ಸುಳಿವು ನೀಡಿದೆ.
ಪತ್ತೆಯಾಗಿರುವ ಸ್ಕ್ಯಾನಿಂಗ್ ಯಂತ್ರ, ಔಷಧಿಗಳು ಮತ್ತು ಇತರ ವಸ್ತುಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

