ತಂದೆಯ ದಾಖಲೆ ಮೀರಿದ ಪುತ್ರ: 21,866 ಮತಗಳ ಅಂತರದಿಂದ ಗೆದ್ದು ಬೀಗಿದ ಉಮೇಶ ಮೇಟಿ
x

ತಂದೆಯ ದಾಖಲೆ ಮೀರಿದ ಪುತ್ರ: 21,866 ಮತಗಳ ಅಂತರದಿಂದ ಗೆದ್ದು ಬೀಗಿದ ಉಮೇಶ ಮೇಟಿ

ಉಪಚುನಾವಣೆಯ ಫಲಿತಾಂಶವು 2023ರ ಫಲಿತಾಂಶಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ 97,941 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 76,075 ಮತಗಳನ್ನು ಪಡೆದುಕೊಂಡಿದ್ದಾರೆ.


Click the Play button to hear this message in audio format

ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಎಚ್.ವೈ. ಮೇಟಿ ಅಕಾಲಿಕ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಅವರ ಪುತ್ರ ಉಮೇಶ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಬದಲಾಗಿ ರಾಜ್ಯ ಸರ್ಕಾರದ ಆಡಳಿತ, ಅನುಕಂಪದ ಅಲೆ ಮತ್ತು ಚುನಾವಣಾ ತಂತ್ರಗಾರಿಕೆಯ ಸಮ್ಮಿಲನವಾಗಿದೆ. 21,866 ಮತಗಳ ಬೃಹತ್ ಅಂತರದಿಂದ ಜಯಗಳಿಸಿರುವ ಉಮೇಶ ಮೇಟಿ ಅವರು, ತಮ್ಮ ತಂದೆಗಿಂತಲೂ ಹೆಚ್ಚಿನ ಮತಗಳ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಈ ಬಾರಿಯ ಉಪಚುನಾವಣೆಯ ಫಲಿತಾಂಶವು ಕಳೆದ 2023ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ 97,941 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76,075 ಮತಗಳನ್ನು ಪಡೆದುಕೊಂಡಿದ್ದಾರೆ. 2023ರ ಚುನಾವಣೆಯಲ್ಲಿ ಎಚ್.ವೈ. ಮೇಟಿ ಅವರು ಕೇವಲ 5 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಾಂಗ್ರೆಸ್ ತನ್ನ ಗೆಲುವಿನ ಅಂತರವನ್ನು 15 ಸಾವಿರಕ್ಕೂ ಹೆಚ್ಚು ಮತಗಳಷ್ಟು ಹೆಚ್ಚಿಸಿಕೊಂಡಿರುವುದು ರಾಜಕೀಯ ವಿಶ್ಲೇಷಕರಲ್ಲಿ ಕುತೂಹಲ ಮೂಡಿಸಿದೆ. ಮತ ಎಣಿಕೆಯ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ ಉಮೇಶ ಮೇಟಿ, ಎಲ್ಲಿಯೂ ತಮ್ಮ ಎದುರಾಳಿಗೆ ಅವಕಾಶ ನೀಡದೆ ಕೊನೆಯವರೆಗೂ ಪ್ರಾಬಲ್ಯ ಮುಂದುವರಿಸಿದರು.

ಕಾಂಗ್ರೆಸ್ ಗೆಲುವಿನ ಪ್ರಮುಖ ಕಾರಣಗಳು

ಅನುಕಂಪದ ಅಲೆ

ಎಚ್.ವೈ. ಮೇಟಿ ದಶಕಗಳ ಕಾಲ ಬಾಗಲಕೋಟೆ ಭಾಗದ ಪ್ರಬಲ ನಾಯಕರಾಗಿದ್ದರು. ಅವರ ಸರಳತೆ ಮತ್ತು ಜನರೊಂದಿಗಿನ ಒಡನಾಟವು ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ತಂದುಕೊಟ್ಟಿತ್ತು. ಅವರ ನಿಧನದಿಂದ ಉಂಟಾದ ಶೂನ್ಯವನ್ನು ತುಂಬಲು ಅವರ ಮಗನಿಗೇ ಮತ ನೀಡಬೇಕು ಎಂಬ ಭಾವನೆ ಮತದಾರರಲ್ಲಿ ಬಲವಾಗಿತ್ತು. ಇದು ಉಮೇಶ ಮೇಟಿ ಅವರಿಗೆ ವರದಾನವಾಯಿತು.

ಸಿಎಂ ಸಿದ್ದರಾಮಯ್ಯ, ಸಚಿವರ ಪ್ರಚಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಮತ್ತು ಉತ್ತರ ಕರ್ನಾಟಕದ ಮೇಲೆ ವಿಶೇಷ ಮಮಕಾರವಿದೆ. ಈ ಉಪಚುನಾವಣೆಯನ್ನು ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಸಚಿವರು ಮತ್ತು ಶಾಸಕರು ಪ್ರತಿ ಹಳ್ಳಿಗಳಲ್ಲಿ ಪ್ರಚಾರ ಮಾಡುವ ಮೂಲಕ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ಪಕ್ಷದ ಸಂಘಟನೆ ಯಶಸ್ವಿಯಾಯಿತು.

'ಗ್ಯಾರಂಟಿ' ಯೋಜನೆಗಳ ಬಲ

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳು ಗ್ರಾಮೀಣ ಭಾಗದ ಮತದಾರರ ಮೇಲೆ ಭಾರಿ ಪ್ರಭಾವ ಬೀರಿವೆ. ವಿಶೇಷವಾಗಿ ಮಹಿಳಾ ಮತದಾರರು ಗೃಹಲಕ್ಷ್ಮಿ ಯೋಜನೆಯಡಿ ಪಡೆಯುತ್ತಿರುವ ಮಾಸಿಕ ಧನಸಹಾಯವು ಕಾಂಗ್ರೆಸ್ ಪರವಾಗಿ ಮತಗಳ ಧ್ರುವೀಕರಣಕ್ಕೆ ಕಾರಣವಾಯಿತು. ಬೆಲೆ ಏರಿಕೆಯ ನಡುವೆ ಈ ಯೋಜನೆಗಳು ಜನರಿಗೆ ಆಸರೆಯಾಗಿವೆ ಎಂಬ ಸಂದೇಶವು ಮತವಾಗಿ ಪರಿವರ್ತನೆಯಾಗಿದೆ. ಸಿದ್ದರಾಮಯ್ಯ ಅವರ ನಾಯಕತ್ವ ಮತ್ತು ಎಚ್.ವೈ. ಮೇಟಿ ಅವರ ಸಮುದಾಯದ ಬಲದೊಂದಿಗೆ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಮತದಾರರು (ಅಹಿಂದ) ಒಗ್ಗಟ್ಟಾಗಿ ಕಾಂಗ್ರೆಸ್ ಕೈಹಿಡಿದಿರುವುದು ಈ ದಾಖಲೆ ಮಟ್ಟದ ಅಂತರಕ್ಕೆ ಪ್ರಮುಖ ಕಾರಣವಾಗಿದೆ.

ಬಿಜೆಪಿಯ ಹಿನ್ನಡೆಗೆ ಕಾರಣಗಳೇನು?

ಬಿಜೆಪಿಯ ಅನುಭವಿ ನಾಯಕ ವೀರಣ್ಣ ಚರಂತಿಮಠ ಅವರು ಪ್ರಬಲ ಪೈಪೋಟಿ ನೀಡಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಉಪಚುನಾವಣೆಗಳಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಅನುಕೂಲವಿರುತ್ತದೆ ಎಂಬ ಮಾತು ಈ ಬಾರಿಯೂ ನಿಜವಾಗಿದೆ. ಬಿಜೆಪಿಯು ಅಭಿವೃದ್ಧಿ ಮತ್ತು ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದರೂ, ಮೇಟಿಯವರ ಮೇಲಿದ್ದ ಅನುಕಂಪದ ಅಲೆಯು ಕೆಲಸ ಮಾಡಿದೆ. ಕಾಂಗ್ರೆಸ್‌ನ ಸಚಿವರ ದಂಡಿನ ಮುಂದೆ ಬಿಜೆಪಿಯ ಸ್ಥಳೀಯ ನಾಯಕರ ಹೋರಾಟ ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಲಿಲ್ಲ.

Read More
Next Story