
'2028ಕ್ಕೆ ನಾಗೇಂದ್ರ ಎಲ್ಲಿದ್ದಾರೋ ಅಲ್ಲೇ ನಾನೂ ನಿಲ್ಲುವೆ': ಶ್ರೀರಾಮುಲು ಸವಾಲು
ಒಂದೇ ವಿಚಾರಕ್ಕಾಗಿ ಎರಡು ಬಾರಿ ರಾಜೀನಾಮೆ ನೀಡಿರುವ ಉದಾಹರಣೆ ಇದೇ ಮೊದಲು. ಭ್ರಷ್ಟಾಚಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಇದೀಗ ಬಳ್ಳಾರಿಯ ಇಬ್ಬರು ಪ್ರಬಲ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು ಅವರು ಸಚಿವ ಬಿ. ನಾಗೇಂದ್ರ ಅವರಿಗೆ 2028ರ ವಿಧಾನಸಭಾ ಚುನಾವಣೆಯ ಸವಾಲನ್ನು ಎಸೆದಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ನಾಗೇಂದ್ರ ಅವರ ಭ್ರಷ್ಟಾಚಾರದ ಆರೋಪಗಳು ಮತ್ತು ಅವರ ಇತ್ತೀಚಿನ ಕಣ್ಣೀರಿನ ರಾಜಕಾರಣದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಬಿ. ನಾಗೇಂದ್ರ ಅವರು ನೀಡಿದ ಸವಾಲನ್ನು ಸ್ವೀಕರಿಸಿರುವ ಶ್ರೀರಾಮುಲು, 2028ರ ಚುನಾವಣೆಗೆ ನಾನು ಈಗಲೇ ಸಿದ್ಧ. ನಾಗೇಂದ್ರ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೋ, ನಾನು ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಭ್ರಷ್ಟಾಚಾರಿಗಳ ವಿರುದ್ಧ ಹೋರಾಡುವುದು ನಮ್ಮ ಕೆಲಸ. ಇವರು ಭ್ರಷ್ಟಾಚಾರದ ಹಣದಿಂದ ಲೋಕಸಭೆ ಚುನಾವಣೆಯನ್ನು ಗೆದ್ದಿದ್ದಾರೆ. ಸಂಸದ ತುಕಾರಾಮ್, ಖರ್ಗೆ ಅಳಿಯ ಸೇರಿದಂತೆ ಹಲವರು ಇದೇ ಅಕ್ರಮ ಹಣದ ಬಲದಿಂದ ಗೆಲುವು ಸಾಧಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಅವರಿಗೆ ಇಷ್ಟೊಂದು ಅವಸರ ಯಾಕೆ? ಜನತಾ ನ್ಯಾಯಾಲಯಕ್ಕೆ ಬನ್ನಿ ಎಂದು ಸವಾಲು ಹಾಕುತ್ತಿದ್ದಾರೆ. ಚುನಾವಣೆ ಬಂದಾಗ ಜನರೇ ತೀರ್ಪು ನೀಡುತ್ತಾರೆ. ನನಗೆ ಜನತಾ ನ್ಯಾಯಾಲಯ ಈಗಾಗಲೇ ತೀರ್ಪು ಕೊಟ್ಟಿದೆ, ಸೋತಿದ್ದೇನೆ ಹೌದು. ಆದರೆ, ಮುಂದಿನ ದಿನಗಳಲ್ಲಿ ಮತ್ತೆ ಜನ ನನ್ನ ಕೈ ಹಿಡಿಯುತ್ತಾರೆ ಎಂದು ಶ್ರೀರಾಮುಲು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಒಂದೇ ವಿಚಾರಕ್ಕೆ ಎರಡು ಬಾರಿ ರಾಜೀನಾಮೆ
ನಾಗೇಂದ್ರ ಅವರ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿದ ಶ್ರೀರಾಮುಲು, ಒಂದೇ ವಿಚಾರಕ್ಕಾಗಿ ಎರಡು ಬಾರಿ ರಾಜೀನಾಮೆ ನೀಡಿರುವ ಉದಾಹರಣೆ ಇದೇ ಮೊದಲು. ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಈ ಹಣ ಲೋಕಸಭೆ ಚುನಾವಣೆಯಲ್ಲಿ ಬಳಕೆಯಾಗಿದೆ. ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಅಥವಾ ಉಪಮುಖ್ಯಮಂತ್ರಿ ಡಿಕೆಶಿ ಆಗಲಿ ನಾಗೇಂದ್ರ ಅವರನ್ನು ಸಮರ್ಥನೆ ಮಾಡಿಕೊಳ್ಳಲಿಲ್ಲ. ಅವರಿಗೂ ಈ ಚರ್ಚೆ ಮುಂದುವರಿಯುವುದು ಬೇಕಿರಲಿಲ್ಲ, ಹಾಗಾಗಿಯೇ ನಾಗೇಂದ್ರ ಅವರನ್ನು ಬಲಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಮನುವಾದಿ ಟೀಕೆಗೆ ತಿರುಗೇಟು
ನಾಗೇಂದ್ರ ಅವರು ಕಣ್ಣೀರು ಹಾಕುತ್ತಾ ತಮ್ಮನ್ನು ಟೀಕಿಸಲು ಮನುವಾದಿಗಳು ಕಾರಣ ಎಂದು ಹೇಳಿದ್ದಕ್ಕೆ ಸಿಡಿದೆದ್ದ ಶ್ರೀರಾಮುಲು, ಇದೇ ಮನುವಾದಿಗಳು ಅಲ್ವಾ ನಾಗೇಂದ್ರಗೆ ವಿಧಾನಸೌಧ ಪರಿಚಯ ಮಾಡಿಸಿದ್ದು? 2013ರಲ್ಲಿ ನೀವು ಗೆದ್ದಾಗ ಯಾರು ಜೊತೆಗಿದ್ದರು? ಕಣ್ಣೀರು ಹಾಕುವ ನಾಟಕವನ್ನು ನಿಲ್ಲಿಸಿ, ನಿಮ್ಮನ್ನು ಮಂತ್ರಿ ಸ್ಥಾನದಿಂದ ನಾವು ಕೆಳಗಿಳಿಸಿಲ್ಲ, ನಿಮ್ಮ ಕರ್ಮವೇ ನಿಮ್ಮನ್ನು ಕಾಡುತ್ತಿದೆ. ಚಂದ್ರಶೇಖರ್ ಎಂಬ ಬಡ ಅಧಿಕಾರಿಯ ಕುಟುಂಬದ ಕಣ್ಣೀರು ನಿಮಗೆ ಶಾಪವಾಗಿ ಕಾಡುತ್ತಿದೆ. ಆ ಕುಟುಂಬಕ್ಕೆ ನೆರವಾದರಾ? ಅವರ ನೋವನ್ನು ಕೇಳಿದರಾ? ನನಗೆ 'ಅಣ್ಣ' ಎಂದು ಕರೆಯಬೇಡ, ನಿನ್ನಂತಹ ಭ್ರಷ್ಟರಿಗೆ ಅಣ್ಣನಾಗುವ ಯೋಗ್ಯತೆ ನನಗಿಲ್ಲ ಎಂದು ಕಟುವಾಗಿ ತಿಳಿಸಿದರು.
ಸಂವಿಧಾನದ ಪುಸ್ತಕ - ಮಂಡಕ್ಕಿ ಪೊಟ್ಟಣವೇ?
ನಾಗೇಂದ್ರ ಅವರು ಸಂವಿಧಾನ ಪುಸ್ತಕ ಹಿಡಿದು ಓಡಾಡುವುದನ್ನು ವಿಡಂಬಿಸಿದ ಶ್ರೀರಾಮುಲು, ಸಂವಿಧಾನಕ್ಕೆ ಅದರದೇ ಆದ ಘನತೆ ಇದೆ. ಅದನ್ನು ಹಾದಿಬೀದಿಯಲ್ಲಿ ಮಂಡಕ್ಕಿ ಕಟ್ಟುವ ಪೇಪರ್‌ನಂತೆ ಹಿಡಿದು ಓಡಾಡುತ್ತಿದ್ದೀಯಾ? ತಪ್ಪು ಮಾಡಿ ಜೈಲಿಗೆ ಹೋಗಿ ಬಂದಿದ್ದೀಯಾ, ಈಗ ಮತ್ತೆ ಜೈಲಿಗೆ ಹೋಗುವ ದಿನಗಳು ಹತ್ತಿರವಾಗಿವೆ ಎಂದು ಭವಿಷ್ಯ ನುಡಿದರು. ನಾಗೇಂದ್ರ ಅವರ ರಾಜೀನಾಮೆಗೆ ಮುಖ್ಯ ಕಾರಣ ಸೂಟ್‌ಕೇಸ್ ಹಂಚಿಕೆ ಎಂದು ಆರೋಪಿಸಿದ ಶ್ರೀರಾಮುಲು, ನೀನು ತುಂಬಾ ಪ್ರಾಮಾಣಿಕನಲ್ಲ. ಸೂಟ್‌ಕೇಸ್ ಕೊಟ್ಟು ಮಂತ್ರಿ ಆದವನು ನೀನು. ಈಗ ಆ ಸೂಟ್‌ಕೇಸ್‌ನ ವ್ಯಾಲಿಡಿಟಿ ಮುಗಿದಿದೆ, ತೂಕ ಕಮ್ಮಿ ಆಗಿದೆ, ಅದಕ್ಕೆ ನಿನ್ನನ್ನು ತೆಗೆದಿದ್ದಾರೆ. ಬಳ್ಳಾರಿ ಚುನಾವಣೆಯಲ್ಲಿ ಅಕ್ರಮ ಹಣ ಹಂಚಿದ್ದೀಯಾ, ಎಲ್ಲರಿಗೂ ಹಣದ ಆಮಿಷ ಒಡ್ಡಿದ್ದೀಯಾ, ಅದಕ್ಕೆ ನಿನ್ನನ್ನು ಹೈಕಮಾಂಡ್ ಕಡೆಗಣಿಸಿದೆ ಎಂದು ಲೇವಡಿ ಮಾಡಿದರು.
ದಲಿತರ ವಿಚಾರವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ಎಸ್‌ಟಿ ಸಮುದಾಯಕ್ಕೆ ಶೇ.7 ಮೀಸಲಾತಿಯನ್ನು ನೀಡಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಅದನ್ನು ಶೇ.3ಕ್ಕೆ ಇಳಿಸಿತು. ದಲಿತರನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಎಂದು ಭಾವಿಸಿದೆ. ದಲಿತರ ಶಾಪದಿಂದಲೇ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ಭವಿಷ್ಯ ನುಡಿದರು.
ನೂರು ದಿನಗಳ ನಾಟಕ
ನಾಗೇಂದ್ರ ಅವರ ನಡವಳಿಕೆಯನ್ನು ಟೀಕಿಸಿದ ಅವರು, ನಿನ್ನದು ನೂರು ದಿನಗಳ ನಾಟಕ. ದಲಿತ ಸಮುದಾಯದ ಹಣವನ್ನು ಲೂಟಿ ಮಾಡಿ, ಈಗ ಮಂತ್ರಿಗಿರಿ ಹೋದಾಗ ಮೊಸಳೆ ಕಣ್ಣೀರು ಸುರಿಸುತ್ತಿದ್ದೀಯಾ. ನಿಮ್ಮ ಪಾರ್ಟಿಯವರೇ ನಿಮ್ಮನ್ನು ಕೈಬಿಟ್ಟಾಗ, ನಮ್ಮ ಮೇಲೆ ಆರೋಪ ಮಾಡುವುದು ನಿನ್ನ ಹೇಡಿತನ. ಭ್ರಷ್ಟಾಚಾರದ ಆರೋಪಗಳನ್ನು ಒಪ್ಪಿಕೋ, ಕಣ್ಣೀರು ಹಾಕಿ ಜನರನ್ನು ದಾರಿ ತಪ್ಪಿಸಬೇಡ ಎಂದು ಎಚ್ಚರಿಕೆ ನೀಡಿದರು.

