
ಒಂದೇ ಹಗರಣಕ್ಕೆ ಎರಡು ಬಾರಿ ರಾಜೀನಾಮೆ..! ಬಿ. ನಾಗೇಂದ್ರ ಸಚಿವ ಸ್ಥಾನ ತ್ಯಾಗ
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಿಶಿಷ್ಟವಾಗಿದೆ. ಒಂದೇ ಹಗರಣಕ್ಕೆ ಎರಡು ಬಾರಿ ರಾಜೀನಾಮೆ ನೀಡುವಂತಾಗಿದೆ.
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಬಿ. ನಾಗೇಂದ್ರ ಅವರು ಎರಡನೇ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿ. ನಾಗೇಂದ್ರ ಅವರ ಈ ರಾಜೀನಾಮೆ ವಿಶಿಷ್ಟವಾಗಿದೆ. ಒಂದೇ ಹಗರಣಕ್ಕೆ ಎರಡು ಬಾರಿ ರಾಜೀನಾಮೆ ನೀಡುವಂತಾಗಿದೆ. ವಾಲ್ಮೀಕಿ ನಿಗಮದ ಹಗರಣವು ಮೇ 2024ರಲ್ಲಿ ಬೆಳಕಿಗೆ ಬಂದಾಗ, ತೀವ್ರ ಒತ್ತಡಕ್ಕೆ ಮಣಿದು ಜೂನ್ 6, 2024ರಂದು ಅವರು ಮೊದಲ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ನಡೆಯುತ್ತಿದ್ದಾಗ, ಕೆಲವು ತಿಂಗಳುಗಳ ನಂತರ ಅಂದರೆ ಆಗಸ್ಟ್ 3, 2026ರಂದು ಅವರು ಮತ್ತೆ ಸಚಿವ ಸಂಪುಟವನ್ನು ಸೇರಿದರು. ಈ ಮರುನೇಮಕವು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಅಸ್ತ್ರವಾಯಿತು. ಸದನದಲ್ಲಿ ಪ್ರತಿಭಟನೆ, ಪಾದಯಾತ್ರೆ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾದವು. ಅಂತಿಮವಾಗಿ, ಹೈಕಮಾಂಡ್‌ನ ಸೂಚನೆ ಮತ್ತು ರಾಜ್ಯದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯನ್ನು ತಡೆಯಲು ನಾಗೇಂದ್ರ ಅವರು ಎರಡನೇ ಬಾರಿಗೆ ರಾಜೀನಾಮೆ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಏನಿದು ವಾಲ್ಮೀಕಿ ನಿಗಮದ ಹಗರಣ?
ಈ ಹಗರಣವು ಕೇವಲ ಒಂದು ಇಲಾಖೆಯ ಆರ್ಥಿಕ ಅವ್ಯವಹಾರವಲ್ಲ, ಇದು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿದ್ದ ಬಡವರ ಹಣಕ್ಕೆ ಬಿದ್ದ ಕನ್ನ. ಮೇ 2024ರಲ್ಲಿ ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರನ್ ಪಿ. ಅವರು ಆತ್ಮಹತ್ಯೆ ಮಾಡಿಕೊಂಡಾಗ ಈ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂತು. ಅವರು ಬರೆದಿದ್ದ ಡೆತ್ ನೋಟ್‌ನಲ್ಲಿ ನಿಗಮದ ಹಣಕಾಸಿನ ದುರ್ಬಳಕೆಯ ಬಗ್ಗೆ ಸ್ಪಷ್ಟ ಉಲ್ಲೇಖವಿತ್ತು. ತನಿಖೆಯ ವೇಳೆ, ನಿಗಮದ ಒಟ್ಟು 187 ಕೋಟಿ ರೂಪಾಯಿ ಅನುದಾನದಲ್ಲಿ ಸುಮಾರು 88 ರಿಂದ 89.6 ಕೋಟಿ ರೂಪಾಯಿಗಳನ್ನು ಅನಧಿಕೃತವಾಗಿ ವರ್ಗಾಯಿಸಿರುವುದು ಪತ್ತೆಯಾಯಿತು. ಈ ಹಣವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ. ರಸ್ತೆ ಶಾಖೆಯಲ್ಲಿನ ನಕಲಿ ದಾಖಲೆಗಳು ಮತ್ತು ನಕಲಿ ಸಹಿಗಳನ್ನು ಬಳಸಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಸರ್ಕಾರಿ ಹಣವು ದಲ್ಲಾಳಿಗಳ ಮತ್ತು ಖಾಸಗಿ ವ್ಯಕ್ತಿಗಳ ಖಾತೆಗೆ ಹರಿದುಹೋಗಿದ್ದು, ಈ ಆರ್ಥಿಕ ವಂಚನೆಯು ರಾಜ್ಯಾದ್ಯಂತ ಜನಸಾಮಾನ್ಯರನ್ನು ಬೆಚ್ಚಿಬೀಳಿಸಿತು.
ಹಗರಣದ ಹಿಂದಿನ ರಾಜಕೀಯ ಆಟ
ಚಂದ್ರಶೇಖರನ್ ಅವರ ಸಾವಿನ ಬಳಿಕ, ನಿಗಮದಲ್ಲಿ ನಡೆದಿರುವ ಈ ಭ್ರಷ್ಟಾಚಾರದ ಜಾಲವು ಸಚಿವರ ಕಚೇರಿಯವರೆಗೂ ತಲುಪಿದೆ ಎಂಬ ಆರೋಪ ಕೇಳಿಬಂತು. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ನೇರ ಪಾತ್ರವಿದೆ ಎಂದು ಆರೋಪಿಸಿ ಸದನದಲ್ಲಿ ಧರಣಿ ನಡೆಸಿದವು. ಸರ್ಕಾರದ ಮೇಲೆ ನೈತಿಕ ಹೊಣೆಗಾರಿಕೆಯ ಒತ್ತಡ ಬಿದ್ದಿತು. ರಾಜ್ಯ ಸರ್ಕಾರವು ಸಿಐಡಿ ಮತ್ತು ಎಸ್‌ಐಟಿ ತನಿಖೆಗೆ ಆದೇಶಿಸಿದರೂ, ವಿಪಕ್ಷಗಳು ಸಿಬಿಐ ತನಿಖೆಗೆ ಪಟ್ಟು ಹಿಡಿದವು. ಒಂದೆಡೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಜಕೀಯವಾಗಿ ಬಿಜೆಪಿ ಈ ವಿಷಯವನ್ನು ರಾಜ್ಯವ್ಯಾಪಿ ಜನರ ಬಳಿಗೆ ಕೊಂಡೊಯ್ಯಿತು. ಇಡಿ ತನಿಖೆಯು ನಾಗೇಂದ್ರ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತು. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ಸರ್ಕಾರಕ್ಕೆ ಮುಜುಗರ ತಪ್ಪಿದ್ದಲ್ಲ ಎಂಬ ಸಂದೇಶ ಹೈಕಮಾಂಡ್‌ಗೆ ರವಾನೆಯಾಗಿತ್ತು. ಹೀಗಾಗಿ ರಾಜೀನಾಮೆ ನೀಡಬೇಕಾಯಿತು. ಎರಡನೇ ಬಾರಿ ಸಚಿವರಾದಲೂ ಆರಂಭದಿಂದಲೂ ಪ್ರತಿಪಕ್ಷ ಬಿಜೆಪಿ ಹೋರಾಟ ನಡೆಸಿತು. ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವ ಎಚ್ಚರಿಕೆ ರಾಜಕೀಯವಾಗಿ ಗಂಭೀರ ಸ್ವರೂಪ ಪಡೆದುಕೊಂಡಿತು. ಹೀಗಾಗಿ ಎರಡನೇ ಬಾರಿಗೂ ರಾಜೀನಾಮೆ ನೀಡಬೇಕಾಯಿತು.
ನಾಗೇಂದ್ರ ಅವರ ರಾಜೀನಾಮೆಯ ಪರಿಣಾಮ
ನಾಗೇಂದ್ರ ಅವರ ರಾಜೀನಾಮೆಯು ಸರ್ಕಾರವನ್ನು ತಾತ್ಕಾಲಿಕವಾಗಿ ರಕ್ಷಿಸಿದರೂ, ಪ್ರಕರಣದ ತನಿಖೆ ಮಾತ್ರ ಈಗ ಹೊಸ ತಿರುವು ಪಡೆದುಕೊಂಡಿದೆ. ಅವರು ರಾಜೀನಾಮೆಯ ಸಂದರ್ಭದಲ್ಲಿ "ನಾನು ನಿರಪರಾಧಿ, ಸತ್ಯ ಶೀಘ್ರವೇ ಹೊರಬರುತ್ತದೆ" ಎಂದು ಸವಾಲು ಹಾಕಿದ್ದರೂ, ರಾಜಕೀಯ ವಲಯದಲ್ಲಿ ಇದನ್ನು ಒಂದು ದೊಡ್ಡ ಹಿನ್ನಡೆ ಎಂದು ನೋಡಲಾಗುತ್ತಿದೆ. ಒಂದೇ ಹಗರಣಕ್ಕೆ ಎರಡು ಬಾರಿ ರಾಜೀನಾಮೆ ನೀಡಿರುವುದು, ನಾಗೇಂದ್ರ ಅವರ ರಾಜಕೀಯ ಭವಿಷ್ಯದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟುಹಾಕಿದೆ.

