ಅಯೋಧ್ಯೆ ರಾಮ ಮಂದಿರದ ಹುಂಡಿ ಅಕ್ರಮ: ಭಕ್ತರ ಅಚಲ ಶ್ರದ್ಧೆ ಹಾಗೂ ರಾಜಕೀಯ ಸಮರ
x

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹುಂಡಿ ಕಾಣಿಕೆಯಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರದ ಆರೋಪ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

ಅಯೋಧ್ಯೆ ರಾಮ ಮಂದಿರದ ಹುಂಡಿ ಅಕ್ರಮ: ಭಕ್ತರ ಅಚಲ ಶ್ರದ್ಧೆ ಹಾಗೂ ರಾಜಕೀಯ ಸಮರ

ಅಯೋಧ್ಯೆ ರಾಮ ಮಂದಿರದ ಕಾಣಿಕೆ ಹಣ ದುರುಪಯೋಗ ಆರೋಪ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಎಸ್‌ಐಟಿ ತನಿಖೆ ಚುರುಕಾಗಿದ್ದರೂ ಭಕ್ತರು ಮಾತ್ರ ರಾಮನ ಮೇಲಿನ ಭಕ್ತಿ ಸದಾ ಅಚಲ ಮತ್ತು ಅಜರಾಮರ ಎಂದು ಸ್ಪಷ್ಟಪಡಿಸಿದ್ದಾರೆ.


Click the Play button to hear this message in audio format

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹುಂಡಿ ಕಾಣಿಕೆಯಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರದ ಆರೋಪ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಎಸ್‌ಐಟಿ ರಚಿಸಿ ಎಂಟು ಮಂದಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದರೂ, ಈ ಘಟನೆ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಆದರೆ, ಈ ಹಗರಣದಿಂದ ಭಕ್ತರ ಶ್ರದ್ಧೆಗೆ ಯಾವುದೇ ಧಕ್ಕೆ ಬಂದಿಲ್ಲ ಎಂದು ಕರ್ನಾಟಕದ ರಾಮಭಕ್ತರು ಸ್ಪಷ್ಟಪಡಿಸಿದ್ದಾರೆ.

ರಾಮ ಮಂದಿರದಲ್ಲಿ ಅಕ್ರಮ ನಡೆದಿರುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಮುಗಿಬಿದ್ದಿವೆ. ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರು ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕುತ್ತಾ, ಐದು ನೂರು ವರ್ಷದ ಕನಸು ನನಸು ಮಾಡಿದ್ದೀವಿ ಅಂತ ಹೇಳಿ ಐದೇ ವರ್ಷದಲ್ಲಿ ಐದು ನೂರು ಕೋಟಿ ಲೂಟಿ ಹೊಡೆದುಬಿಟ್ರಲ್ಲಪ್ಪ ನೀವು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, 'ನಾ ಖಾವುಂಗಾ, ನಾ ಖಾನೆ ದೂಂಗಾ' ಅಂತ ಹೇಳಿದವರು ಇವತ್ತು ರಾಮನ ಹೆಸರಲ್ಲೂ ನುಂಗಿದ್ದಾರಲ್ಲ, ಇದರ ಬಗ್ಗೆ ಪ್ರಧಾನಮಂತ್ರಿಯವರು ಯಾವಾಗ 'ಮನ್ ಕಿ ಬಾತ್' ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಹಾಗೂ ಇತರ ಹಿಂದುತ್ವವಾದಿ ನಾಯಕರು ತಿರುಗೇಟು ನೀಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲು ಈಗಾಗಲೇ ಎಸ್‌ಐಟಿ ರಚಿಸಲಾಗಿದೆ ಎಂದು ಉತ್ತರಿಸಿರುವ ಅವರು, ಯಾರು ರಾಮನ ದೇವಾಲಯ ನಿರ್ಮಾಣ ಮಾಡೋದಕ್ಕೆ ವಿರೋಧ ಮಾಡಿದ್ರೋ, ಯಾರು ರಾಮನಿಗೆ ದೇಣಿಗೆ ಕೊಟ್ಟಿಲ್ಲವೋ, ನಿಮಗೆ ದೇಣಿಗೆ ಲೆಕ್ಕಾಚಾರ ಕೇಳುವ ಯಾವ ಅರ್ಹತೆಯೂ ಇಲ್ಲ ಮತ್ತು ಇದು ನಿಮಗೆ ಸಂಬಂಧಿಸಿದ್ದಲ್ಲ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ರಾಜಕೀಯ ವಿವಾದದ ಮಧ್ಯೆಯೂ ಕರ್ನಾಟಕದಿಂದ ಅಯೋಧ್ಯೆಗೆ ಹೋಗುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. ವಿಶೇಷವಾಗಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ದಾವಣಗೆರೆಯಿಂದ ನಿತ್ಯ ಸಾವಿರಾರು ಭಕ್ತರು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಶ್ರೀರಾಮಚಂದ್ರ ತನ್ನ ಮಾತಿಗೋಸ್ಕರ ಕಾಡಿಗೆ ಹೋಗಿ ಹನ್ನೆರಡು ವರ್ಷಗಳ ವನವಾಸ ಮಾಡಿದವನು, ಭಕ್ತರ ಕಾಣಿಕೆಯಿಂದಲೇ ಭವ್ಯ ಮಂದಿರ ಇವಾಗ ಎದ್ದು ನಿಂತಿದೆ ಎಂದು ಸ್ಮರಿಸಿದ್ದಾರೆ. ಇತ್ತೀಚಿಗೆ ಕೆಲವು ಕಿಡಿಗೇಡಿಗಳು ಅಲ್ಲಿನ ಹಣದ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಮಾತು ಬರುತ್ತಿದೆ ಮತ್ತು ಸರ್ಕಾರ ತನಿಖೆಗೂ ಆದೇಶಿಸಿದೆ, ಆದರೆ ಶ್ರೀರಾಮ ಮತ್ತು ಅಯೋಧ್ಯೆಯ ಬಗ್ಗೆ ಇರ್ತಕ್ಕಂತಹ ಭಕ್ತಿ ಎಂದು ನಶಿಸಿ ಹೋಗುವುದಿಲ್ಲ, ಅದು ಅಜರಾಮರ ಎಂದು ಭಕ್ತರು ಮರುಪ್ರಶ್ನಿಸಿದ್ದಾರೆ.

ಮತ್ತೊಬ್ಬ ಭಕ್ತರು ಪ್ರತಿಕ್ರಿಯಿಸಿ, ಯಾರಿಗೋ ದುಡ್ಡಿನ ಅವಶ್ಯಕತೆಯಿಂದ ಅಲ್ಲಿನ ಕೆಲಸ ಮಾಡುತ್ತಿದ್ದಂತಹ ಸಿಬ್ಬಂದಿಗಳು ಒಂದಷ್ಟು ಹಣವನ್ನ ತೆಗೆದುಕೊಂಡಿರಬಹುದು, ಆದರೆ ಅದು ನಮ್ಮ ನಂಬಿಕೆಗೆ ಯಾವುದೇ ರೀತಿಯಲ್ಲೂ ಹೊಣೆಗಾರಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಮನ ಮೇಲಿನ ಭಕ್ತಿ ನಮಗೆ ಇಂದಿನದಲ್ಲ, ಶತಮಾನಗಳಿಂದ ನಮ್ಮ ಪೂರ್ವಿಜಕರೆಲ್ಲರೂ ರಾಮನ ಭಕ್ತರಾಗಿದ್ದರು, ಹೀಗಾಗಿ ರಾಮನ ಮೇಲಿನ ನಂಬಿಕೆ ಇನ್ನು ಹೆಚ್ಚಾಗುತ್ತಲೇ ಇರುತ್ತದೆ ಹೊರತು ಕಡಿಮೆ ಎಂದಿಗೂ ಆಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಒಟ್ಟಾರೆಯಾಗಿ, ಈ ಪ್ರಕರಣದಿಂದ ರಾಮನ ಮೇಲಿನ ಜನರ ಭಕ್ತಿಗೇನೂ ಧಕ್ಕೆಯಾಗಿಲ್ಲವಾದರೂ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಭಕ್ತರು ಬಯಸುತ್ತಿದ್ದಾರೆ. ಕೆಲವು ಭಕ್ತರು ಇನ್ನು ಮುಂದೆ ತಮ್ಮ ಭಕ್ತಿಯ ಜೊತೆಗೆ ರಾಮನಿಗೆ ಬರುವಂತ ದುಡ್ಡಿನ ಲೆಕ್ಕವನ್ನು ಕೂಡ ಕೇಳೋದಕ್ಕೆ ಮುಂದಾಗಿದ್ದಾರೆ. ರಾಮನ ಪಾದಕ್ಕೆ ಭಕ್ತರು ಅರ್ಪಿಸುವಂತಹ ದುಡ್ಡು ಮತ್ತು ದೇಣಿಗೆಗಳ ಲೆಕ್ಕ ಸಂಪೂರ್ಣ ಪಾರದರ್ಶಕವಾಗಲಿ ಹಾಗೂ ರಾಮ ಎಷ್ಟು ಆದರ್ಶವಾಗಿದ್ದನೋ, ಅಲ್ಲಿನ ಹಣಕಾಸಿನ ವ್ಯವಸ್ಥೆಗಳೂ ಅಷ್ಟೇ ಆದರ್ಶಪ್ರಾಯ ಮತ್ತು ಪಾರದರ್ಶಕವಾಗಿರಲಿ ಎಂಬುದು ಈಗ ಪ್ರತಿಯೊಬ್ಬ ರಾಮಭಕ್ತನ ಆಶಯವಾಗಿದೆ.

Read More
Next Story